Advertisement

ಬೈಲಹೊಂಗಲ: ಗೋವುಗಳ ಮಹತ್ವ ಸಾರುತ್ತಿರುವ ಹಜೇರಿ

04:57 PM May 20, 2023 | Team Udayavani |

ಬೈಲಹೊಂಗಲ: ಗೋವು ನಾಡಿನ ಕಾಮಧೇನು. ಹೀಗಾಗಿ ಎತ್ತು-ಆಕಳುಗಳನ್ನು ಸಮಾಜದಲ್ಲಿ ಭಕ್ತಿ ಭಾವನೆಯಿಂದ ಪೂಜಿಸುವುದನ್ನು ಕಾಣಬಹುದಾಗಿದೆ. ಆದರೆ ಕೃಷಿಯಲ್ಲಿ ತಾಂತ್ರಿಕತೆಯಿಂದಾಗಿ ಗೋವುಗಳ ಮಹತ್ವ ಸಮಾಜದಲ್ಲಿ ಕಡಿಮೆ ಯಾಗುತ್ತಿದ್ದು, ಇದನ್ನು ಮನಗಂಡ ಬೈಲಹೊಂಗಲ ತಾಲೂಕಿನ ಸಂಪಗಾವಿ- ಪಟ್ಟಿಹಾಳ(ಕೆ.ಎಸ್‌.) ಗ್ರಾಮದ ರಾಜೇಂದ್ರಸಿಂಗ್‌ ವಿಠಲಸಿಂಗ್‌ ಹಜೇರಿ(55) ಕಳೆದ ಸುಮಾರು ಮೂವತ್ತು ವರ್ಷಗಳಿಂದ ಜಾಗೃತಿ ಮೂಡಿಸುತ್ತ ಬಂದಿದ್ದಾರೆ.

Advertisement

ಕರ್ನಾಟಕದ ಬೀದರ ಜಿಲ್ಲೆಯಿಂದ ಹಿಡಿದು ಚಾಮರಾಜನಗರದವರೆಗೆ ವಿವಿಧ ಶಾಲಾ-ಕಾಲೇಜು, ಸಂಘ-ಸಂಸ್ಥೆ, ಸರ್ಕಾರಿ ಕಚೇರಿ, ಬ್ಯಾಂಕು, ಹಳ್ಳಿ, ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾತೆ ಹಾಗೂ ಎತ್ತುಗಳ (ನಂದಿ)ಕುರಿತಾಗಿ ಉಪನ್ಯಾಸ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಕೇವಲ 3 ನೇ ಇಯತ್ತೆವರೆಗೆ ಓದಿರುವ ಇವರದು ಕಡು ಬಡತನ. ಪತ್ನಿ, ಮೂವರು ಹೆಣ್ಣು ಮಕ್ಕಳ ತುಂಬು ಕುಟುಂಬ. ಸಮಾಜಕ್ಕೆ  ನನ್ನ ಕೊಡುಗೆ ಏನೆಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದರು. ಒಮ್ಮೆ ಬೀದರ ಜಿಲ್ಲೆಯ ಬಸವ ಕಲ್ಯಾಣಕ್ಕೆ ಪ್ರವಾಸ ಹೋಗಿ ಅನುಭವ ಮಂಟಪದಲ್ಲಿ ಮಲಗಿದಾಗ ರಾತ್ರಿ ಒಂದು ಕನಸು ಬಿತ್ತಂತೆ. ಜಗತ್ತಿಗೆ ಪೂಜನೀಯವಾಗಿರುವ ಗೋವು ಹಾಗೂ ರೈತನ ಒಡನಾಡಿ ಎತ್ತುಗಳ ಕುರಿತಾಗಿ ಜಾಗೃತಿ ಮೂಡಿಸು, ಎಲ್ಲೆಡೆ ಉಪನ್ಯಾಸ ಮಾಡುವ ಕಾಯಕರೂಪದಲ್ಲಿ ಸೇವೆ ರೂಪಿಸಿಕೋ ಎಂದು ಕನಸಿನಲ್ಲಿ ಗೋಚರಿಸಿತಂತೆ. ಆವಾಗಿನಿಂದ ಈ ವಿಚಾರವನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಳೆದ ಸುಮಾರು ಮೂವತ್ತು ವರ್ಷಗಳಿಂದ ಎಡೆಬಿಡದೇ ತಮ್ಮ ಶಕ್ತಿ ಮೀರಿ ಎಲ್ಲೆಡೆ ಉಪನ್ಯಾಸ ನೀಡುತ್ತಿರುವುದು ಬಹು ದೊಡ್ಡ ಸಾಧನೆ ಎಂದೇ ಹೇಳಬೇಕು. ಹಜೇರಿಯವರು ಇಲ್ಲಿಯವರೆಗೆ ರಾಜ್ಯಾದ್ಯಂತ ಸುಮಾರು 50,000ಕ್ಕೂ ಹೆಚ್ಚು ಮೌಲ್ಯಾಧಾರಿತ ಉಪನ್ಯಾಸ ನೀಡಿ ವಿದ್ಯಾರ್ಥಿಗಳ, ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಗೋ ಸಾಕಾಣಿಕೆಯಿಂದಾಗುವ ಆರ್ಥಿಕ ಲಾಭಗಳು, ಗೋ ಹತ್ಯೆ ತಡೆ ಮೊದಲಾದ ವಿಷಯಗಳ ಕುರಿತು ಉಪನ್ಯಾಸ ಕೊಡುವ ಇವರು ಆಯೋಜಕರು ಅಷ್ಟಿಷ್ಟು ಕೊಡುವ  ಕಾಸನ್ನೇ ಕಾಯಕ ರೂ ದ ಸಂಭಾವನೆ ಎಂದು ಭಾವಿಸಿ ಜೀವನ ನಡೆಸುತ್ತಿದ್ದಾರೆ.

Advertisement

ಇಂಚಲದ ಶಿವಾನಂದ ಭಾರತಿ ಶ್ರೀಗಳು ಬೈಲಹೊಂಗಲ ತಾಲೂಕಿನ ಮುರಕೀಭಾಂವಿ ಗ್ರಾಮದಲ್ಲಿ 2013ರಲ್ಲಿ ನಡೆದ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶ್ರೀ ಸಿದ್ಧಾರೂಡ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಸೇರಿದಂತೆ ನಾಡಿನ ವಿವಿಧ ಸಂಘ, ಸಂಸ್ಥೆ, ಶಿಕ್ಷಣ ಕೇಂದ್ರಗಳಿಂದ ವಿವಿಧ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವರ ಸಂಪರ್ಕ ಸಂಖ್ಯೆ 9945948943.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next