ಮೈಸೂರು: ತನ್ನ ತಾಯಿ ಆಸೆ ಈಡೇರಿಸುವ ಸಲುವಾಗಿ ದ್ವಿಚಕ್ರ ವಾಹನದಲ್ಲಿ ತಾಯಿಯೊಂದಿಗೆ ದೇಶ ಪರ್ಯಟನೆ ನಡೆಸುತ್ತಿರುವ ವ್ಯಕ್ತಿಗೆ ಮಹೀಂದ್ರಾ ಕಂಪನಿ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ. ಮೈಸೂರಿನ ಕೃಷ್ಣ ಕುಮಾರ್ ತಮ್ಮ ತಾಯಿ ಚೂಡಾರತ್ನ ಅವರು ಬೇಲೂರು, ಹಳೆಬೀಡು ದೇಗುಲ ನೋಡಲಾಗಲಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ ಹಿನ್ನೆಲೆ ತಮ್ಮ ಬಳಿ ಇದ್ದ ದ್ವಿಚಕ್ರ ವಾಹನದಲ್ಲಿ ತಾಯಿಯನ್ನೂ ಕೂರಿಸಿಕೊಂಡು ದೇಶದ ವಿವಿಧ ರಾಜ್ಯಗಳಲ್ಲಿರುವ ಯಾತ್ರಾ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರ ಆಸೆ ಪೂರೈಸುತ್ತಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯವರಾಗಿರುವ ಕೃಷ್ಣಕುಮಾರ್ ತಾಯಿ ಬೇಲೂರು, ಹಳೇಬೀಡು ನೋಡಲು ಆಗಲಿಲ್ಲ ಎಂದು ಮಗನ ಮುಂದೆ ಹೇಳಿದ್ದರಂತೆ. ಅದಕ್ಕೆ ಮನನೊಂದ ಕೃಷ್ಣ ಕುಮಾರ್ ತನ್ನ ತಾಯಿಗೆ ಬೈಕ್‌ನಲ್ಲೇ ಪರ್ಯಟನೆ ಮಾಡಿಸಿದ್ದಾರೆ. ಪರ್ಯಟನೆಗೆ ನೆರವಾದದ್ದು ಕೃಷ್ಣಕುಮಾರ್ ಅವರ ತಂದೆ ಬಳಸುತ್ತಿದ್ದ ಬಜಾಜ್ ಚೇತಕ್ ಬೈಕ್. ತಂದೆ ಬಳಿಕ ಅವರ ನೆನಪಿಗಾಗಿ ಆ ಬೈಕ್‌ನ್ನು ಕೃಷ್ಣಕುಮಾರ್ ಇಟ್ಟುಕೊಂಡಿದ್ದರು.
ಅದೇ ಬೈಕಿನಲ್ಲಿ ತಾಯಿ-ಮಗ ದೇಶದಲ್ಲಿನ ದೇವಾಲಯಗಳನ್ನು ಸುತ್ತಿ ಬಂದಿದ್ದಾರೆ. 2018ರ ಜ.16ರಿಂದ ಚೇತಕ್ ಸ್ಕೂಟರ್ ಮೇಲೆ ಸವಾರಿ ಆರಂಭಿಸಿದ ಅವರು ಆಂಧ್ರ, ಕೇರಳ, ತುಳುನಾಡು, ಕರ್ನಾಟಕದ ಪ್ರಮುಖ ದೇಗುಲಗಳ ದರ್ಶನ ಮಾಡಿದ್ದಾರೆ. ಅಲ್ಲದೇ ಬನವಾಸಿ, ರಾಮ ಮಂದಿರ, ಉತ್ತರಾಧಿ ಮಠ ಹೀಗೆ 48,100 ಕಿ.ಮೀ. ಪ್ರಯಾಣ ಮಾಡಿದ್ದಾರೆ. ಪ್ರಯಾಣಕ್ಕಾಗಿ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ಬೈಕ್‌ಗೆ ಕಟ್ಟಿಕೊಂಡು, ಯಶಸ್ವಿಯಾಗಿ ಯಾತ್ರೆ ಮುಗಿಸಿದ್ದಾರೆ.
ಮಗನ ಈ ಕಾರ್ಯಕ್ಕೆ ತಾಯಿ ಚೂಡಾರತ್ನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದುವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ಸಂಸತದಿಂದ ಹೇಳುತ್ತಾರೆ.
ಮಹಿಂದ್ರಾ ಕಂಪನಿ ಗಿಫ್ಟ್: ಕೃಷ್ಣಕುಮಾರ್ ಅವರ ಬೈಕ್ ಜರ್ನಿ ಬಗ್ಗೆ ತಿಳಿದುಕೊಂಡ ಮಹೀಂದ್ರ ಸಂಸ್ಥೆಯ ಆನಂದ್ ಮಹೀಂದ್ರಾ, ಕೃಷ್ಣಕುಮಾರ್ ಅವರ ಕಾರ್ಯಕ್ಕೆ ಮನಸೋತು ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
ಯಾತ್ರೆ ಬಗ್ಗೆ ತಿಳಿದದ್ದು ಹೇಗೆ?: ಕೃಷ್ಣ ಕುಮಾರ್ ಅವರು ಮಾಧ್ಯಮವೊಂದಕ್ಕೆ ತಮ್ಮ ಕಾರ್ಯದ ಕುರಿತು ಹೇಳಿಕೆ ನೀಡಿದ್ದು, ಈ ವೀಡಿಯೋವನ್ನು ಟ್ವೀಟಿಗರೊಬ್ಬರು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ರಿಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಕೃಷ್ಣಕುಮಾರ್ ನನ್ನನ್ನು ಸಂಪರ್ಕ ಮಾಡಿದರೆ ಕಾರನ್ನು ಗಿಫ್ಟ್ ನೀಡುವುದಾಗಿ ತಿಳಿಸಿದ್ದು, ಮುಂದಿನ ತಮ್ಮ ಪ್ರಯಾಣವನ್ನು ಕಾರಿನಲ್ಲಿ ನಡೆಸಬಹುದು ಎಂದು ಹೇಳಿದ್ದಾರೆ.
ನನ್ನ ತಾಯಿಯೇ ನನಗೆ ಎಲ್ಲಾ. ಅವರ ಆಸೆ ಈಡೇರಿಸುವುದೇ ನನ್ನ ಕಾಯಕ. ಒಮ್ಮೆ ಅವರು ನನ್ನ ಬಳಿ ಬೇಲೂರು ಹಳೇಬೀಡು ದೇವಸ್ಥಾನ ನೋಡಲು ಆಗಲಿಲ್ಲ ಎಂದು ನೋವು ತೋಡಿಕೊಂಡಿದ್ದರು. ಅಂದೇ ಅವರ ಆಸೆ ಪೂರೈಸಬೇಕು ಎಂದು ನಿರ್ಧರಿಸಿದೆ. ಇಲ್ಲಿಯವರೆಗೆ ಅನೇಕ ರಾಜ್ಯಗಳಿಗೆ ಭೇಟಿ ನೀಡಿದ್ದೇವೆ. ಮುಂದೆಯೂ ಅವರ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡುತ್ತೇವೆ.
-ಕೃಷ್ಣಕುಮಾರ್, ಮೈಸೂರು