Advertisement

Baindur: ಅಂಗಡಿ ಬಾಗಿಲೇ ತಂಗುದಾಣ!

12:48 PM Dec 01, 2024 | Team Udayavani |

ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಪಟ್ಟಣಗಳಲ್ಲಿ ಬೈಂದೂರು ಕೂಡಾ ಒಂದು. ತಾಲೂಕು ಕೇಂದ್ರವಾಗಿರುವ ಬೈಂದೂರು ಒಂದು ಕಡೆ ಕುಂದಾಪುರ, ಇನ್ನೊಂದು ಕಡೆ ಭಟ್ಕಳಕ್ಕೆ ಸಂಪರ್ಕ ಕೊಂಡಿ. ಬೈಂದೂರು ಹತ್ತಾರು ಊರುಗಳಿಗೆ ಅತ್ಯಂತ ಪ್ರಮುಖವಾದ ಜಂಕ್ಷನ್‌ ಕೂಡಾ. ಹಲವಾರು ಊರುಗಳಿಂದ ಬಂದವರು ಕುಂದಾಪುರಕ್ಕೋ, ಭಟ್ಕಳ ಕಡೆಗೋ ಹೋಗಬೇಕಾಗಿದ್ದರೆ ಬೈಂದೂರಿನಿಂದ ಬಸ್‌ ಬದಲಿಸಬೇಕು. ಆದರೆ, ಇಂಥ ಪ್ರಮುಖ ಜಂಕ್ಷನ್‌ನಲ್ಲಿ ಹುಡುಕಿದರೆ ಒಂದು ಪ್ರಯಾಣಿಕರ ತಂಗುದಾಣ ಕಾಣಿಸುವುದಿಲ್ಲ. ಇದು ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿಯ ಫ‌ಲಶ್ರುತಿ ಮತ್ತು ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಂಡುಬರುತ್ತಿರುವ ದಿವ್ಯ ನಿರ್ಲಕ್ಷ್ಯದ ಫ‌ಲ.

Advertisement

ಹಿಂದೆ ಗ್ರಾಮ ಪಂಚಾಯತ್‌ ಇಲ್ಲಿ ಸಾಕಷ್ಟು ವ್ಯವಸ್ಥಿತವಾದ ಬಸ್‌ ನಿಲ್ದಾಣವನ್ನು ನಿರ್ಮಿಸಿತ್ತು. ಇದು ಕೇವಲ ಜನರು ನಿಲ್ಲುವ ಜಾಗ ಮಾತ್ರವಲ್ಲ ಒಂದು ಹೆಗ್ಗುರುತಾಗಿ ಪ್ರಸಿದ್ಧಿ ಪಡೆದಿತ್ತು. ಆದರೆ, ಹೆದ್ದಾರಿ ಕಾಮಗಾರಿಯ ವೇಳೆ ಅದನ್ನು ಕೆಡವಿ ಹಾಕಲಾಯಿತು. ಬಳಿಕ ಯಾವುದೇ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿಲ್ಲ.

ಈಗ ಇಲ್ಲಿನ ನಾಗರಿಕರು ಕುಂದಾಪುರಕ್ಕೆ ತೆರಳಬೇಕಾದರೆ ಪ್ಲೈ ಓವರ್‌ ಕೆಳಗೆ ಸರ್ವಿಸ್‌ ರಸ್ತೆಯಲ್ಲಿ ನಿಲ್ಲಬೇಕು. ಇನ್ನು ಭಟ್ಕಳ ಕಡೆ ಸಾಗುವ ಪ್ರಯಾಣಿಕರ ಪಾಡು ಹೇಳತೀರದು. ಅಂಗಡಿ, ಬೇಕರಿ ಮುಂಭಾಗದಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕು. ಒಂದು ಕಡೆ ರಥಬೀದಿ, ಇನ್ನೊಂದೆಡೆ ಅಂಡರ್‌ಪಾಸ್‌ ಇದರ ನಡುವೆ ಸರ್ವಿಸ್‌ ರಸ್ತೆಯಲ್ಲಿ ವಾಹನ ಜಂಜಾಟದ ನಡುವೆ ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ.

ತಾಲೂಕು ಕೇಂದ್ರವಾದ ಕೊಲ್ಲೂರು ಕ್ರಾಸ್‌ನಲ್ಲಿ ನಿಲ್ದಾಣವಿಲ್ಲ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಪ್ರತಿದಿನ ನೂರಾರು ಭಕ್ತರು ಹೊರ ರಾಜ್ಯದಿಂದ ಆಗಮಿಸುತ್ತಾರೆ. ರೈಲ್ವೆ ನಿಲ್ದಾಣದಿಂದ ಬೈಂದೂರಿಗೆ ಆಗಮಿಸಿ ಬಳಿಕ ಬಸ್‌ನಲ್ಲಿ ತೆರಳಬೇಕು. ಹೊಸ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕರ ನಿತ್ಯಯಾತನೆ ಕಂಡು ಸಂಸದರ ನಿಧಿಯಿಂದ ಭಟ್ಕಳ ಕಡೆ ಹಾಗೂ ಖಾಸಗಿ ಸಹಕಾರದಲ್ಲಿ ಕುಂದಾಪುರ ಕಡೆ ಪ್ರಯಾಣಿಸುವವರಿಗೆ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಯಡ್ತರೆ ಕ್ರಾಸ್‌ ಮೂಲಕ ಕೊಲ್ಲೂರಿಗೆ ಸಾಗುವ ಭಕ್ತರಿಗೆ ಯಡ್ತರೆಯಲ್ಲಿ ಸದ್ಯ ಸಣ್ಣ ನಿಲ್ದಾಣವಿದೆ.

ಕೆಲವು ಕಡೆ ಇದ್ದರೂ ಉಪಯೋಗವಿಲ್ಲ
ಶಿರೂರಿನಿಂದ ಉಪ್ಪುಂದದವರೆಗೆ ಅಗತ್ಯ ಇರುವ ಕಡೆ ನಿಲ್ದಾಣಗಳಿಲ್ಲ. ಹೆದ್ದಾರಿ ಲೆಕ್ಕಾಚಾರದಲ್ಲಿ ಕೆಲವು ಕಡೆ ಸಣ್ಣ ತಂಗುದಾಣ ನಿರ್ಮಿಸಲಾಗಿದೆ. ಕೆಳಪೇಟೆಯಲ್ಲಿ ತಾ.ಪಂ ಹಾಗೂ ಸಂಸದರ ನಿಧಿಯಿಂದ ಎರಡು ಬಸ್‌ ನಿಲ್ದಾಣ ನಿರ್ಮಾಣಗೊಂಡಿದೆ. ಮಾರ್ಕೆಟ್‌ ಹಾಗೂ ಅಳ್ವೆಗದ್ದೆ ಕ್ರಾಸ್‌ನಲ್ಲಿ ದಾನಿಗಳ ನೆರವು ಪಡೆದು ಸಾರ್ವಜನಿಕರೆ ತಂಗುದಾಣ ನಿರ್ಮಿಸಿಕೊಂಡಿದ್ದಾರೆ.

Advertisement

ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
ತಾಲೂಕು ಕೇಂದ್ರವಾದ ಬೈಂದೂರಿನಲ್ಲೇ ಬಸ್ಸು ತಂಗುದಾಣ ಇಲ್ಲ ಎನ್ನುವುದು ಅತ್ಯಂತ ಅಪಮಾನಕಾರಿ ಸಂಗತಿಯೇ ಸರಿ. ಇಲ್ಲಿ ಐದಕ್ಕೂ ಅಧಿಕ ಪ್ರೌಢ ಢಶಾಲೆ ಪದವಿ ಹಾಗೂ ಪ್ರಥಮ ದರ್ಜೆ ಕಾಲೇಜುಗಳಿವೆ. ಅದರ ಜತೆಗೆ ಕುಂದಾಪುರ, ಭಟ್ಕಳಕ್ಕೆ ಸೇರಿದಂತೆ ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓಡಾಡುತ್ತಾರೆ. ಹಳ್ಳಿಗಳಿಂದ ರೈತರ ತಾಲೂಕು ಕೇಂದ್ರವಾದ ಕಾರಣ ಪ್ರತಿದಿನವೂ ಬರುತ್ತಾರೆ. ಅವರೆಲ್ಲರೂ ಬೀದಿ ಬದಿಯಲ್ಲಿ ನಿಂತುಕೊಂಡೇ ಬಸ್ಸಿಗೆ ಕಾಯಬೇಕಾಗಿದೆ. ಬೈಂದೂರು ಜಂಕ್ಷನ್‌ನ ಎರಡು ಬದಿಗಳಲ್ಲಿ ಅಗತ್ಯವಾಗಿ ಸುಸಜ್ಜಿತ ಬಸ್‌ ತಂಗುದಾಣದ ಅವಶ್ಯಕತೆಯಿದೆ.

-ಅರುಣಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next