Advertisement

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

08:31 AM Apr 25, 2024 | Team Udayavani |

ಬೀದರ್‌: ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಪ್ರಜಾ ಪ್ರಭುತ್ವದ ಪರಿಕಲ್ಪನೆಯನ್ನು ಸಾರಿದ ಬೀದರ್‌ ನೆಲದಲ್ಲಿ ಕಾಂಗ್ರೆಸ್‌ ಹೆಚ್ಚು ಪ್ರಾಬಲ್ಯ ಸಾ ಧಿಸಿದೆ. ಕೈ ತೆಕ್ಕೆಯಲ್ಲಿದ್ದ ಕ್ಷೇತ್ರ ಕ್ರಮೇಣ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ. ಈ ಲೋಕಸಭಾ ಕ್ಷೇತ್ರದ ಮೇಲೆ ಈಗ ಮತ್ತೆ ಹಿಡಿತ ಸಾಧಿ ಸಲು ಎರಡು ರಾಷ್ಟ್ರೀಯ ಪಕ್ಷಗಳು ಸಮರಕ್ಕೆ ಇಳಿದಿವೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ದೇಶದ ಕಿರಿಯ ಅಭ್ಯರ್ಥಿಯಾಗಿರುವ ಕಾಂಗ್ರೆಸ್‌ನ ಸಾಗರ್‌ ಖಂಡ್ರೆ ಸವಾಲು ಹಾಕಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಂಸತ್‌ ಪ್ರವೇಶಿಸುವ ತವಕದಲ್ಲಿದ್ದಾರೆ.

Advertisement

ಭಾರತದ ಸಂವಿಧಾನ ಜಾರಿಯಾದ ಅನಂತರ ಬೀದರ್‌ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್‌ ಮತ್ತು 7 ಬಾರಿ ಬಿಜೆಪಿ ಗೆಲುವು ಸಾ ಧಿಸಿದೆ. ಸತತ 10 ಬಾರಿ ಗೆದ್ದು ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಗಡಿ ಕ್ಷೇತ್ರದಲ್ಲಿ ನಂತರ ದಿ|ರಾಮಚಂದ್ರ ವೀರಪ್ಪ ಸತತ ಐದು ಬಾರಿ ಕಮಲ ಅರಳಿಸಿದ್ದರು. ಆ ಬಳಿಕ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಎರಡು ಬಾರಿ ಕ್ಷೇತ್ರದಲ್ಲಿ ಹಿಡಿತ ಸಾ ಧಿಸಿವೆ. ಕಳೆದ 10 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿರುವ ಬೀದರ ಕ್ಷೇತ್ರವನ್ನು ಶತಾಯಗತಾಯ ಕೈ’ ವಶ ಮಾಡಿಕೊಳ್ಳಲು ಕಾಂಗ್ರೆಸ್‌ ತಂತ್ರ ಹೆಣೆಯುತ್ತಿದ್ದರೆ, ಇತ್ತ ಬಿಜೆಪಿ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ಪ್ರತಿತಂತ್ರ ರೂಪಿಸುತ್ತಿದೆ.

ಶಾಸಕರ ಬಲಾಬಲ: ಸತತ ಎರಡು ಬಾರಿ ಸಂಸದರಾಗಿ ಬೀದರ ಜಿಲ್ಲೆಯಿಂದ ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ಭಗವಂತ ಖೂಬಾ, ಮೂರನೇ ಸಲ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಮಾಜಿ ಸಿಎಂ ಧರಂಸಿಂಗ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಈಶ್ವರ ಖಂಡ್ರೆ ಅಂಥ ಘಟಾನುಘಟಿಗಳನ್ನು ಸೋಲಿಸಿ ವರ್ಚಸ್ಸು ಹೆಚ್ಚಿಸಿಕೊಂಡವರು. ಈಗ ಬೀದರ್‌ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಬಾರಿ ಐದು ಕ್ಷೇತ್ರಗಳಲ್ಲಿ ಕಮಲ ಅರಳಿರುವುದು ಜತೆಗೆ ಜೆಡಿಎಸ್‌ನೊಂದಿಗೆ ಚುನಾವಣ ಮೈತ್ರಿಯಿಂದ ಬಲ ಹೆಚ್ಚಿದಂತಾಗಿದೆ. ಆದರೆ ಸ್ವಪಕ್ಷದ ಶಾಸಕರ ಜತೆಗಿನ ಮುಸುಕಿನ ಗುದ್ದಾಟ ಕಾರಣ ಅಭ್ಯರ್ಥಿ ಗೆಲುವಿನ ದಡ ಸೇರುವುದು ಸುಲಭ ಇಲ್ಲ. ಇದರ ಲಾಭವನ್ನು ಪಡೆ ಯಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದೆ.

ಲೋಕಸಭೆ ಇಲ್ಲವೇ ವಿಧಾನಸಭೆ ಯಾವುದೇ ಚುನಾವಣೆಗಳಲ್ಲಿಯೂ ಅಭಿವೃದ್ಧಿ ವಿಚಾರಗಳು ಮತ್ತು ಸಮಸ್ಯೆಗಳ ಪ್ರಸ್ತಾವ ಗೌಣ. ಅಭ್ಯರ್ಥಿಯ ಹಣ, ಜಾತಿ ಬೆಂಬಲ, ರಾಜಕೀಯ ಪಕ್ಷಗಳ ಬಲ ಮತ್ತು ಸ್ಥಳೀಯ ವಿಚಾರಗಳೇ ಗೆಲುವಿನ ಪ್ರಮುಖ ವಿಷಯ ಗಳಾಗಿರುತ್ತವೆ ಎಂಬುದು ಸತ್ಯ. ಕಳೆದೆರಡು ಅವ ಧಿಯಂತೆ ಮೈತ್ರಿ ಅಭ್ಯರ್ಥಿ ಖೂಬಾ ಪ್ರಧಾನಿ ಮೋದಿ ನಾಮ ಬಲ ಮತ್ತು ತನ್ನ ಕಾರ್ಯ ಸಾಧನೆ ಮುಂದಿಟ್ಟುಕೊಂಡು ಮತ ಬೇಟೆಗಿಳಿದಿದ್ದಾರೆ. ಇನ್ನೊಂದೆಡೆ ಹೊಸ ಮುಖ, ಕಿರಿಯ ವಯಸ್ಸಿನ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಅವರು ಖಂಡ್ರೆ ಪರಿವಾರದ ಬಲ ಮತ್ತು ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳನ್ನು ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಜಾತಿ ಲೆಕ್ಕಾಚಾರದ ಮೇಲಾಟ: ಬೀದರ್‌ ಲಿಂಗಾಯತರ ಬಾಹುಳ್ಯವುಳ್ಳ ಕ್ಷೇತ್ರ. 5.50 ಲಕ್ಷ ಲಿಂಗಾಯತರು ಇದ್ದರೆ ಪರಿಶಿಷ್ಟರು 4.50 ಲಕ್ಷ, ಅಲ್ಪಸಂಖ್ಯಾಕರು 3.50 ಲಕ್ಷ ಮತ್ತು ಮರಾಠಾ ಎರಡು ಲಕ್ಷ ಮತದಾರರನ್ನು ಹೊಂದಿದೆ. ಬಿಜೆಪಿಯ ಖೂಬಾ ಮತ್ತು ಕಾಂಗ್ರೆಸ್‌ನ ಸಾಗರ್‌ ಇಬ್ಬರು ಸಹ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಎರಡು ಪಕ್ಷಗಳು ತಮ್ಮದೇಯಾದ ಓಟ್‌ ಬ್ಯಾಂಕ್‌ ಹೊಂದಿವೆ. ಹಾಗಾಗಿ ಈ ಮತಗಳು ಯಾರ ಪಾಲಾಗುತ್ತವೆ ಎಂಬುದು ನಿಗೂಢ. ಇನ್ನು ಕ್ಷೇತ್ರದಲ್ಲಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸುವ ಮರಾಠಾ ಸಮಾಜ ಸಹ ಈ ಸಲ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಬೆಳವಣಿಗೆ ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ವಿಶೇಷವಾಗಿ ಮರಾಠಾ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿರುವ ಬಿಜೆಪಿ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ವಿಭಜನೆಯಾಗುವ ಈ ಮತಗಳನ್ನು ಒಲಿಸಿಕೊಳ್ಳಲು ಯಾರೂ ಪ್ರಯತ್ನಿಸುತ್ತಾರೋ ಅವರಿಗೆ ಗೆಲುವು ಸಿದ್ಧಿಸಲಿದೆ.

Advertisement

– ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next