ಲಕ್ನೋ: ಕಳೆದ ಕೆಲವು ತಿಂಗಳುಗಳಿಂದ ಉತ್ತರಪ್ರದೇಶದ ಬಹ್ರೈಚ್ ಪ್ರದೇಶದಲ್ಲಿ ನರಭಕ್ಷಕ ತೋಳಗಳು ಸತತವಾಗಿ ದಾಳಿ ನಡೆಸುತ್ತಿದ್ದು, ಏತನ್ಮಧ್ಯೆ ನರಭಕ್ಷಕ ತೋಳಗಳ ದಾಳಿಗೆ ಮೂರು ವರ್ಷದ ಮಗುವೊಂದು ಬಲಿಯಾಗಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಭಾನುವಾರ (ಸೆ.01) ತಡರಾತ್ರಿ ತೋಳಗಳ ದಾಳಿಗೆ ಇಬ್ಬರು ಮಹಿಳೆಯರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಅಧಿಕಾರಿಗಳ ಮೂಲಗಳ ಪ್ರಕಾರ, ಜುಲೈ 17ರಿಂದ ಈವರೆಗೆ ಆರು ನರಭಕ್ಷಕ ತೋಳಗಳ ಗುಂಪು ನಡೆಸಿದ ದಾಳಿಗೆ ಆರು ಮಕ್ಕಳನ್ನು ಕೊಂದಿದ್ದು, ಹಲವು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದಾಗಿ ತಿಳಿಸಿದೆ.
ತೋಳಗಳ ದಾಳಿಗೆ ಹಲವು ಗ್ರಾಮಸ್ಥರ ಜನರು ಭೀತಿಗೊಳಗಾಗಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ತೋಳಗಳನ್ನು ಸೆರೆಹಿಡಿಯಲಾಗಿದ್ದು, ಇನ್ನೂ ಎರಡು ತೋಳಗಳನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಟೆಪ್ರಾ ಗ್ರಾಮದಲ್ಲಿ ತೋಳಗಳು ದಾಳಿ ನಡೆಸಿ, ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿರುವುದಾಗಿ ವರದಿ ವಿವರಿಸಿದೆ. ಏತನ್ಮಧ್ಯೆ ಅರಣ್ಯ ಇಲಾಖೆ ಅತ್ಯಾಧುನಿಕ ಡ್ರೋನ್ಸ್ ಅನ್ನು ಬಳಸಿ ನರಭಕ್ಷಕ ತೋಳಗಳ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.