Advertisement
ಮಂಗಳವಾರ ನಡೆದ ಡಿಕೆಶಿಯವರ ಜಾಮೀನು ಅರ್ಜಿ ವಿಚಾರಣೆಯ ವೇಳೆ ವಾದ ಮಂಡಿಸಿದ ಡಿಕೆಶಿ ಪರ ವಕೀಲರ ತಂಡ, “ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಅವರಿಗೆ ಆ್ಯಂಜಿಯೋಗ್ರಫಿ ನಡೆಸಲಾಗಿದೆ. ಹಾಗಿದ್ದರೂ, ಅವರನ್ನು 45 ದಿನಗಳವರೆಗೆ ಬಂಧನದಲ್ಲಿ ಇರಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಕಕ್ಷಿದಾರರನ್ನು ದೀರ್ಘಾವಧಿಯ ಬಂಧನದಲ್ಲಿ ಇರಿಸುವ ಹಾಗಿಲ್ಲ. ಹಾಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ನ್ಯಾ. ಸುರೇಶ್ ಕೈಟ್ ಅವರಲ್ಲಿ ಮನವಿ ಮಾಡಿತು.
Related Articles
Advertisement
ಗುರುವಾರಕ್ಕೆ ಮುಂದೂಡಿಕೆ: ಡಿಕೆಶಿ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಸುರೇಶ್ ಕೈಟ್, ವಿಚಾರಣೆಯನ್ನು ಅ 17ಕ್ಕೆ ಮುಂದೂಡಿದರು. ಅಂದು, ಇ.ಡಿ ಪರ ವಕೀಲರು ತಮ್ಮ ಅಹವಾಲು ಸಲ್ಲಿಸುವಂತೆ ನ್ಯಾಯಮೂರ್ತಿ ಸೂಚಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಆಪ್ತರಿಗೆ “ಮಧ್ಯಂತರ ರಕ್ಷಣೆ’ಬೆಂಗಳೂರು: ಐಟಿ ದಾಳಿ ವೇಳೆ ದೆಹಲಿ ನಿವಾಸದಲ್ಲಿ ಸಿಕ್ಕ 8.69 ಕೋಟಿ ರೂ. ಬೇನಾಮಿ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಪ್ತರಾದ ಸಚಿನ್ ನಾರಾಯಣ ಹಾಗೂ ಸುನೀಲ್ ಶರ್ಮಾ ಅವರನ್ನು 1 ವಾರದ ಮಟ್ಟಿಗೆ ಬಂಧಿಸದಂತೆ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ಸಚಿನ್ ನಾರಾಯಣ, ಸುನೀಲ್ ಶರ್ಮಾ ಹಾಗೂ ಇತರರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರನ್ನು ಬಂಧಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಒಂದು ವಾರ ವಿಸ್ತರಿಸಿ ಆದೇಶಿಸಿತು. ಪ್ರಕರಣದ ಸಂಬಂಧ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ್ದ ಅರ್ಜಿದಾರರು ಅಲ್ಲಿಯವರೆಗೆ ತಮ್ಮನ್ನು ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಬಂಧನಾವಧಿ ವಿಸ್ತರಣೆ: ಡಿ.ಕೆ.ಶಿವಕುಮಾರ್‌ರವರ ನ್ಯಾಯಾಂಗ ಬಂಧನವನ್ನು ದೆಹಲಿ ಸ್ಥಳೀಯ ನ್ಯಾಯಾಲಯ ಅ.25ರವರೆಗೆ ವಿಸ್ತರಿಸಿದೆ. ಈ ಹಿಂದೆ ವಿಧಿಸಲಾಗಿದ್ದ ಬಂಧನಾವಧಿಯು ಅ.15ರಂದು (ಮಂಗಳವಾರ) ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ, ಇ.ಡಿ ಪರ ವಕೀಲರು, ಹೆಚ್ಚುವರಿ ವಿಚಾರಣೆಗಾಗಿ ಕಾಲಾವಕಾಶ ಕೋರಿದರು. ಇದಕ್ಕೆ ಡಿಕೆಶಿ ಪರ ವಕೀಲರು ವಿರೋಧಿಸಲಿಲ್ಲ. ಹಾಗಾಗಿ, ನ್ಯಾ.ಅಜಯ್ ಕುಮಾರ್ ಕುಹರ್, ಡಿಕೆಶಿಯವರ ಬಂಧನಾವಧಿಯನ್ನು ಅ.25ರವರೆಗೆ ವಿಸ್ತರಿಸಿ ಆದೇಶ ನೀಡಿದರು. ಕುರ್ಚಿ ನೀಡಲು ಕೋರ್ಟ್ ಸೂಚನೆ: ತಿಹಾರ್ ಜೈಲಿನಲ್ಲಿರುವ ಡಿಕೆಶಿರವರ ಸೆಲ್‌ಗೆ ಕುರ್ಚಿ, ಟಿವಿಯನ್ನು ಕೊಡಬೇಕೆಂದು ದೆಹಲಿಯ ಸಿಬಿಐ ನ್ಯಾಯಾಲಯ, ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ. ಶಿವಕುಮಾರ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಜೈಲಿನ ನಿಯಮಗಳಿಗೆ ಅನುಸಾರವಾಗಿ ನೀಡಬೇಕಿರುವ ಸೌಲಭ್ಯಗಳನ್ನು ನೀಡುವಂತೆ ನ್ಯಾಯಾಧೀಶರು ಸೂಚಿಸಿದರು.