ಬೆಂಗಳೂರು: ಯಶವಂತಪುರ ಹೋಬಳಿ ನಾಗಸಂದ್ರದ ಗ್ರಾಮದ ರಾಮಲಿಂಗೇಶ್ವರ ಮಠಕ್ಕೆ ಸೇರಿದ ಜಾಗದಲ್ಲಿ ಅಳವಡಿಸಲಾಗಿದ್ದ ನಾಮಫಲಕ ಕಿತ್ತು ಹಾಕಿದ, ಮರಗಳನ್ನು ಕತ್ತರಿಸಿದ ಹಾಗೂ ಮಠದ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ನೀರಿಕ್ಷಣಾ ಜಾಮೀನು ಕೋರಿ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಮಠದ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು. ಅರ್ಜಿದಾರರು (ಆರೋಪಿ) 50 ಸಾವಿರ ರೂ. ಮೊತ್ತದ ವೈಯುಕ್ತಿಕ ಬಾಂಡ್ ಒದಗಿಸಬೇಕು.
ವಿಚಾರಣಾ ನ್ಯಾಯಾಲಯ ಸಮಾಧಾನಪಟ್ಟುಕೊಳ್ಳ ಬಹುದಾದಷ್ಟು ಮೊತ್ತದ ಭದ್ರತಾ ಖಾತರಿ ನೀಡಬೇಕು. ವಿಚಾರಣಾಧಿಕಾರಿ ಕರೆದಾಗಲೆಲ್ಲಾ ವಿಚಾರಣೆಗೆ ಹಾಜರಾಗಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಎಂದು ಹೈಕೋರ್ಟ್ ಷರತ್ತುಗಳನ್ನು ವಿಧಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರು ಏಳನೇ ಆರೋಪಿಗಳಾಗಿದ್ದಾರೆ. ಈಗಾಗಲೇ 1ನೇ ಮತ್ತು 3ನೇ ಆರೋಪಿಗೆ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
1 ಮತ್ತು 3ನೇ ಆರೋಪಿಗಳ ವಿರುದ್ಧ ಮಾಡಲಾದ ಆರೋಪಗಳನ್ನೇ ಅರ್ಜಿದಾರರ ಮೇಲೆಹೊರಿಸಲಾಗಿದೆ. ಈಗಾಗಲೇ ಇಬ್ಬರಿಗೆ ಜಾಮೀನು ನೀಡಲಾಗಿದೆ. ಹಾಗಾಗಿ, ಒಂದೇ ತರಹದ ಆರೋಪಗಳನ್ನು ಎದುರಿಸುತ್ತಿರುವ ಅರ್ಜಿದಾರರೂ ಜಾಮೀನು ಪಡೆದುಕೊಳ್ಳುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದರು. ಇದನ್ನು ನ್ಯಾಯಪೀಠ ಮಾನ್ಯ ಮಾಡಿದೆ.
ಏನಿದು ಪ್ರಕರಣ?: ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ನಾಗಸಂದ್ರ ಗ್ರಾಮದ 10 ಎಕರೆ 18 ಗುಂಟೆ ಜಮೀನಿನಲ್ಲಿ ಇರುವ ಶ್ರೀರಾಮಲಿಂಗೇಶ್ವರ ಮಠದ ಆವರಣಕ್ಕೆ 2019ರ ಡಿ.27ರಂದು ಅಕ್ರಮವಾಗಿ ಪ್ರವೇಶ ಮಾಡಿದ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಠದ ಜಾಗದಲ್ಲಿ ಅಳವಡಿಸಲಾಗಿದ್ದ ನಾಮಫಲಕ ಕಿತ್ತು ಹಾಕಿ, ಮರಗಳನ್ನು ಕಿತ್ತುಹಾಕಿದರು,
ಮಠದ ಸಿಬ್ಬಂದಿಗೆ ಬೆದರಿಕೆ ಹಾಕಿದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಠದಲ್ಲಿ ಅತಿಕ್ರಮ ಪ್ರವೇಶ ಮಾಡಿ, ದರೋಡೆ ನಡೆಸಿದ್ದಾರೆ ಎಂದು ಆರೋಪಿಸಿ ಯಶವಂತಪುರ ರಾಮಲಿಂಗೇಶ್ವರ ಮಠದ ಶ್ರೀ ಚಂದ್ರ ಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೀಣ್ಯ ಠಾಣಾ ಪೋಲಿಸರು ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 9 ಮಂದಿಯ ವಿರುದ್ಧ ಎಫ್ಐಆರ್ ಹಾಕಿದ್ದರು. ಜಾಮೀನು ಕೋರಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ನಿರೀಕ್ಷಣಾ ಜಾಮೀನು ಕೋರಿ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು.