Advertisement

ಸಮೀಕ್ಷೆಗಷ್ಟೇ ಸೀಮಿತವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

05:43 PM Feb 27, 2017 | Team Udayavani |

ಕಡಬ: ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕುಡಿಯುವ ನೀರಿನ ಕೊರತೆ ಈಗ ಗ್ರಾಮೀಣ ಭಾಗಗಳಿಗೂ ವಿಸ್ತರಣೆಯಾಗಿದೆ.

Advertisement

ಕೊಳವೆಬಾವಿಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲವಾದ್ದರಿಂದ ಅವುಗಳನ್ನೂ ನಂಬ ದಂತಾಗಿದೆ. ಈ ಹಿನ್ನೆಲೆಯಲ್ಲಿ ಬಹುಗ್ರಾಮ ನೀರಿನ ಯೋಜನೆಗಳ ಅನುಷ್ಠಾನದ ಅಗತ್ಯ ಹೆಚ್ಚಾಗಿದೆ.

ಯೋಜನೆಯಲ್ಲೇ ಉಳಿಯಿತು
ನೀರಿನ ಸಮಸ್ಯೆ ಬಗೆಹರಿಸಲು 4 ವರ್ಷಗಳ ಹಿಂದೆ ಸರಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ನದಿಗಳಿಂದ ನೀರೆತ್ತಿ ಕುಡಿಯುವ ನೀರು ಪೂರೈಸಲು ನಡೆಸಿದ ಯೋಜನೆ ಸಮೀಕ್ಷೆಯ ಹಂತದಲ್ಲೇ ಉಳಿದಿದೆ. ಜಿಲ್ಲೆಯಲ್ಲಿ ಒಟ್ಟು 25 ಕಡೆ ಅನುಷ್ಠಾನಗೊಳ್ಳಲಿದ್ದು, ತಾಲೂಕಿನ 9 (ಸವಣೂರು, ನರಿಮೊಗರು, ಕಾಣಿಯೂರು, ಬೆಳಂದೂರು, ಕೆದಂಬಾಡಿ, ಆಲಂಕಾರು, ಕೊçಲ, ಕಡಬ ಹಾಗೂ 34ನೇ ನೆಕ್ಕಿಲಾಡಿ) ಗ್ರಾಮಕೇಂದ್ರಗಳು ಸೇರಿದ್ದವು. ಈ ಪೈಕಿ ಕಡಬ ಕೇಂದ್ರವಾಗಿ ಪರಿಸರದ 13 (ಕಡಬ, ಕೋಡಿಂಬಾಳ, ಕುಟ್ರಾಪ್ಪಾಡಿ, ಬಲ್ಯ, ಮರ್ಧಾಳ, 102ನೇ ನೆಕ್ಕಿಲಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಐತ್ತೂರು, ಕೊಣಾಜೆ, ಬಿಳಿನೆಲೆ, ಕೊಂಬಾರು ಹಾಗೂ ಶಿರಿಬಾಗಿಲು) ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಪೂರೈಸುವುದಾಗಿ ಹೇಳಲಾಗಿತ್ತು. ಆದರೆ ಸಮೀಕ್ಷೆ ನಡೆದು 4 ವರ್ಷಗಳಾದರೂ ಯೋಜನೆ ಕಾರ್ಯಗತಗೊಂಡಿಲ್ಲ.

ಈ ಕುರಿತು ಪ್ರಾಥಮಿಕ ಸಮೀಕ್ಷೆ ಕೈಗೊಂಡಿದ್ದ ಬೆಂಗಳೂರಿನ ಸ್ಪೇಸ್‌ ಜಿಯೋಟೆಕ್‌ ಸಂಸ್ಥೆಯ ತಂತ್ರಜ್ಞರು ಕಡಬ ಪರಿಸರದಲ್ಲಿ ಕುಮಾರಧಾರ ಹೊಳೆಯ ಪಾಲೋಳಿ(ಪಿಜಕ್ಕಳ), ಪುಳಿಕಕ್ಕು (ಕೋಡಿಂಬಾಳ) ಹಾಗೂ ಗುಂಡ್ಯ ಹೊಳೆಯ ಹೊಸಮಠ (ಕುಟ್ರಾಪ್ಪಾಡಿ) ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದಲ್ಲದೇ, ನೀರು ಸಂಗ್ರಹಕ್ಕೆ ಟ್ಯಾಂಕ್‌ ನಿರ್ಮಿಸಲು ಎತ್ತರ ಪ್ರದೇಶಗಳನ್ನು ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು.
 
ಈಗಿನ ಕೊಳವೆಬಾವಿಗಳಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ಮತ್ತಷ್ಟು ಕೊಳವೆಬಾವಿ ಕೊರೆದು ಹಣ ಪೋಲು ಮಾಡುವುದಕ್ಕಿಂತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೇ ಸೂಕ್ತ. ಈಗಿನ ಸಮೀಕ್ಷೆಯಂತೆ ಕಡಬವನ್ನು ಕೇಂದ್ರವಾಗಿಟ್ಟುಕೊಂಡು 13 ಗ್ರಾಮಗಳಿಗೆ ನೀರು ಪೂರೈಸುವ ಬದಲು, 4-5 ಗ್ರಾಮಗಳಿಗೆ ಒಂದು ಸ್ಥಾವರದಂತೆ ಕಾರ್ಯಗತಗೊಳಿಸುವುದು ಸೂಕ್ತ ಎನ್ನುತ್ತಾರೆ ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌.

ಸಮಯ ಬೇಕು 
ಸರಕಾರವೂ ನದಿಗಳಿಂದ ನೀರನ್ನು ಸಂಗ್ರಹಿಸಿ ಹಲವು ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ರೂಪಿಸುತ್ತಿದೆ. ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಸಮಯ ಬೇಕು. ಹಾಗಾಗಿ ತುರ್ತಾಗಿ ನೀರು ಪೂರೈಸಲು ಈಗಲೂ ಕೊಳವೆ ಬಾವಿಗಳನ್ನೇ ಆಶ್ರಯಿಸಬೇಕಾಗಿದೆ.

– ಪ್ರಭಾಚಂದ್ರ,  ಜಿ.ಪಂ. ಎಂಜಿನಿಯರ್‌

Advertisement

ಸರಕಾರ ಮಟ್ಟದಲ್ಲಿ ಒತ್ತಡ 
ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಸರಕಾರ ಈ ಯೋಜನೆಯನ್ನು ರೂಪಿಸಿತ್ತು. ಆದರೆ ಇದಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿದ್ದು, ಲಭ್ಯವಿಲ್ಲದ್ದರಿಂದ ಪ್ರಗತಿ ಕಂಡಿಲ್ಲ. ಈ ಸಂಬಂಧ ಇಲಾಖೆಗಳಿಗೆ ಪತ್ರ ಬರೆದಿದ್ದು, ಸರಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ.
– ಎಸ್‌.ಅಂಗಾರ, ಸುಳ್ಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next