ಬಾಗಲಕೋಟೆ: ಇಲ್ಲಿನ ನವನಗರದ ಜಿಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆ ಕೋವಿಡ್ ಕೇರ್‌ನಿಂದ ಹೈರಾಣಾಗಿದೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ಕೆಲ ಅಧಿಕಾರಿಗಳ-ವೈದ್ಯರ ಮಧ್ಯೆ ಸಮನ್ವಯತೆ ಕೊರತೆಯಿಂದ ಸೋಂಕಿತರು ಸಮಸ್ಯೆ ಎದುರಿಸಬೇಕಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
ಕಳೆದ ಏಪ್ರಿಲ್‌ನಿಂದ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಮೂಲಕವೇ ಖ್ಯಾತಿ ಪಡೆದಿದ್ದ ಇಲ್ಲಿನ ಜಿಲ್ಲಾಸ್ಪತ್ರೆ, ಇದೀಗ ಕೆಲವರಿಗೆ ವಿಲನ್ ರೀತಿ ಕಾಣುತ್ತಿದೆ. ಅದು ಸಹಜವೂ ಎಂಬಂತಾಗಿದೆ. ಕಳೆದ ವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿವೃದ್ಧೆಯೊಬ್ಬರು ನೆಲದ ಮೇಲೆ ಹಾಕಿದ್ದ ಬೆಡ್ ಮೇಲೆ ಕುಳಿತಿದ್ದರು. ಅದೇ ದಿನ ಚುರುಮುರಿ ಸೂಸಲಾದಲ್ಲಿ ಬಾಲ ಹುಳ ಮತ್ತು ಜೀರಲೆ ಬಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಮರುದಿನ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಈ ಘಟನೆಯನ್ನು ಅಲ್ಲಗಳೆದರು. ಜಿಲ್ಲಾಸ್ಪತ್ರೆಗೆ ಆಹಾರ ಪೂರೈಸಲು ಗುತ್ತಿಗೆ ಸಿಗದವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಾರೆಂಬ ಪ್ರಮಾಣ ಪತ್ರ ನೀಡಿ ಬಿಟ್ಟರು. ಅದಾದ ಬಳಿಕವೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ಕುರಿತಾದ ವಿಡಿಯೋಗಳು ಹೊರ ಬರುವುದು ನಿಲ್ಲಲೇ ಇಲ್ಲ.
ಹಳಸಿದ ಅನ್ನ-ಜೀರಲೆಯ ಉಪಹಾರ: ಸೋಮವಾರ ಮುಖ್ಯ ಪೊಲೀಸ್ ಪೇದೆಯೊಬ್ಬ ಹಳಸಿದ ಅನ್ನ ಪೂರೈಕೆಯಾಗಿದೆ ಎಂದು ಕೋವಿಡ್ ಆಸ್ಪತ್ರೆಯಲ್ಲಿ ವಿಡಿಯೋ ಮಾಡಿದ್ದು, ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ವತಃ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೂ ಮಾತನಾಡಿ ವಿಷಯ ಗಮನಕ್ಕೆ ತಂದಿದ್ದಾರೆ. ಆಡಿಯೋ ಮತ್ತು ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಅದು ಹಳಸಿದ ಅನ್ನ ಅಲ್ಲ, ಲೇಮನ್ ರೈಸ್. ಸೋಂಕಿತರಿಗೆ ವಿಟ್ಯಾಮಿನ್ ಸಿ ಹೆಚ್ಚಿಸಲು ಲೇಮನ್ ಜ್ಯೂಸ್, ಲೇಮನ್ ರೈಸ್ ಕೊಡಲಾಗುತ್ತಿದೆ. ಅದು ಹುಳಿ ಇರುವುದರಿಂದ ಹಳಸಿದೆ ಎಂದು ಹೇಳುತ್ತಿದ್ದಾರೆಂಬ ಸ್ಪಷ್ಟನೆ ಹೊರ ಬಿದ್ದಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಸದ್ಯ 250 ಜನ ಸೋಂಕಿತರಿದ್ದಾರೆ. 230 ಜನರಿಗೂ ಉತ್ತಮ ಆಹಾರ ಹೋಗಿ, ಸುಮಾರು 20 ಜನರಿಗೆ ಮಾತ್ರ ಹಳಸಿದ ಅನ್ನ ಹೇಗೆ ಹೋಯಿತು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ. ಈ ದೂರು ಬಂದ ತಕ್ಷಣ, ಅವರಿಗೆ ಉಪ್ಪಿಟ್ಟು ಮಾಡಿ ಕೊಡಲಾಗಿದೆ. ಇಂದು ಲೇಮನ್ ರೈಸ್ ಕೊಟ್ಟಿದ್ದರಿಂದ ಅದು ಹುಳಿಯಾಗಿ ಆ ರೀತಿ ಹೇಳಿರಬಹುದು. ಆದರೂ ಆಸ್ಪತ್ರೆಗೆ ಆಹಾರ ಪೂರೈಸುವ ಹೊಟೇಲ್‌ನವರಿಗೆ ಸೂಚನೆ ನೀಡಲಾಗಿದೆ.
– ಡಾ|ಪ್ರಕಾಶ ಬಿರಾದಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ
ಬೆಳಗ್ಗೆ ನೀಡಿದ ಅನ್ನ ಸಂಪೂರ್ಣ ಹಳಸಿತ್ತು. ನಾನು ಆಸ್ಪತ್ರೆಗೆ ಬಂದು ನಾಲ್ಕು ದಿನ ಆಯಿತು. ಶೌಚಾಲಯದಲ್ಲಿ ಬಕೆಟ್, ಜಗ್ಗ ಯಾವುದೂ ಇಲ್ಲ. ಈ ಕುರಿತು ಇಲ್ಲಿನ ಸಿಬ್ಬಂದಿಗೆ ಹೇಳಿದರೆ ಸ್ಪಂದಿಸುತ್ತಿಲ್ಲ. ತೀವ್ರ ಬೇಸರಗೊಂಡು ವ್ಯವಸ್ಥೆ ಸುಧಾರಿಸಲಿ ಎಂಬ ಏಕೈಕ ಕಾರಣಕ್ಕೆ ವಿಡಿಯೋ ಮಾಡಿ ಬಿಡಲಾಗಿದೆ. –
ಕೋವಿಡ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಸೋಂಕಿತ ಪೊಲೀಸ್ ಪೇದೆ
ನಮಗೂ ಬೆಳಗ್ಗೆ ಲೇಮನ್ ರೈಸ್ ಕೊಡಲಾಗಿದೆ. ಜತೆಗೆ ಜಟ್ನಿ, ಬಿಸಿ ನೀರೂ ಕೊಡಲಾಗಿತ್ತು. ಅನ್ನ ಚೆನ್ನಾಗಿಯೇ ಇತ್ತು. ನಮ್ಮ ಕೊಠಡಿಯಲ್ಲಿರುವ ಆರು ಜನರೂ ಅದನ್ನೇ ತಿಂದಿದ್ದೇವೆ. ಹಳಸಿದ ಅನ್ನ ಇತ್ತೆಂಬುದರ ಕುರಿತು ನಮಗೆ ಗೊತ್ತಿಲ್ಲ. ಕೋವಿಡ್ ಆಸ್ಪತ್ರೆಯ ನೆಲ ಮಹಡಿಯಲ್ಲಿರುವ ಮತ್ತೂಬ್ಬ –
ಸೋಂಕಿತ ಪೊಲೀಸ್ ಪೇದೆ
–ಶ್ರೀಶೈಲ ಕೆ. ಬಿರಾದಾರ