Advertisement

ಬಜಪೆ: ಮಂಗಳೂರು ನಗರದಲ್ಲಿ ಪ್ರತಿದಿನ 300 ಟನ್‌ ಕಸ ಉತ್ಪತ್ತಿ

03:53 PM Jul 05, 2024 | Team Udayavani |

ಬಜಪೆ: ಎಂ.ಆರ್‌.ಪಿ.ಎಲ್‌. ಸಂಸ್ಥೆಯ ವತಿಯಿಂದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ- 2024 ಬಡಗ ಎಕ್ಕಾರಿನ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕತೆ ಮೂಲಕ
ಹಸಿ ಕಸದಿಂದ ಉಪಯುಕ್ತ ಗೊಬ್ಬರವನ್ನು ಮನೆಯಲ್ಲಿ ತಯಾರಿಸುವ ವಿಧಾನದ ಬಗ್ಗೆ ಉಪಯುಕ್ತ ಮಾಹಿತಿ ನೀಡಲಾಯಿತು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಸಂಯೋಜಕ ರಂಜನ್‌ ಬೆಳ್ಳರ್ಪಾಡಿ
ಅವರು ಮಾಹಿತಿ ನೀಡಿ, ಪ್ರತಿದಿನ ಮಂಗಳೂರು ನಗರದಲ್ಲಿ 300 ಟನ್‌, ಬೆಂಗಳೂರು ಮಹಾನಗರದಲ್ಲಿ 2,400 ಟನ್‌, ಇಡೀ ಭಾರತದಲ್ಲಿ 2 ಲಕ್ಷ ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಆದರೆ ಇದರಲ್ಲಿ ಕೇವಲ ಶೇ.40 ಮಾತ್ರ ನಿರ್ವಹಣೆಯಾಗುತ್ತಿದೆ. ಉಳಿದ ಕಸ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಗಳು ವಿವಿಧ ನೀರಿನ ಮೂಲಗಳಿಗೆ ಸೇರಿ ಸಮುದ್ರ ಸೇರುತ್ತದೆ. ಅಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಗಳು ಅತಿಸೂಕ್ಷ್ಮ ಕಣಗಳಾಗಿ ವಿಭಜನೆ ಹೊಂದಿ ಮೈಕ್ರೋ ಪ್ಲಾಸ್ಟಿಕ್‌ ರೂಪದಲ್ಲಿ ಉಪ್ಪು ಹಾಗೂ ಮೀನುಗಳ ರೂಪದಲ್ಲಿ ನಮ್ಮ ತಟ್ಟೆಗೆ ಹಿಂದಿರುಗಿ ಬರುತ್ತದೆ ಎಂದು ಹೇಳಿದರು.

ಶಾಲೆಯ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದ್ದಕ್ಕಾಗಿ ಎಂಆರ್‌ಪಿ ಎಲ್‌ ಸಂಸ್ಥೆಯನ್ನು ಅಭಿನಂದಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಜನ್ಮದಿನೋತ್ಸವ ಆಚರಣೆ ಪ್ರಯುಕ್ತ ಮಂಗಳೂರು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ 8ನೇ ತರಗತಿಯ ಅಪ್ಸಾನಾ ಬಾನು ಅವರನ್ನು ಸಮ್ಮಾನಿಸಲಾಯಿತು.  ಎಂ.ಆರ್‌.ಪಿ.ಎಲ್‌. ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್‌ ಪಿಂಟೋ ಸ್ವಚ್ಛತಾ ಸಂಕಲ್ಪವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಎಂ.ಆರ್‌.ಪಿ.ಎಲ್‌. ಸಂಸ್ಥೆಯ ಹಿರಿಯ ಅಧಿಕಾರಿ ನಾಗರಾಜ ರಾವ್‌ ಸಂಸ್ಥೆಯ ಪ್ರತಿನಿಧಿಯಾಗಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುದೀಪ್‌ ಅಮೀನ್‌ ಅಧ್ಯಕ್ಷತೆ ವಹಿಸಿದ್ದರು. ಎಕ್ಕಾರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಪದ್ಮಾಕ್ಷಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಸುರೇಶ್‌ ಕೆ., ಮೆಲ್ವಿನ್‌, ಬಬಿತಾ, ವಿನೋದಾ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು, ಹೆತ್ತವರು, ಮುಖ್ಯ ಶಿಕ್ಷಕಿ ಇಂದಿರಾ ಎನ್‌.ರಾವ್‌, ಶಿಕ್ಷಕಿಯರಾದ ಪೂರ್ಣಿಮಾ ಎಚ್‌. ಎಂ., ಜ್ಯೋತಿ ಬಿ., ರಾಜಶ್ರೀ ಕೆ., ರಮ್ಯಾ ಕೆ., ವಿದ್ಯಾಲತಾ, ವಿನ್ನಿ ನಿಮ್ಯುಲಾ ಡಿ’ಸೋಜಾ, ಜಯಂತಿ ಎಂ. ಹಾಗೂ ಶಿಕ್ಷಕ ಡಾ|
ಅನಿತ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ವಿದ್ಯಾಗೌರಿ ಎಂ.ಕೆ ಸ್ವಾಗತಿಸಿದರು. ಚಿತ್ರಾಶ್ರೀ ಕೆ.ಎಸ್‌.ವಂದಿಸಿದರು.

Advertisement

ಗೊಬ್ಬರ ತಯಾರಿ
ಪ್ಲಾಸ್ಟಿಕ್‌ ಲೋಟ, ತಟ್ಟೆ ಬಳಸುವುದನ್ನು ನಿಲ್ಲಿಸುವ ಅಗತ್ಯತೆ, ಪೇಪರ್‌ ಲೋಟದಲ್ಲಿರುವ ಪ್ಲಾಸ್ಟಿಕ್‌ ಪೊರೆಯಿಂದ ದೇಹಕ್ಕಾಗುವ ಹಾನಿಗಳನ್ನು ಮನದಟ್ಟು ಮಾಡಿಕೊಡಲಾಯಿತು. ನಗರ ಪ್ರದೇಶದಲ್ಲಿ ಇರುವವರು ಹಸಿ ಕಸವನ್ನು ನಿರ್ವಹಣೆ ಮಾಡಲು ಪ್ಯಾಟ್‌ ಕಂಪೋಸ್ಟ್‌ ವಿಧಾನವನ್ನು ಅನುಸರಿಸಬಹುದು. ಹಳ್ಳಿ ಪ್ರದೇಶಗಳಲ್ಲೂ ದೊಡ್ಡ ಬ್ಯಾರೆಲ್‌ ನ್ನು ಉಪಯೋಗಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗೊಬ್ಬರವನ್ನು ತಯಾರಿಸಲು ಬಳಸಬಹುದು ಎಂದು ರಂಜನ್‌ ಬೆಳ್ಳರ್ಪಾಡಿ ತಿಳಿಸಿದರು. ಕಸವೆನಿಸುವ ವಸ್ತುಗಳನ್ನು ಕಂಡಲ್ಲಿ ಬಿಸಾಡದೇ ತಮ್ಮೊಂದಿಗೆ ತೆಗೆದುಕೊಂಡು ಬರಲು ಸಣ್ಣದೊಂದು
ಚೀಲವನ್ನು ಜತೆಗಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಲು ತಿಳಿಸಲಾಯಿತು. ಜೀವಿಗಳ ಅಳಿವು-ಉಳಿವು ನಮ್ಮ ಕೈಯಲ್ಲಿದೆ ಎಂಬ ತಿಳುವಳಿಕೆ ಈ ಕಾರ್ಯಕ್ರಮದಲ್ಲಿ ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next