ಉಡುಪಿ: ನಗರಸಭೆ ವ್ಯಾಪ್ತಿ ಕುಡಿಯುವ ನೀರು ಸಂಬಂಧಿಸಿ ಇನ್ನು 10 ದಿನ ಮಾತ್ರ ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರು ಲಭ್ಯವಿದೆ. ಪ್ರಸ್ತುತ ಡ್ಯಾಂನಲ್ಲಿ 0.7 ಮೀ. (ಎರಡು ಅಡಿ) ಮಾತ್ರ ನೀರಿನ ಪ್ರಮಾಣ ಲಭ್ಯವಿದೆ. ಇಷ್ಟು ಪ್ರಮಾಣದ ನೀರನ್ನು ರೇಶನಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನೂ 10 ದಿನಕ್ಕೆ ವಿತರಿಸಬಹುದಾಗಿದೆ. ಪ್ರಸ್ತುತ ಪುತ್ತಿಗೆ ಪ್ರದೇಶದ ಮೇಲ್ಭಾಗ ಮತ್ತು ಕೆಳಭಾಗದ ಎರಡು ಗುಂಡಿಗಳಲ್ಲಿ ನೀರು ಲಭ್ಯವಿದ್ದು, ಅಲ್ಲಿಂದ ಬಜೆ ಡ್ಯಾಂ ಕಡೆಗೆ ಪಂಪಿಂಗ್ ಮಾಡಿ ನೀರನ್ನು ಹಾಯಿಸಲಾಗುತ್ತಿದೆ.
ಪಶ್ಚಿಮಘಟ್ಟ ಭಾಗದಲ್ಲಿ ಮಳೆಯಾದರೆ ಮಾತ್ರ ಸ್ವರ್ಣಾ ನದಿ ತುಂಬಿ ಹರಿಯುತ್ತದೆ. ಈ ಬಾರಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿರುವುದರಿಂದ ಸ್ವರ್ಣಾ ನದಿ ಬತ್ತಿ ಹೋಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಕೇರಳಕ್ಕೆ ಜೂ.4ರಂದು ಮುಂಗಾರು ಪ್ರವೇಶವಾಗಲಿದೆ ಎಂಬ ಮಾಹಿತಿ ಇದ್ದರೂ ಸದ್ಯಕ್ಕೆ ಇನ್ನೂ ಮೂರು ದಿನಗಳ ಕಾಲ ತಡವಾಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜೂ. 10ರ ಒಳಗೆ ಮಳೆ ಯಾಗದಿದ್ದರೆ ನಗರದಲ್ಲಿ ಜಲಕ್ಷಾಮ ಎದುರಾಗುವ ಆತಂಕ ಕಾಡಿದೆ. ನಗರಸಭೆ ವತಿಯಿಂದ ಈಗಾಗಲೆ ರೇಶನಿಂಗ್ ವ್ಯವಸ್ಥೆ ಅಡಿಯಲ್ಲಿ ನೀರು ವಿತರಿಸಲಾಗುತ್ತಿದೆ. ಆದರೂ ಕೆಲವೊಂದು ಎತ್ತರದ ಪ್ರದೇಶಗಳಿಗೆ ನೀರು ತಲುಪುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ನಗರಸಭೆಯಿಂದ 10 ಟ್ಯಾಂಕರ್‌ಗಳ ಮೂಲಕ ನಿತ್ಯ ಅಗತ್ಯ ಇರುವಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.