Advertisement

ಬಾಗಲಕೋಟೆ: ಸ್ತ್ರೀಕುಲ ಭಾರತೀಯ ಸಂಸ್ಕೃತಿಯ ರಾಯಭಾರಿಗಳು-ಸಿದ್ದರಾಮೇಶ್ವರ ಸ್ವಾಮೀಜಿ

06:10 PM Sep 02, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿ. ಭಾರತೀಯ ನಾರಿಯರಿಂದ ಭಾರತದ ಸಂಸ್ಕೃತಿ ಸರ್ವ ಶ್ರೇಷ್ಠವಾಗಿದೆ. ನಾರಿಯರ ತ್ಯಾಗ ದೂರದೃಷ್ಟಿ ದಿವ್ಯದೃಷ್ಟಿ ಸಂಸ್ಕಾರ ಸಂಯಮ  ಸೌಹಾರ್ದ ಸದ್ಗುಣಗಳಿಂದ ಭಾರತೀಯ ಸಂಸ್ಕೃತಿ ಶ್ರೀಮಂತವಾಗಿದೆ ಹಾಗೂ ಪರಕೀಯರ ಆಕ್ರಮಣದಿಂದ ಕಾಪಾಡಿಕೊಂಡಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ  ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಶ್ರೀ ಶರಣಬಸವಾಶ್ರಮದಿಂದ ಹಮ್ಮಿಕೊಂಡಿದ್ದ ಶ್ರೀ ಶರಣಬಸವ ಅಪ್ಪಂಗಳ ಪಲ್ಲಕ್ಕಿ ಉತ್ಸವ, ಶ್ರಾವಣ ಸತ್ಸಂಗ ಮಹಾ ಕುಂಭಮೇಳದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಗೆ ನಾನು ನನ್ನದು ಎನ್ನುವ ಸ್ವಾರ್ಥವಿಲ್ಲ. ಬದಲಾಗಿ ನನ್ನವರು ಎನ್ನುವ ಭಾವವಿದೆ. ತನ್ನ ಪತಿ, ಮಕ್ಕಳ ಸಾಧನೆಯ ಹಿಂದೆ ಹೆಣ್ಣಿನ ಪಾತ್ರ ಅಗಾಧ. ಆ ಸಾಧನೆಗೆ ತಾನು ಕಾರಣಕರ್ತಳು ಎನ್ನುವುದು ಅರಿವಿದ್ದರೂ ಕೂಡ, ಮರೆಯಲ್ಲಿ ನಿಂತು ಖುಷಿ ಪಡುತ್ತಾಳೆ. ಸ್ತ್ರೀಕುಲ ಭಕ್ತಿ ಪ್ರಧಾನವಾದ ವರ್ಗ. ಭಕ್ತಿ ಮುಗ್ಧತೆಯಿಂದ ಮೂಢನಂಬಿಕೆ ಮತ್ತು ಕಂದಾಚಾರದ ಭಾಗವಾಗಬಾರದು.

ಭಕ್ತಿ ಪ್ರಬುದ್ಧತೆಯಿಂದ ವೈಜ್ಞಾನಿಕ ವೈಚಾರಿಕ ತಳಹದಿಂದ ಕೂಡಿರಬೇಕು. 12ನೇ ಶತಮಾನದ ಶಿವಶರಣೆಯರ ವಚನ ಮಾರ್ಗ ಪ್ರಬುದ್ಧತೆಯ ಭಕ್ತಿ ಮಾರ್ಗವಾಗಿದೆ.ಪ್ರಸ್ತುತ ಸ್ತ್ರೀ ಕುಲ ಶಿವಶರಣೆಯ ರಾಜ್ಯಮಾರ್ಗವನ್ನು ಅನುಸರಿಸಬೇಕಾಗಿದೆ. ಮಾತೃ ಧರ್ಮವೇ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ರಾಜ್ಯಸಭೆ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಮಾಜ ದಲ್ಲಿ ಅಶಾಂತಿ ದೊಂಬಿ ಅನಾಚಾರ ಹೆಚ್ಚಾಗುತ್ತಿದ್ದು ಇವುಗಳ ನಿಯಂತ್ರಣಕ್ಕೆ ಸಮಾಜಕ್ಕೆ ಶರಣರ ಮಾರ್ಗದರ್ಶನ ಅವಶ್ಯವಾಗಿದೆಂದು ತಿಳಿಸಿದರು.

Advertisement

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಭಕ್ತರು ಪರಮಪೂಜ್ಯರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನೆಡೆದರೆ ಜೀವನ ಸಾರ್ಥಕವಾಗುತ್ತದೆ. ಗುರುಗಳ ಹಾಕಿಕೊಟ್ಟ ಸನ್ಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕುಂಬಾರ ಶ್ರೀಗಳು ಮಾತನಾಡಿ, ಭೋವಿ ಗುರುಪೀಠವು ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಮಠದಲ್ಲಿ ನೂರಾರು ಮಕ್ಕಳಿಗೆ ಅನ್ನ ಆಶ್ರಯ ಜ್ಞಾನ ಕೊಡುತ್ತಿರುವುದು ಸಮಾಜದ ಶೈಕ್ಷಣಿಕ ಪ್ರಗತಿಗೆ ಗುರುಗಳು ಕಾರಣಿಭೂತರಾಗಿದ್ದಾರೆ ಭೋವಿ ಗುರು ಪೀಠವು ಕೇವಲ ತಮ್ಮ ಸಮುದಾಯಕ್ಕೆ
ಸೀಮಿತವಾಗದೆ ಎಲ್ಲಾ ಸಮುದಾಯದವರನ್ನು ಅಪ್ಪಿಕೊಳ್ಳತಕ್ಕಂತ ಮಠವಾಗಿದೆ ಎಂದು ತಿಳಿಸಿದರು.

ನವಲಿಂಗ ಶರಣರು, ಡಾ|ಚೇತನ ಶ್ರೀ, ಒಪ್ಪತ್ತೇಶ್ವರ ಶ್ರೀ, ಉಮೇಶ ಮೇಟಿ, ನಾರಾಯಣ ಶಿಲ್ಪಿ, ಅಶೋಕ ಲಿಂಬಾವಳಿ, ಸಂಗನ ಗೌಡರ, ಮಲ್ಲಿಕಾರ್ಜುನ ಕೋಲ್ಹಾರ, ಗುರುರಾಜ, ಪಾಲಾಕ್ಷಿ ಕಟಿcಮಠ, ಗಿಡ್ಡಪ್ಪ ಬಂಡಿವಡ್ಡರ, ತಿಮ್ಮಣ್ಣ ಬಂಡಿವಡ್ಡರ ರಾಮು ವಡ್ಡರ, ತಿಮ್ಮಣ್ಣ ಕೂಡಗಿ, ಭೀಮಶಿ ಪಾತ್ರೋಟಿ, ಸಿದ್ರಾಮಪ್ಪ ಪಾತ್ರೋಟಿ ಮರಿಯಪ್ಪ ಪಾತ್ರೋಟಿ, ಪರಶುರಾಮ ಪಾತ್ರೋಟಿ, ಯಮನಪ್ಪ ಬಾಗಲಕೋಟೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next