Advertisement

ಬಾಗಲಕೋಟೆ: ಹೂವನೂರಲ್ಲಿ ಪ್ರತ್ಯೇಕ ಶರಣ ಮೇಳ

06:26 PM Jan 07, 2023 | Team Udayavani |

ಬಾಗಲಕೋಟೆ: ಕೂಡಲಸಂಗಮದ ಬಸವ ಧರ್ಮ ಪೀಠದ ಪ್ರಸ್ತುತ ಪೀಠಾಧ್ಯಕ್ಷರಾದ ಮಾತೆ ಗಂಗಾಮಾತೆ ಅವರ ಸರ್ವಾಧಿಕಾರ ಧೋರಣೆಯಿಂದ ನಾವು ಪ್ರತ್ಯೇಕವಾಗಿ ಸ್ವಾಭಿಮಾನಿ ಶರಣ ಮೇಳ ನಡೆಸಲು ನಿರ್ಧರಿಸಿದ್ದೇವೆ.

Advertisement

ನಾಡಿನ ಶರಣರು, ಬಸವಭಕ್ತರು ಜ.13 ಮತ್ತು 14ರಂದು ಕೂಡಲಸಂಗಮದ ಕ್ರಾಸ್‌ ಬಳಿ 10 ಎಕರೆ ವಿಶಾಲ ಜಾಗೆಯಲ್ಲಿ ನಡೆಯಲಿರುವ ಸ್ವಾಭಿಮಾನಿ ಶರಣ ಮೇಳದಲ್ಲಿ ಭಾಗವಹಿಸಬೇಕು ಎಂದು ಪರ್ಯಾಯ ಶರಣ ಮೇಳದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಜಗದ್ಗುರು ಶ್ರೀ ಡಾ|ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ನಾವು ಕಳೆದ 40 ವರ್ಷಗಳಿಂದ ಬಸವಧರ್ಮ ಪೀಠದ ಟ್ರಸ್ಟ್‌ನ ಸದಸ್ಯರಾಗಿ ಲಿಂಗೈಕ್ಯ ಡಾ|ಮಾತೆಮಹಾದೇವಿ ಅವರೊಂದಿಗೆ ಪ್ರತಿಯೊಂದು ಕಾರ್ಯದಲ್ಲೂ ಭಾಗವಹಿಸಿದ್ದೇವೆ. ಕರುನಾಡು ಅಷ್ಟೇ ಅಲ್ಲ, ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಹೀಗೆ ವಿವಿಧ ಭಾಗದಲ್ಲಿ ನಮಗೆ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇವೆ. ಬೆಂಗಳೂರಿನ ಪೀಠಕ್ಕೆ ನಮ್ಮನ್ನೇ ಪೀಠಾಧ್ಯಕ್ಷರನ್ನಾಗಿ ಮಾತೆಮಹಾದೇವಿ ಅವರು ನೇಮಕ ಮಾಡಿದ್ದರು.

ಆದರೆ, ಅವರ ಲಿಂಗೈಕ್ಯರಾದ ಬಳಿಕ ಪ್ರಸ್ತುತ ಪೀಠಾಧ್ಯಕ್ಷರಾದ ಗಂಗಾಮಾತೆ ಅವರು ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ. ಯಾವುದೇ ಕಾರಣ ನೀಡದೆ ಟ್ರಸ್ಟ್‌ನಿಂದ ಹೊರ ಹಾಕಿದ್ದಾರೆ. ನಮಗೆ ಶರಣ ಮೇಳದಲ್ಲಿ ಭಾಗವಹಿಸಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಶೇ.80ರಷ್ಟು ನಮ್ಮೊಂದಿಗೆ ಇರುವ ಶರಣರ ಒತ್ತಾಸೆ ಮೇರೆಗೆ ಈ ವರೆಗೆ ಎಲ್ಲ ಕಾರ್ಯಕ್ರಮಗಳನ್ನು ಪರ್ಯಾವಾಗಿ ನಡೆಸಿದ್ದೇವೆ. ಇದೀಗ ಕೂಡಲಸಂಗಮ ಕ್ರಾಸ್‌ನ ಹೂವನೂರದಲ್ಲಿ ಪರ್ಯಾಯ ಸ್ವಾಭಿಮಾನಿ ಶರಣ ಮೇಳ ನಡೆಸಲು ಉದ್ದೇಶಿಸಿದ್ದೇವೆ ಎಂದರು.

ಜ.13 ಮತ್ತು 14ರಂದು ಎರಡು ದಿನಗಳ ಸ್ವಾಭಿಮಾನಿ ಶರಣ ಮೇಳವು ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದೆ. ಜ.13ರಂದು ಬೆಳಗ್ಗೆ 11ಕ್ಕೆ ಡಾ|ಅಂಬೇಡ್ಕರ್‌ ಅವರ ಮೊಮ್ಮಗ ಡಾ|ಪ್ರಕಾಶ ಅಂಬೇಡ್ಕರ ಸ್ವಾಭಿಮಾನಿ ಶರಣ ಮೇಳ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುಂಚೆ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪದಿಂದ ಬಸವಜ್ಯೋತಿ ಹೊತ್ತಿಸಿಕೊಂಡು, ಹಲವು ಪೂಜ್ಯರ ನೇತೃತ್ವದಲ್ಲಿ ಶರಣ ಸಮೂಹದ ಸಮ್ಮುಖದಲ್ಲಿ ವೇದಿಕೆಗೆ ತರಲಾಗುವುದು.

Advertisement

ಐಕ್ಯ ಮಂಟಪದಿಂದ ತಂದ ಬಸವಜ್ಯೋತಿಯಿಂದಲೇ ಶರಣ ಮೇಳ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 7ಕ್ಕೆ ಲಿಂಗಾಯತ ಧರ್ಮದ ಪೀಠಾರೋಹಣ ನಡೆಯಲಿದೆ. ಈ ಪೀಠದ ಮೇಲೆ ಯಾವುದೇ ವ್ಯಕ್ತಿ ಅಥವಾ ಗುರುಗಳು ಕೂಡುವುದಿಲ್ಲ. ಬದಲಾಗಿ ವಚನ ಸಾಹಿತ್ಯದ ಧರ್ಮಗ್ರಂಥವನ್ನು ಪೀಠದ ಮೇಲಿಟ್ಟು, ಪೀಠಾರೋಹಣ ಮಾಡಲಾಗುವುದು. ಇದು ಲಿಂ. ಡಾ.ಮಾತೆ ಮಹಾದೇವಿ ಅವರ ಆಶಯ ಕೂಡ ಆಗಿತ್ತು. ಜ.14ರಂದು ಸಮುದಾಯ ಪ್ರಾರ್ಥನೆ ಮುಗಿದ ಬಳಿಕ ಸಾಮೂಹಿಕ ವಚನ ಗಾಯಕ, ವಚನ ನೃತ್ಯ ಮತ್ತು ಶರಣ-ಶರಣೆಯರಿಂದ ಸ್ಫೂರ್ತಿ ಭಕ್ತಿ ಕುಣಿ ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಬಸವ ಭಕ್ತರು ಭಾಗವಹಿಸಬೇಕು ಎಂದು ಕೋರಿದರು.

ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ, ಅಶೋಕ ಬೆಂಡಿಗೇರಿ, ಕೆ.ಬಸವರಾಜಪ್ಪ, ಸಂಗಮೇಶ ಲಿಂಗಾಯತ, ಚಂದ್ರಕಾಂತ ಲುಕ್‌ ಮುಂತಾದವರು ಉಪಸ್ಥಿತರಿದ್ದರು.

ಬಸವ ಧರ್ಮ ಪೀಠಕ್ಕೆ ದೇಶದ ವಿವಿಧೆಡೆ ಸುಮಾರು 1 ಸಾವಿರಕ್ಕೂ ಹೆಚ್ಚು ಕೋಟಿ ಮೌಲ್ಯದ ಆಸ್ತಿ ಇದೆ. ಪ್ರಸ್ತುತ ಪೀಠಾಧ್ಯಕ್ಷರಾದ ಮಾತೆ ಗಾಂಗಾದೇವಿ ಅವರ ಸರ್ವಾಧಿಕಾರ ಧೊರಣೆ, ಯಾವುದೇ ಕಾರಣವಿಲ್ಲದೆ ಟ್ರಸ್ಟಿಗಳನ್ನು ಹೊರ ಹಾಕಿದ್ದಕ್ಕೆ ಅಸಂಖ್ಯಾತ ಭಕ್ತರಿಗೆ ನೋವಾಗಿದೆ. ಅಲ್ಲದೇ ಕೆಲವರು ಆಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ನಾವು ಪ್ರತ್ಯೇಕ ಪೀಠ, ಸ್ವಾಭಿಮಾನಿ ಶರಣ ಮೇಳ ನಡೆಸುತ್ತಿದ್ದೇವೆ.
ಡಾ|ಚನ್ನಬಸವಾನಂದ ಸ್ವಾಮೀಜಿ, ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next