Advertisement
ಇಲ್ಲಿನ ಗೋದಾಮಿನಿಂದ ಸರಕು ಸಾಗಣೆಗಾಗಿ ದಿನದ ಬಹುಪಾಲು ಸಮಯ ಒಂದಲ್ಲ ಒಂದು ರೈಲು ಇಲ್ಲಿ ನಿಂತೇ ಇರುತ್ತದೆ. ಹೀಗಾಗಿ ದಾಟುವುದು ನಿತ್ಯ ಸರ್ಕಸ್.
ಮೀನಕಳಿಯಕ್ಕೆ ಹೋಗಲು ಎರಡು ದಾರಿಗಳಿವೆ. ಒಂದು ಪಣಂಬೂರಿನ ಕೈಗಾರಿಕೆ ಪ್ರದೇಶ ನಿಲ್ದಾಣದಿಂದ ನೇರವಾಗಿ ಪಶ್ಚಿಮಕ್ಕೆ ಸಾಗಿದರೆ ಕೇವಲ 1 ಕಿ.ಮೀ. ದೂರ. ಇನ್ನೊಂದು, ಬೈಕಂಪಾಡಿಗೆ ಹೋಗಿ ಅಲ್ಲಿಂದ ಪ್ರಧಾನ ರಸ್ತೆಯಲ್ಲಿ ಸುಮಾರು 4 ಕಿ.ಮೀ. ಸುತ್ತಿ ಹೋಗಬೇಕು. ಆದರೆ ಅತೀ ಹೆಚ್ಚು ಜನರು ಬಳಸುವ ಸಮೀಪದ ರಸ್ತೆಗೆ ರೈಲು ಹಳಿ ಮತ್ತು ರೈಲು ಸದಾ ಕಾಲ ತಡೆಯಾಗಿದೆ. ಸುಮಾರು ಸಾವಿರಕ್ಕೂ ಅಧಿಕ ಜನರಿರುವ ಊರಲ್ಲಿ ಎಲ್ಲರ ಬಳಿಯೂ ದ್ವಿಚಕ್ರ ಸಹಿತ ವಾಹನವಿಲ್ಲ. ರಿಕ್ಷಾ ದಲ್ಲಿ ನಿತ್ಯ 70 ರೂ. ನೀಡಿ ಓಡಾಡುವಷ್ಟು ಆರ್ಥಿಕ ಸ್ಥಿತಿವಂತರೂ ಇವರಲ್ಲ.
Related Articles
Advertisement
ಒಂದು ರೈಲು ಒಮ್ಮೆ ಬಂದು ನಿಂತರೆ ಗಂಟೆಗಟ್ಟಲೆ ಲೋಡಿಂಗ್ ನಡೆಯುತ್ತದೆ. ಹೀಗಾಗಿ ಜನರು ರೈಲನ್ನು ದಾಟಿಕೊಂಡೇ ಹೋಗಬೇಕು. ಯುವಕರು, ಪುರುಷರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಹೇಗೋ ರೈಲಿನ ಎರಡು ಬೋಗಿಗಳ ನಡುವಿನ ಸಣ್ಣ ಜಾಗದಲ್ಲಿ ತೂರಿಕೊಂಡು ದಾಟುತ್ತಾರೆ. ಆದರೆ ಪುಟ್ಟ ಮಕ್ಕಳಿಗೆ, ವಯಸ್ಸಾದವರಿಗೆ ಅದೂ ಕಷ್ಟ. ಅವರು ರೈಲಿನಡಿ ಬಗ್ಗಿಕೊಂಡು ದಾಟಬೇಕಾಗುತ್ತದೆ. ಅದೆಷ್ಟೋ ವೃದ್ಧರಿಗೆ, ಮಹಿಳೆಯರಿಗೆ ರೈಲಿನ ಅಡಿಯಲ್ಲಿ ನುಸುಳಿಕೊಂಡು ಹೋಗುವುದು ಕೂಡ ಕಷ್ಟ. ಅವರು ಬಗ್ಗಿಕೊಂಡು ಉರುಳಾಡಿಕೊಂಡು ಹಳಿ ದಾಟುವ ದೃಶ್ಯವೇ ಕರುಣಾಜನಕ.
ನಿಂತ ರೈಲಿನ ನಡುವೆ ತಮ್ಮ ಸರಕು ಸರಂಜಾಮು, ಬ್ಯಾಗ್‌ಗಳನ್ನು ಹಿಡಿದು ಕೊಂಡು ದಾಟುವುದು ಅನಿವಾರ್ಯ. ವಯೋವೃದ್ಧರು, ಮಹಿಳೆಯರು ರೈಲು ಹತ್ತಿ ಇಳಿಯುವುದರಿಂದ ಕೈ ಕಾಲು ನೋವು, ಮಂಡಿ ನೋವು ಬಾಧಿಸುತ್ತಿದೆ.
ಈ ರೈಲು ಹಳಿಗೆ ಶಾಶ್ವತ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ರೈಲ್ವೇ ಇಲಾಖೆ, ಬಂದರು ಇಲಾಖೆ ಬಳಿ ಇಲ್ಲಿನ ಜನರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾರೂ ಮನಸು ಮಾಡಿಲ್ಲ. ಊರಿನ ಮಂದಿ ಸಮಸ್ಯೆ ಬಗೆಹರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಮೇಲ್ ಮೂಲಕ ಮನವಿ ಅರ್ಪಿಸಿ ದ್ದರು. ಮನವಿಗೆ ಪ್ರಧಾನ ಮಂತ್ರಿ ಕಾರ್ಯಾಲಯ ಉತ್ತರಿಸಿ, ಶಾಶ್ವತ ಮೇಲ್ಸೇತುವೆಯ ವೆಚ್ಚವನ್ನು ಬಂದರು ಮತ್ತು ರಾಜ್ಯ ಸರಕಾರ, ಪಾಲಿಕೆ ಜತೆಯಾಗಿ ಮಾಡಿಕೊಡಿ ಎಂದು ಸಲಹೆ ನೀಡಿತ್ತು. 2023ರ ಡಿಸೆಂಬರ್ ವೇಳೆಗೆ ಈ ಮೇಲ್ ಬಂದಿದ್ದರೂ ಯಾರೂ ಸ್ಪಂದಿಸಿಲ್ಲ. ಹೆದ್ದಾರಿ ಬಳಿಯೂ ಕಾಲುದಾರಿಗೆ ಸಮಸ್ಯೆ
ಗ್ರಾಮಸ್ಥರು ತಮ್ಮ ನಿತ್ಯ ಕಾಯಕಕ್ಕೆ ಹೋಗುವ ದಾರಿಗಳು, ಇಲ್ಲಿನ ಬಸ್ ನಿಲ್ದಾಣ ಎಲ್ಲವೂ ಹೆದ್ದಾರಿ ವಿಸ್ತರಣೆ, ಪೆಟ್ರೋಲ್ ಬಂಕ್ ವಿಸ್ತರಣೆಯ ವೇಳೆ ಮುಚ್ಚಲ್ಪಟ್ಟಿತ್ತು. ಸಮರ್ಪಕ ಕಾಲುದಾರಿ ಹಾಗೂ ಪಾಲಿಕೆಯ ವತಿಯಿಂದ ತಂಗುದಾಣ ನಿರ್ಮಿಸಲು ಮನವಿ ಕೊಟ್ಟಿದ್ದರೂ ಭರವಸೆ ಮಾತ್ರ ಉಳಿದುಕೊಂಡು ಬಿಟ್ಟಿದೆ. ಸಂಸದರ ಮೇಲೆ ಗ್ರಾಮಸ್ಥರ ಚಿತ್ತ
ಇತ್ತೀಚೆಗೆ ವಿಶೇಷ ಆರ್ಥಿಕ ವಲಯದಲ್ಲಿ ಕೆಲಸ ಕಳೆದುಕೊಂಡವರಿಗೆ ಕೆಲಸ ತೆಗೆದುಕೊಟ್ಟು ಅಲ್ಲಿಯ ನೌಕರರ ಗೌರವಕ್ಕೆ ಪಾತ್ರವಾದ ಸಂಸದ ಬ್ರಿಜೇಶ್ ಚೌಟ ಅವರ ಮೇಲೆ ಗ್ರಾಮಸ್ಥರ ಚಿತ್ತ ನೆಟ್ಟಿದೆ. ನೂತನ ಸಂಸದರನ್ನು ಭೇಟಿಯಾಗಿ ಮನವಿ ಅರ್ಪಿಸಿ ಸಮಸ್ಯೆ ತಿಳಿಸಲು ಮುಂದಾಗಿದ್ದಾರೆ. ಬಂದರು ಬಳಿಯ ಗೂಡ್ಸ್ ರೈಲು ಹಳಿಯ ಬಳಿ ಮೇಲ್ಸೇತುವೆ ಇಲ್ಲವೇ ಕೆಳ ಸೇತುವೆ ಮಾಡಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು ಎನ್ನುವ ಬಹು ದಿನದ ಬೇಡಿಕೆ ಪೂರೈಸಲು ಮನವಿ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಸಮಸ್ಯೆ ಬಗೆ ಹರಿಸಲು ಗರಿಷ್ಠ ಪ್ರಯತ್ನ
ರೈಲ್ವೇ ಯಾರ್ಡ್ ಬಳಿ ಜನರ, ವಿದ್ಯಾರ್ಥಿಗಳ ಓಡಾಟಕ್ಕೆ ರೈಲು ನಿಲ್ದಾಣಗಳಲ್ಲಿ ಇರುವಂತೆ ಕಬ್ಬಿಣದ ಮೇಲ್ಸೇತುವೆ ನಿರ್ಮಿಸುವ ಕುರಿತಂತೆ ಪ್ರಸ್ತಾವ ಮಂಡಿಸಿದ್ದೆ. ತಾಂತ್ರಿಕ ಕಾರಣಕ್ಕೆ ವಿಳಂಬವಾಗಿರುವ ಮಾಹಿತಿ ಲಭಿಸಿದೆ. ಈ ಕುರಿತಂತೆ ಸಂಸದರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲು ಗರಿಷ್ಠ ಪ್ರಯತ್ನ ನಡೆಸಲಾಗುವುದು.
– ಡಾ| ಭರತ್ ಶೆಟ್ಟಿ ವೈ ಶಾಸಕರು -ಲಕ್ಷ್ಮೀನಾರಾಯಣ ರಾವ್