Advertisement

ಬಿಜೆಪಿ ಕೋಟೆಗೆ ಕೈ ಹಾಕಲು ಪ್ರಯಾಸ 

03:29 PM Aug 23, 2018 | |

ಬಾಗಲಕೋಟೆ: ಮುಳುಗಡೆ ನಗರ ಬಾಗಲಕೋಟೆ ಬಿಜೆಪಿ ಪ್ರಾಬಲ್ಯ ಹೊಂದಿದ ಕ್ಷೇತ್ರ. ಕಳೆದ ಹಲವು ಬಾರಿ ಇಲ್ಲಿನ ನಗರಸಭೆ ಆಡಳಿತ ಬಿಜೆಪಿ ತೆಕ್ಕೆಯಲ್ಲಿದೆ. ಆದರೆ, ಬಿಜೆಪಿ ಭದ್ರ ಕೋಟೆಗೆ ಕೈ ಹಾಕಲು ಕಾಂಗ್ರೆಸ್‌ ಪ್ರಯಾಸ ಪಡುತ್ತಿದೆಯಾದರೂ ಅದು ಸಫಲವಾಗುತ್ತಾ ? ಎಂಬ ಚರ್ಚೆ ನಡೆಯುತ್ತಿದೆ.

Advertisement

ನಿಜ, ಬಾಗಲಕೋಟೆ ನಗರಸಭೆ ಆಡಳಿತ ಬಿಜೆಪಿ ಹಿಡಿತದಲ್ಲಿದೆ. ಆದರೆ, 2009ರಲ್ಲಿ ಬಿಜೆಪಿ ಗೆದ್ದಿದ್ದ 28 ಸ್ಥಾನಗಳ ಪೈಕಿ, 2013ರಲ್ಲಿ ನಡೆದ ಚುನಾವಣೆಯಲ್ಲಿ 8 ಸ್ಥಾನ ಕಳೆದುಕೊಂಡಿತ್ತು. 2013ರಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ, 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ 9 ಸ್ಥಾನ ಗೆಲ್ಲುವ ಮೂಲಕ ಸದಸ್ಯರ ಬಲ ಹೆಚ್ಚಿಸಿಕೊಂಡಿತ್ತು. ಆದರೆ, ನಗರಸಭೆ ಆಡಳಿತ ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಗಿರಲಿಲ್ಲ.

ಚರಂತಿಮಠ- ಮೇಟಿ ಪ್ರಾಬಲ್ಯ: ಬಾಗಲಕೋಟೆ ನಗರಸಭೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದರೂ, ಮಾಜಿ ಸಚಿವ ಎಚ್‌.ವೈ. ಮೇಟಿ ಹಾಗೂ ಹಾಲಿ ಶಾಸಕ ಡಾ|ವೀರಣ್ಣ ಚರಂತಿಮಠ ಪ್ರಾಬಲ್ಯ ಮೆರೆಯಲು ಕಸರತ್ತು ನಡೆಸಿದ್ದಾರೆ. ಈ ಬಾರಿ ಬಿಜೆಪಿ ಸದಸ್ಯರ ಬಲ ಇನ್ನಷ್ಟು ಹೆಚ್ಚಾಗಲಿದೆ ಎಂಬ ವಿಶ್ಲೇಷಣೆ ನಡೆಯುತ್ತಿದ್ದರೂ, ಟಿಕೆಟ್‌ ಹಂಚಿಕೆಯಲ್ಲಾದ ಗೊಂದಲದ ಪರಿಣಾಮ, ಕೆಲವರು ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ ಅವರನ್ನು ಕಣದಿಂದ ಹಿಂದಕ್ಕೆ ಸರಿಸಿದರೆ, ಬಿಜೆಪಿಗೆ ದಾರಿ ಸುಗಮವಾಗಲಿದೆ ಎನ್ನಲಾಗುತ್ತಿದೆ.

31ಸ್ಥಾನಗಳಿದ್ದ ನಗರಸಭೆಯಲ್ಲಿ ಈ ಬಾರಿ 35 ಕ್ಷೇತ್ರಗಳಾಗಿವೆ. ಕ್ಷೇತ್ರಗಳ ಪುನರ್‌ವಿಂಗಡನೆ ಹಾಗೂ ಮೀಸಲಾತಿ ಅದಲು ಬದಲಾಗಿವೆ. ಹೀಗಾಗಿ ರಾಜಕೀಯವಾಗಿ ನುರಿತ, ಈ ಹಿಂದೆ ಸದಸ್ಯರಾಗಿದ್ದವರಿಗೆ ಬಿಜೆಪಿಯಲ್ಲಿ ಅವಕಾಶ ಸಿಕ್ಕಿಲ್ಲ. ಹಳಬರಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಕೇಶವ ಭಜಂತ್ರಿ ಮಾತ್ರ, ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ 34ಸ್ಥಾನಗಳಿಗೆ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಕಾಂಗ್ರೆಸ್‌ನಲ್ಲಿ ಆರು ಜನ ಹಳಬರಿದ್ದು, ಉಳಿದ 29 ಅಭ್ಯರ್ಥಿಗಳು ಸಂಪೂರ್ಣ ಹೊಸ ಮುಖಗಳು. ಇಲ್ಲೂ ಕೆಲವರು ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅವರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನ ಮಾಜಿ ಸಚಿವ ಮೇಟಿ ಸಹಿತ ಹಲವರು ನಡೆಸಿದ್ದಾರೆ. 

Advertisement

ಕಾಂಗ್ರೆಸ್‌ನಲ್ಲಿ ಡಬಲ್‌ಗೇಮ್‌ ವ್ಯಕ್ತಿಗಳು: ಕಾಂಗ್ರೆಸ್‌ಗೆ ಬಿಜೆಪಿ ವಿರೋಧ ಪಕ್ಷ ಎನ್ನುವುದಕ್ಕಿಂತ ಕಾಂಗ್ರೆಸ್‌ನಲ್ಲೇ ಡಬಲ್‌ಗೇಮ್‌ ಮಾಡುವ ಹಲವು ಪ್ರಮುಖರಿದ್ದಾರೆ. ಅವರೆಲ್ಲ ಹಗಲು ಕಾಂಗ್ರೆಸ್ಸಿಗರಾಗಿದ್ದರೆ, ರಾತ್ರಿ ಬಿಜೆಪಿ ನಾಯಕರ ಜೆತೆಗೆ ಉತ್ತಮ ಬಾಂಧವ್ಯ ಹೊಂದಿವರಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಏನೇ ತಂತ್ರಗಾರಿಕೆ ನಡೆಸಿದರೂ ಅದು ಬಿಜೆಪಿ ಪಾಳೆಯಕ್ಕೆ ತಲುಪುವುದು ಬಹಳ ಹೊತ್ತಾಗುವುದಿಲ್ಲ. ಹೀಗಾಗಿ ಕಾಂಗ್ರೆಸ್‌ ಏನೇ ತಿಪ್ಪರಲಾಗ ಹಾಕಿದರೂ ಬಾಗಲಕೋಟೆ ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಿಲ್ಲ ಎಂಬ ಸತ್ಯವನ್ನೇ ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳುತ್ತಾರೆ.

ಐದು ವರ್ಷ ಹೇಗಿತ್ತು: ಕಳೆದ ಐದು ವರ್ಷ ಬಾಗಲಕೋಟೆ ನಗರಸಭೆ ಆಡಳಿತ ಬಿಜೆಪಿ ಹಿಡಿತದಲ್ಲಿದ್ದರೂ ಅದು ಸ್ವತಂತ್ರವಾಗಿ ಆಡಳಿತ ನಡೆಸಲು ಆಗಿಲ್ಲ ಎಂಬ ಮಾತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ, ಕಾಂಗ್ರೆಸ್ಸಿನ ಸ್ಥಳೀಯ ಶಾಸಕರು, ಅವರ ಪರವಾಗಿರುವ ಪೌರಾಯುಕ್ತರು, ಅಧಿಕಾರಿಗಳಿಂದ ಬಿಜೆಪಿ ಅಂದುಕೊಂಡಂತೆ ಆಡಳಿತ ನಡೆಸಲಾಗಿಲ್ಲ. ಕೇವಲ ಆರೋಪ-ಪ್ರತ್ಯಾರೋಪ, ನಗರಸಭೆ ಅಧ್ಯಕ್ಷರಿಂದಲೇ ನಗರಸಭೆಗೆ ಬೀಗ ಹಾಕಿ ಅಹೋರಾತ್ರಿ ಧರಣಿ, ಕಾಟನ್‌ ಮಾರ್ಕೆಟ್‌ ವಿವಾದ, ಕೋರ್ಟ ಅಲೆದಾಟ, ಹಲವು ವಿಷಯಗಳಿಗೆ ಪ್ರತಿಷ್ಠೆ, ಠರಾವು ಪುಸ್ತಕ ಕದ್ದೊಯ್ದ ಆರೋಪ ಹೀಗೆ ಹಲವು ಪ್ರತಿಷ್ಠೆಯ ವಿಷಯಗಳ ಆಡಳಿತ ನಡೆದಿದೆ ವಿನಹ ನಗರಸಭೆಯಿಂದ ಹೇಳಿಕೊಳ್ಳುವಂತ ಉತ್ತಮ ಕೆಲಸ ನಡೆದಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌, ಬಿಜೆಪಿಯವರ ಮೇಲೆ, ಬಿಜೆಪಿ, ಕಾಂಗ್ರೆಸ್‌ನವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿವೆ.ತಮಗೆ ಇರುವ ಜವಾಬ್ದಾರಿ, ಪ್ರಾಮಾಣಿಕ ಆಡಳಿತದ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ ಎಂಬ ಅಸಮಾಧಾನ ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.

ಗದ್ದುಗೆ ಗುದ್ದಾಟ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯಲ್ಲಿ ಸರ್ಕಾರ, ತಲಾ 30 ತಿಂಗಳಂತೆ ಮೀಸಲಾತಿ ವಿಂಗಡಿಸಿದರೂ ಇಲ್ಲಿ ತಲಾ ಮೂವರು ಅಧ್ಯಕ್ಷರು-ಉಪಾಧ್ಯಕ್ಷರು ಆಡಳಿತ ನಡೆಸಿದ್ದಾರೆ. ತಮ್ಮದೇ ಪಕ್ಷದ ಸದಸ್ಯರೊಬ್ಬರು ಅಧ್ಯಕ್ಷರ ಗಾದಿಗೇರುವಾಗ ಮೀಸಲಾತಿ ಪ್ರಶ್ನಿಸಿ, ಕೋರ್ಟ್‌ ಮೆಟ್ಟಿಲೇರಿದ್ದ ಪ್ರಸಂಗಗಳೂ ಬಿಜೆಪಿಯಲ್ಲಿ ನಡೆದಿದ್ದವು. ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಪಕ್ಷದ ನಿಯಮ ಮೀರಿ ನಡೆದುಕೊಂಡ ಸದಸ್ಯರೂ ಹಲವರಿದ್ದಾರೆ.

ನಗರಸಭೆಯ 35 ಸ್ಥಾನಗಳಿಗೂ ಸಾಮಾಜಿಕ ನ್ಯಾಯದಡಿ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಪ್ರತಿಯೊಂದು ಸಮಾಜದ ವ್ಯಕ್ತಿಗಳಿಗೂ ಟಿಕೆಟ್‌ ನೀಡಿದ್ದೇವೆ. ಕಳೆದ ಬಾರಿ ನಾವು 10 ಸ್ಥಾನಗಳಲ್ಲಿ ಗೆದ್ದಿದ್ದೇವು. ಈ ಬಾರಿ ನಗರಸಭೆಯಲ್ಲಿ ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸವಿದೆ. ನಗರದ ಮತದಾರರು ಐದು ವರ್ಷಗಳ ಬಿಜೆಪಿ ಆಡಳಿತ ನೋಡಿದ್ದಾರೆ. ಹೀಗಾಗಿ ನಮಗೆ ಅವಕಾಶ ಕೊಡುತ್ತಾರೆ ಎಂಬ ನಂಬಿಕೆ ಇದೆ.
 ಎ.ಡಿ. ಮೊಕಾಶಿ, ಅಧ್ಯಕ್ಷ,
ಕಾಂಗ್ರೆಸ್‌ ನಗರ ಘಟಕ

ನಗರಸಭೆಯಲ್ಲಿ ಮತ್ತೆ ಬಿಜೆಪಿ ಆಡಳಿತ ಬರಲಿದೆ. ಹಿಂದೆ 9 ವರ್ಷ ಶಾಸಕರಾಗಿದ್ದ ಡಾ|ಚರಂತಿಮಠರು ಉತ್ತಮ ಆಡಳಿತ ನೀಡಿದ್ದು, ಈಗ ಅವರೇ ಶಾಸಕರಾಗಿದ್ದಾರೆ. ಅವರ ಮಾರ್ಗದರ್ಶನ-ಹಿರಿತನದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಐದು ವರ್ಷ, ಕಾಂಗ್ರೆಸ್‌ ಸರ್ಕಾರ ಇದ್ದರೂ ನಮ್ಮ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿ ಬಿಜೆಪಿ 31ರಿಂದ 33 ಸ್ಥಾನಗಳಲ್ಲಿ ಗೆಲ್ಲಲಿದೆ.
 ರಾಜು ನಾಯ್ಕರ, ಅಧ್ಯಕ್ಷ,
ಬಿಜೆಪಿ ನಗರ ಮೋರ್ಚಾ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next