Advertisement

ಪಾಜೆಗುಡ್ಡೆ ಅಪಾಯಕಾರಿ ತಿರುವಿಗೆ ಸಿಕ್ಕೀತೇ ಮುಕ್ತಿ?

08:28 PM Jan 16, 2020 | Sriram |

ಅಪಘಾತ ಪ್ರದೇಶವಾಗಿರುವ ಪಾಜೆಗುಡ್ಡೆ ತಿರುವನ್ನು ಸರಿಪಡಿಸಲು ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಆದರೆ ಇದು ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಯೋಜನೆ ಜಾರಿ ವಿಳಂಬವಾಗದಂತೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ.

Advertisement

ಬಜಗೋಳಿ: ಬಜಗೋಳಿ-ಹೊಸ್ಮಾರು ರಾಜ್ಯ ಹೆದ್ದಾರಿಯಲ್ಲಿರುವ ಪಾಜೆಗುಡ್ಡೆ ತಿರುವು ತೀವ್ರ ಅಪಾಯ ಕಾರಿಯಾಗಿದ್ದು ಸರಿಪಡಿಸಬೇಕಾದ ತುರ್ತು ಅಗತ್ಯವಿದೆ.
ರಸ್ತೆ ನೇರಗೊಳಿಸುವ ಬಗ್ಗೆ ಹಿಂದಿನಿಂದಲೂ ಜನಾಗ್ರಹ ವಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯೊಂದನ್ನು ಲೋಕೋ ಪಯೋಗಿ ಇಲಾಖೆ ತಯಾರಿಸಿ ರೂ. 5 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ.

ಕಾರ್ಕಳದಿಂದ ಸುಮಾರು 13 ಕಿ.ಮೀ. ದೂರದಲ್ಲಿ ಪಾಜೆಗುಡ್ಡೆ ತಿರುವು ಇದೆ. ಇದು ಏರುಹಾದಿಯಷ್ಟೇ ಅಲ್ಲದೆ ಇಕ್ಕಟ್ಟಾಗಿ ಚಾಲಕರಿಗೆ ಅಪಘಾತದ ಭೀತಿ ತಂದೊಡ್ಡುತ್ತದೆ. ಈಗಾಗಲೇ ಈ ತಿರುವಿನಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು, ಜೀವ ಹಾನಿಯೂ ಆಗಿದೆ.

ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ
ಮಳೆಗಾಲ ಸಂದರ್ಭ ಗುಡ್ಡದ ನೀರು ನೇರವಾಗಿ ರಸ್ತೆ ಮೇಲೆ ಹರಿದು ಹೋಗುವುದರಿಂದ ರಸ್ತೆಯ ಡಾಂಬರು ಪ್ರತೀ ವರ್ಷ ಕಿತ್ತು ಹೋಗುತ್ತದೆ. ಇದು ಪ್ರಯಾಣಿಕರಿಗೂ, ಇಲಾಖೆಗೂ ಸಮಸ್ಯೆ ಸೃಷ್ಟಿಸುತ್ತದೆ. ಇದಕ್ಕಾಗಿ ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ನೇರ ರಸ್ತೆ ನಿರ್ಮಿಸುವ ಯೋಜನೆಯೊಂದನ್ನು ಲೋಕೋಪಯೋಗಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ಅರಣ್ಯ ಇಲಾಖೆ ತೊಡಕು
ಪ್ರಸ್ತುತ ಪಾಜೆಗುಡ್ಡೆ ರಸ್ತೆಯ ಇಕ್ಕೆಲಗಳು ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತ ಪಡಿಸುತ್ತಿದೆ. ಇದೇ ಕಾರಣದಿಂದಾಗಿ ರಸ್ತೆ ವಿಸ್ತರಣೆಗೂ ತೊಡಕಾಗಿದೆ. ರಸ್ತೆ ವಿಸ್ತರಣೆ ಕಾರ್ಯವು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆಸಬೇಕಾಗಿರುವುದರಿಂದ, ಅದಕ್ಕೆ ಸರಕಾರ ಮಟ್ಟದಿಂದ ಅನುಮೋದನೆ ಪಡೆಯುವ ಸಲುವಾಗಿ ಹೊಸ ಯೋಜನೆ ಸಿದ್ಧ ಪಡಿಸಲಾಗಿದೆ.

Advertisement

ಪರ್ಯಾಯ ಯೋಜನೆ
ಈಗಿನ ರಸ್ತೆಗೆ ಪರ್ಯಾಯವಾಗಿ ಬಜಗೋಳಿಯಿಂದ ಪಾಜೆಗುಡ್ಡೆ ಸಂಪರ್ಕಿಸುವ ಮುನ್ನ ಸಿಗುವ ಸತ್ಯ ಸಾರಮಣಿ ದೈವಸ್ಥಾನದಿಂದ ಚೆಂಡೆ ಬಸದಿ ಕೂಡು ರಸ್ತೆ ವರೆಗೆ ಗುಣಮಟ್ಟದ ರಸ್ತೆ ನಿರ್ಮಾಣದ ಯೋಜನೆ ಇದೆ. ಸುಮಾರು 1 ಕಿ.ಮೀ ಉದ್ದ ಹೊಂದಿರುವ ಈ ರಸ್ತೆಯು ಅತೀ ಹತ್ತಿರ ಹಾಗೂ ಏರುಮುಖ ಇಲ್ಲದೆ ಇರುವ ರಸ್ತೆಯನ್ನಾಗಿ ಮಾಡುವ ಯೋಚನೆ ಇದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಕಾರ್ಕಳ- ಬಜಗೋಳಿ, ಹೊಸ್ಮಾರ್‌ ನಡುವೆ ಅಪಾಯಕಾರಿ ಏರುಮುಖ ಹಾಗೂ ತಿರುವಿಗೆ ಮುಕ್ತಿ ದೊರೆಯಲಿದೆ.

ಮೂರು ವರ್ಷಗಳ ಹಿಂದೆ ಶಾಸಕ ಸುನಿಲ್‌ ಕುಮಾರ್‌ ಅವರ ವಿಶೇಷ ಪ್ರಯತ್ನದಿಂದ ಜೋಡುರಸ್ತೆ-ಪುಲ್ಕೇರಿ, ಬಜಗೋಳಿ-ಹೊಸ್ಮಾರು, ನ್ಯಾನಿಲ್‌ತ್ತಾರ್‌- ಮುಂಡ್ಕೂರು ಇತ್ಯಾದಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. 22 ಕೋಟಿ ಅನುದಾನ ಬಿಡುಗಡೆಗೊಂಡಿತ್ತು. ಅದೇ ಸಂದರ್ಭದಲ್ಲಿ ಪಾಜಿಗುಡ್ಡೆ ರಸ್ತೆಯ ಡಾಂಬರು ಕಾಮಗಾರಿ ನಡೆದಿತ್ತು. ಆದರೆ ಕಳೆದ ಮಳೆಗಾಲದಲ್ಲಿ ಇದು ಮತ್ತೆ ಮೊದಲಿನಂತಾಗಿದೆ.

ಮೂಲಸೌಕರ್ಯ
ಸಮಸ್ಯೆಗೆ ಕಾರಣವಾಗಿರುವ ಅಪಾಯಕಾರಿ ತಿರುವು ಸರಿಪಡಿಸಲು ಸರಕಾರ ಯೋಜನೆಗೆ ತುರ್ತು ಅನುಮೋದನೆ ಕೊಡಬೇಕು.

ಪ್ರಸ್ತಾವನೆ ಸಲ್ಲಿಕೆ
ಬಜಗೋಳಿ-ಹೊಸ್ಮಾರು ರಾಜ್ಯ ಹೆದ್ದಾರಿಯ ಅಪಾಯಕಾರಿ ಪಾಜೆಗುಡ್ಡೆ ತಿರುವಿನ ಬದಲಾಗಿ ರಸ್ತೆಯನ್ನು ನೇರಗೊಳಿಸುವ ಪ್ರಸ್ತಾವನೆಯಿದೆ. ಲೋಕೋಪಯೋಗಿ ಇಲಾಖೆಯು ಇದಕ್ಕಾಗಿ ರೂ. 5 ಕೋಟಿ ಅಂದಾಜು ವರದಿ ಸರಕಾರಕ್ಕೆ ಸಲ್ಲಿಸಿದೆ.
-ಸೋಮಶೇಖರ್‌,
ಸಹಾಯಕ ಎಂಜಿನಿಯರ್‌,ಲೋಕೋಪಯೋಗಿ ಇಲಾಖೆ

ಸಮಸ್ಯೆಗೆ ಪರಿಹಾರ
ನಲ್ಲೂರು ಬಳಿಯ ಪಾಜೆಗುಡ್ಡೆ ರಸ್ತೆಯು ಕಡಿದಾದ ತಿರುವಿನಿಂದ ಕೂಡಿದ್ದು, ಹಲವಾರು ಅಪಘಾತಗಳು ಸಂಭವಿಸಿದೆ. ರಸ್ತೆ ಅಭಿವೃದ್ಧಿಗೊಂಡಲ್ಲಿ ಹಲವಾರು ವರ್ಷಗಳ ಸಮಸ್ಯೆಯು ಪರಿಹಾರ ಕಾಣಲಿದೆ.
-ಜಿತೇಶ್‌ ನಲ್ಲೂರು,
ಸ್ಥಳೀಯರು

ಪ್ರಯತ್ನಿಸಬೇಕು
ಪಾಜೆಗುಡ್ಡೆ ಅಪಾಯಕಾರಿ ರಸ್ತೆ ತಿರುವನ್ನು ತೆರವುಗೊಳಿಸುವ ಮೂಲಕ ನಿರಂತರ ಅಪಘಾತ ವಲಯಕ್ಕೆ ಮುಕ್ತಿ ನೀಡುವಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಪ್ರಯತ್ನಿಸಬೇಕು.
-ಸದಾನಂದ,
ಪರಪ್ಪಾಡಿ ನಲ್ಲೂರು

ಅಪಘಾತ ತಾಣ
ಪಾಜೆಗುಡ್ಡೆ ತಿರುವು ರಸ್ತೆಯು ಕಡಿದಾದ ತಿರುವನ್ನು ಹೊಂದಿದೆ. ಮಳೆಗಾಲದಲ್ಲಿ ತಿರುವು ರಸ್ತೆ ಪೂರ್ತಿ ಹದಗೆಡುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ. ವಾಹನಗಳನ್ನು ಹೊಂಡ-ಗುಂಡಿಗಳು ತಪ್ಪಿಸುವ ಭರದಲ್ಲಿ ಪಥ ಬದಲಾಯಿಸಿ ಚಲಾಯಿಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಪಾಜಿಗುಡ್ಡೆಯ ಏರುಮುಖ, ತಿರುವು-ಮುರುವು ರಸ್ತೆಯೂ ವಾಹನ ಓಡಾಟಕ್ಕೆ ಅಪಾಯಕಾರಿಯಾಗಿದೆ.

-ಸಂದೇಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next