Advertisement

ಸಮಸ್ಯೆಗಳ ಸುಳಿಯಲ್ಲಿ ವಣ್ಣೂರ ಆಸ್ಪತ್ರೆ

01:02 PM Jun 27, 2019 | Naveen |

ಸಿ.ವೈ. ಮೆಣಶಿನಕಾಯಿ
ಬೈಲಹೊಂಗಲ:
ತಾಲೂಕಿನ ವಣ್ಣೂರ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಬೆರಳಣಿಕೆಯಷ್ಟು ವೈದ್ಯರು, ಸಿಬ್ಬಂದಿ ಇರುವುದರಿಂದ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ರೋಗಗಳು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.

Advertisement

ಸಿಬ್ಬಂದಿ ಕೊರತೆ: ಆಸ್ಪತ್ರೆಯಲ್ಲಿ ನಿಯಮದ ಪ್ರಕಾರ ವೈದ್ಯರನ್ನು ಒಳಗೊಂಡು 9 ಸಿಬ್ಬಂದಿಗಳ ಕೊರತೆಯನ್ನು ಅನುಭವಿಸುತ್ತಿದೆ. ಗುತ್ತಿಗೆ ಆದಾರದ ಮೇಲೆ ಎಂಬಿಬಿಎಸ್‌ ವೈದ್ಯರಿದ್ದಾರೆ. ಪೂರ್ಣಕಾಲಿಕ ಎಂಬಿಬಿಎಸ್‌ 1, ಆಯುಷ್‌ ವೈದ್ಯರು 1, ಸ್ಟಾಪ್‌ ನರ್ಸ್‌ 1, ಎಎನ್‌ಎಂ 2, ಎಫ್‌ಡಿಎ 1, ಪಾರಮಾಸಿಸ್ಟ 1, ಟೆಕ್ನಿಸಿಯನ್‌ 1, 1 ಡಿ ಗ್ರೂಪ್‌ ಹುದ್ದೆ ಖಾಲಿ ಇದೆ. ವೈದ್ಯರ ಕೊರತೆಯಿಂದ ಈಗಾಗಲೇ ಕೆಲಸ ಮಾಡುತ್ತಿರುವ ಶೂಶ್ರೂಷಕರು ತೊಂದರೆ ಪಡುವಂತಾಗಿದೆ. ಇದರಿಂದ ವಣ್ಣೂರ ಗ್ರಾಮ ಆಸ್ಪತ್ರೆಗೆ ಒಳಪಡುವ ಹಣಬರಟ್ಟಿ, ಮಾಸ್ತಮರ್ಡಿ, ಮೇಕಲಮರಡಿ, ಗಜಮಿನಾಳ, ಸುನಕುಂಪಿ, ಉಜ್ಜಾನಟ್ಟಿ, ಸೋಮನಟ್ಟಿ, ಇನ್ನಿತರ ಗ್ರಾಮಸ್ಥರು ರೋಗದ ಉಪಚಾರಕ್ಕೆ ಖಾಸಗಿ ಆಸ್ಪತ್ರೆ, ದೂರದ ಆಸ್ಪತ್ರೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿಗೂ ಪರದಾಟ: ನೀರಿನ ಸಮಸ್ಯೆ ಎದುರಿಸುತ್ತಿರುವದರಿಂದ ಹೆರಿಗೆಗೆ ಬಂದವರು, ಓಪಿಡಿ ತೋರಿಸಲು ಬಂದವರು, ನೀರಿಲ್ಲದೆ ತೊಂದರೆ ಪಡುತ್ತಾರೆ. ನೀರಿನ ತೀವ್ರ ಸಮಸ್ಯೆಯಿಂದ ವೈದ್ಯರು ಇಲ್ಲಿ ಆಪರೇಶನ್‌ ಮಾಡುತ್ತಿಲ್ಲ. ಆಸ್ಪತ್ರೆಯ ಆವರಣದ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಗಿಡಗಂಟಿಗಳು ಬೆಳೆದಿವೆ. ಆಸ್ಪತ್ರೆಯ ತ್ಯಾಜ್ಯ, ಕಲುಷಿತ ನೀರಿನಿಂದ ರೋಗರುಜಿನಗಳ ತಾಣವಾಗಿದೆ. ಪ್ರವೇಶ ದ್ವಾರದ ಗೇಟ್ ಇಲ್ಲದಾಗಿದೆ.

ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರ ಆರೋಗ್ಯ ಸರಿಪಡಿಸಲು ತಲೆ ಎತ್ತಿವೆ. ಆದರೆ ಇಂತಹ ಆಸ್ಪತ್ರೆಗಳು ಅವ್ಯವಸ್ಥೆಯಿಂದ ರೋಗಿಗಳ ಬೈಗುಳಗಳ ಸರಮಾಲೆಯಾಗುತ್ತವೆ. ಸರ್ಕಾರಿ ಆಸಪತ್ರೆಯಲ್ಲಿ ವೈದ್ಯರ ಕೊರತೆಯು ಸಾಕಷ್ಟು ಇರುವ ಕಾರಣ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ವಂಚನೆ ಆಗುತ್ತಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಆಸ್ಪತ್ರೆಯನ್ನು ಒಂದು ಉನ್ನತ ಮಟ್ಟದಲ್ಲಿ ಬೆಳೆಸಬೇಕೆಂದು ಹಿರಿಯ ಪ್ರಜ್ಞಾವಂತರ ಆಶಯವಾಗಿದೆ.

ವಣ್ಣೂರ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ ಕುರಿತು ಈಗಾಗಲೇ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಿಳಿಸಲಾಗಿದೆ. ವೈದ್ಯರ ಕೊರತೆ ನಿಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ| ಎಸ್‌.ಎಸ್‌. ಸಿದ್ದನ್ನವರ
ತಾಲೂಕಾ ವೈದ್ಯಾಧಿಕಾರಿ, ಬೈಲಹೊಂಗಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next