Advertisement
ಪ್ರತಿ ವರ್ಷ ಮಾರ್ಚ್ ಆರಂಭದಲ್ಲಿ ಬಜೆಯಲ್ಲಿ ನೀರು ಬರಿದಾಗಿ ಎ.11ರ ಸುಮಾರಿಗೆ ಸ್ವರ್ಣಾ ನದಿಯಲ್ಲಿ ಪಂಪಿಂಗ್ ಕೆಲಸ ಪ್ರಾರಂಭಿಸಲಾಗುತ್ತಿತ್ತು. ಮೇ ಆರಂಭದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಪರಿಪಾಠ ಹಿಂದಿ ನಿಂದಲೂ ಇತ್ತು. ಆದರೆ ಈ ಬಾರಿ ಅಂತಹ ಸ್ಥಿತಿ ಇಲ್ಲ. ಜನವರಿಯಿಂದ ಎಪ್ರಿಲ್‌ವರೆಗೆ ಬಿಟ್ಟು ಬಿಟ್ಟು ಸುರಿದ ಮಳೆಯಿಂದ ಜಲಮೂಲಗಳು ಚೇತರಿಸಿವೆ. ಮುಂದಿನ ತಿಂಗಳು ಸಮಯಕ್ಕೆ ಸರಿಯಾಗಿ ಮುಂಗಾರು ಪ್ರವೇಶವಾದರೆ ಈ ಬಾರಿ ನಗರಕ್ಕೆ ನೀರಿನ ಸಮಸ್ಯೆ ಕಾಡದು.
Related Articles
Advertisement
ನಗರದಲ್ಲಿ ಸುಮಾರು 12,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕೆ ಘಟಕ, 570 ಫ್ಲ್ಯಾಟ್‌ಗಳಿವೆ; ಸುಮಾರು 1,000 ವಾಣಿಜ್ಯ ಸಂಸ್ಥೆಗಳಿವೆ; ಸುಮಾರು 600 ಹೊಟೇಲ್, 40 ಲಾಡ್ಜ್ಗಳಿವೆ. ಸರಕಾರದ ಪ್ರಕಾರ ಪ್ರತಿ ಪ್ರಜೆಗೆ ದಿನಕ್ಕೆ 135 ಲೀ. ನೀರು ಒದಗಿಸಬೇಕು. ನಗರ ಪ್ರದೇಶದ ಶೇ. 90ರಷ್ಟು ವಾಣಿಜ್ಯ ಕಟ್ಟಡಗಳು ನಗರಸಭೆಯ ನೀರನ್ನೇ ಅವಲಂಬಿಸಿರುವುದರಿಂದ ಬೇಸಗೆಯಲ್ಲಿ ಹೊಟೇಲ್‌ಗಳಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚಾಗಿದೆ. ಈ ಬಾರಿ ನಳ್ಳಿ ನೀರು ಸಂಪರ್ಕ 19,200ಕ್ಕೆ ಏರಿಕೆಯಾಗಿದೆ.
70 ದಿನಗಳಿಗೆ ಸಾಕು :
ಪ್ರಸ್ತುತ ಬಜೆಯಲ್ಲಿ ಸಂಗ್ರಹವಾದ 5.71 ಮೀಟರ್ ನೀರಿನಲ್ಲಿ 1.5 ಮೀಟರ್ ಡೆಡ್ ಸ್ಟೋರೆಜ್ ಹೊರತು ಪಡಿಸಿದರೆ, ಸಂಗ್ರಹವಿರುವ 4.21 ಮೀಟರ್ ನೀರಿನಲ್ಲಿ ಇಡೀ ನಗರಕ್ಕೆ 70 ದಿನಗಳ ವರೆಗೆ ನೀರು ಯಾವುದೇ ವ್ಯತ್ಯಯವಿಲ್ಲದೆ ಪೂರೈಸಬಹುದು. ನಗರಸಭೆ 2020ರಲ್ಲಿ ಹೂಳೆತ್ತಲು 13 ಲ.ರೂ. ವ್ಯಯ ಮಾಡಿತ್ತು. ಆದರೆ ಟ್ಯಾಂಕರ್ ನೀರು ನೀಡಿರಲಿಲ್ಲ. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಬಜೆ, ಶಿರೂರಿನಲ್ಲಿ ಸ್ಯಾಂಡ್ ಬ್ಯಾಗ್ ಬಳಸಿ ನೀರನ್ನು ಸಂಗ್ರಹಿಸಿ ಇಡಲಾಗಿದೆ ಎಂದು ನಗರಸಭೆ ಎಇಇ ಮೋಹನ್ ರಾಜ್ ತಿಳಿಸಿದ್ದಾರೆ.
ಪ್ರತಿದಿನ 24 ದಶಲಕ್ಷ ಲೀಟರ್ ನೀರು : ಬಜೆಯಲ್ಲಿ 1972ರ ಜನಸಂಖ್ಯೆ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಅಣೆಕಟ್ಟು ನಿರ್ಮಿಸಲಾಗಿತ್ತು. ಸ್ವರ್ಣಾ ನದಿಯಿಂದ 2 ಹಂತಗಳಲ್ಲಿ ನಗರಕ್ಕೆ ನೀರು ಸರಬರಾಜಾಗುತ್ತಿದೆ. ಬಜೆ ಅಣೆಕಟ್ಟು ನಿರ್ಮಾಣವಾದ ಬಳಿಕ ಮೊದಲ ಹಂತದಲ್ಲಿ ಪ್ರತಿದಿನ 9 ದಶಲಕ್ಷ ಲೀ. ನೀರು ಸರಬರಾಜು ಆಗಿತ್ತು. 2006ರಲ್ಲಿ ಆರಂಭಗೊಂಡ ಎರಡನೇ ಹಂತದ ಯೋಜನೆಯಲ್ಲಿ ಪ್ರತಿದಿನ 24 ದಶಲಕ್ಷ ಲೀ. ನೀರು ಸರಬರಾಜು ಮಾಡುವ ಯೋಜನೆಯಾಗಿದೆ.
ಪ್ರಸ್ತುತ ಬಜೆಯಲ್ಲಿ ಸಂಗ್ರಹವಾಗಿರುವ ನೀರು ನಗರಕ್ಕೆ 70ದಿನಗಳ ಕಾಲ ಪೂರೈಕೆ ಮಾಡಬಹುದು. ಜನವರಿಯಿಂದ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಕಡುಬೇಸಗೆಯಲ್ಲಿಯಲ್ಲಿ ಸಹ ಒಳಹರಿವು ಇದೆ. -ಮೋಹನ್ ರಾಜ್, ಎಎಇ ನಗರಸಭೆ, ಉಡುಪಿ