Advertisement

ಬಾಗಲಕೋಟೆ: ಬಾದಾಮಿಯಿಂದ ಸಿದ್ದರಾಮಯ್ಯ ದೂರ ದೂರ-ಕಾರಣ ಬಹಿರಂಗ

06:32 PM Feb 16, 2023 | Team Udayavani |

ಬಾಗಲಕೋಟೆ: ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿ, ಕೆಲವೇ ಮತಗಳಿಂದ ಗೆದ್ದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಬಾದಾಮಿಯಿಂದ ಬಹುತೇಕ ದೂರ ಉಳಿಯಲಿದ್ದಾರೆ ಎಂಬುದು ಬಹುತೇಕ ಖಚಿತವಾಗುತ್ತಿದೆ!

Advertisement

ಹೌದು. ಬಾದಾಮಿಯಿಂದ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರ ಮಾತಿನ ಲಹರಿ ಗಮನಿಸಿದರೆ, ಅವರು ಈ ಬಾರಿ ಬಾದಾಮಿಯಿಂದ ಸ್ಪರ್ಧೆ ಮಾಡುವುದು ಅನುಮಾನವಾಗಿ ಉಳಿದಿಲ್ಲ. ಆದರೆ, ನಿರ್ಧಾರ ಮಾತ್ರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಕೊನೆ ಗಳಿಗೆಯಲ್ಲಾದರೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಅವರ ಅಭಿಮಾನಿಗಳ ವಿಶ್ವಾಸ ಇನ್ನೂ ಕುಂದಿಲ್ಲ.

ಜಾತಿ ಪ್ರತಿಷ್ಠೆ ಮೇಲಾಯ್ತು: ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರಕ್ಕೆ ಕರೆ ತರುವಲ್ಲಿ ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಸಹಿತ ಹಲವರ ಪಾತ್ರವಿದೆ. ಆಗ ಬಾದಾಮಿಗೆ ಟಿಕೆಟ್‌ ಘೋಷಣೆಯಾಗಿದ್ದ ವೈದ್ಯ ಡಾ| ದೇವರಾಜ ಪಾಟೀಲ ಪ್ರಚಾರದಲ್ಲಿ ತೊಡಗಿದ್ದರೂ ತಮ್ಮದೇ ನಾಯಕರು ಬಾದಾಮಿಗೆ ಬಂದ ಖುಷಿಯಲ್ಲಿ ಎರಡು ಬಾರಿ ಟಿಕೆಟ್‌ ಘೋಷಣೆಯಾಗಿದರೂ, ಸ್ಪರ್ಧೆಯಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾದರೂ ಅವರು ಸಿದ್ದು ಗೆಲುವಿಗೆ ಶ್ರಮಿಸಿದ್ದರು. ಇವರೊಂದಿಗೆ ಹಾಲಿ ಶಾಸಕರಾಗಿದ್ದ ಬಿ.ಬಿ. ಚಿಮ್ಮನಕಟ್ಟಿ ಕೂಡ ಬೇಸರದ ಜತೆಗೇ ಸಿದ್ದು ಗೆಲುವಿಗೆ ಒಂದಷ್ಟು ಕೆಲಸ ಮಾಡಿದ್ದರು.

ಸಿದ್ದು ಬಾದಾಮಿಗೆ ಬರುವಾಗ ಇಲ್ಲಿನ ಪ್ರಮುಖರು, ಅಭಿಮಾನಿಗಳು, ಜಿಲ್ಲೆಯ ಜನರಿಗೆ ಬೇರೆಯದ್ದೇ ನಿರೀಕ್ಷೆಗಳಿದ್ದವು. ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಪ್ರಭಾವ ಪಕ್ಕದ ಬಾಗಲಕೋಟೆ, ಹುನಗುಂದ, ಬೀಳಗಿ ಸಹಿತ ಜಿಲ್ಲೆಯ ಇತರ ಕ್ಷೇತ್ರಗಳಲ್ಲೂ ಬೀರಲಿದೆ. ಆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಶ್ರೀರಾಮುಲು ಸ್ಪರ್ಧೆ ಮಾಡಿದರೋ, ಅದು ಜಿಲ್ಲೆಯಲ್ಲಿ ಕುರುಬ/ವಾಲ್ಮೀಕಿ
ಸಮುದಾಯಗಳ ಮಧ್ಯೆ ಬಹುದೊಡ್ಡ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು.

ಜಿಲ್ಲೆಯಲ್ಲಿ ಬಹುತೇಕ ಕಾಂಗ್ರೆಸ್‌ ಪಕ್ಷದೊಂದಿಗೆ ಇದ್ದ ವಾಲ್ಮೀಕಿ ಸಮುದಾಯದ ಮತಗಳು ಬಿಜೆಪಿ ಪರವಾಗಿ ವಾಲಿದ್ದವು. ಇದು ಜಿಲ್ಲೆಯ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪರಿಣಾಮ ಬೀರಿತ್ತು.

Advertisement

ಚಿಮ್ಮನಕಟ್ಟಿ ಮಾತಿಗೆ ಬೇಸರವೇ?: ಸಿದ್ದರಾಮಯ್ಯ ಈ ಬಾರಿ ಬಾದಾಮಿಯಿಂದ ದೂರ ಉಳಿಯಲು ಪ್ರಮುಖವಾಗಿ ಬೆಂಗಳೂರಿನಿಂದ ದೂರವಾಗುತ್ತದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಆದರೆ, ಒಳ ಮರ್ಮವೇ ಬೇರೆ ಇದೆ ಎಂಬ ಮಾತು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ. ಬಾದಾಮಿ ಕ್ಷೇತ್ರ ಪ್ರತಿನಿಧಿಸಿದ್ದ ಚಿಮ್ಮನಕಟ್ಟಿ ಅವರು ಒಮ್ಮೆ ಹುಬ್ಬಳ್ಳಿಯಲ್ಲಿ, ಮತ್ತೊಮ್ಮೆ ಬಾದಾಮಿಯಲ್ಲಿ ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲೇ ಕಣ್ಣೀರು ಹಾಕಿದ್ದರು.

ಇದಕ್ಕೆ ಕಾರಣಗಳೂ ಹಲವಿದ್ದರೂ, ಇದು ಸಿದ್ದರಾಮಯ್ಯ ಅವರಿಗೆ ಬೇಸರ ತರಿಸಿತ್ತು. ಅದೇನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಹೇಳಿಕೊಳ್ಳುವ ಬದಲು ಬಹಿರಂಗವಾಗಿ ಹೇಳಿಕೊಂಡಿದ್ದು ಸಿದ್ದರಾಮಯ್ಯ ಮನಸ್ಸಿಗೆ ಘಾಸಿಯಾಗಿತ್ತು. ಹೀಗಾಗಿ ನಾನು ಒಲ್ಲೆ ಅಂದರೂ ಬಾದಾಮಿಗೆ ಕರೆದರು. ಇಲ್ಲಿನ ಜನರು ಗೆಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿಯೊಂದೇ ಗಮನದಲ್ಲಿಟ್ಟುಕೊಂಡು ಸ್ಥಳೀಯ ಯಾವುದೇ ರಾಜಕೀಯ ಪ್ರತಿಷ್ಠೆಗೆ ಕಿವಿಗೊಡದಿದ್ದರೂ ನನ್ನ ಮೇಲೆ ಬಹಿರಂಗವಾಗಿ
ಅಸಮಾಧಾನ ಹೊರ ಹಾಕಿದರಲ್ಲ ಎಂಬ ಬೇಸರವನ್ನು ತಮ್ಮದೇ ಕೆಲ ಆಪ್ತರ ಬಳಿ ತೋಡಿಕೊಂಡಿದ್ದರು ಎನ್ನಲಾಗಿದೆ.

ಹೈಕಮಾಂಡ್‌ ನಿರ್ಧಾರಕ್ಕೆ: ಸಿದ್ದರಾಮಯ್ಯ ಅವರು ಪುನಃ ಬಾದಾಮಿಯಿಂದ ಸ್ಪರ್ಧೆ ಮಾಡುವ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಅವರು ಕೋಲಾರಕ್ಕೆ ಹೋದರೆ ಅವರ ಉತ್ತರಾಧಿಕಾರಿಯಾಗಲು ಕಾಂಗ್ರೆಸ್‌ನಲ್ಲಿ ಹಲವರ ಪೈಪೋಟಿ ಒಂದೆಡೆ ನಡೆದಿದೆ. ಆದರೆ, ಅವರ ಆಪ್ತ ಅಭಿಮಾನಿಗಳು ಮಾತ್ರ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸಬೇಕೆಂಬ ಪಟ್ಟು ಹಿಡಿದಿದ್ದಾರೆ.

ಬಾದಾಮಿ ಕಾಂಗ್ರೆಸ್‌ನ ಗುಂಪುಗಾರಿಕೆ, ಇದರ ಪರ-ವಿರುದ್ಧವಾಗಿಯೂ ಇವೆ. ಸಿದ್ದರಾಮಯ್ಯ ಬರಬೇಕೆಂಬ ಒತ್ತಡ ಒಂದೆಡೆ ಇದ್ದರೆ, ಅವರು ಬರುವುದು ಬೇಡ ಎಂಬುದು ಕೆಲವರ ನಿಲುವು. ಹೀಗಾಗಿ ಪಕ್ಷದಲ್ಲಿನ ಗುಂಪುಗಾರಿಕೆ, ತಮ್ಮ ಚುನಾವಣೆ ಫಲಿತಾಂಶದ ಮೇಲೆ ಬೀಳದಿರಲಿ ಎಂಬ ಎಚ್ಚರಿಕೆಯ ಹೆಜ್ಜೆ ಸಿದ್ದರಾಮಯ್ಯ ಇಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಒಟ್ಟಾರೆ ಕ್ಷೇತ್ರ ದೂರ ಆಗುತ್ತದೆ ಎಂಬ ಪ್ರಮುಖ ಅಂಶದೊಂದಿಗೆ ಸಿದ್ದರಾಮಯ್ಯ ಈ ಬಾರಿ ಬಾದಾಮಿ ಕ್ಷೇತ್ರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇದ್ಯಾಗ್ಯೂ ಕೊನೆ ಗಳಿಗೆಯಲ್ಲಿ ಪುನಃ ನಮ್ಮಲ್ಲೂ ಸ್ಪರ್ಧೆ ಮಾಡಲಿ ಎಂಬ ಒತ್ತಾಸೆ ಅವರ ಅಭಿಮಾನಿಗಳದ್ದು.

ಹಲವರು ಕಾಂಗ್ರೆಸ್‌ಗೆ
ಬುಧವಾರ ಪ್ರಜಾಧ್ವನಿ 2ನೇ ಹಂತದ ಯಾತ್ರೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಬೀಳಗಿ ಕ್ಷೇತ್ರದ ಕಲಾದಗಿಯಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಅಲ್ಲದೇ ಇದೇ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಮಾಧ್ಯಮ ಸಂವಾದವೂ ನಡೆಸಿದರು. ಇದಾದ ಬಳಿಕ ಜಿಲ್ಲೆಯ ಪ್ರಬಲ ಸಮುದಾಯದ ಜಿಲ್ಲಾ ಅಧ್ಯಕ್ಷರಾಗಿರುವ ಅಶೋಕ ಲಾಗಲೋಟಿ, ಎಪಿಎಂಸಿ ಮಾಜಿ ನಿರ್ದೇಶಕ ಶ್ರೀಕರ ದೇಸಾಯಿ ಸೇರಿದಂತೆ ನೂರಾರು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next