Advertisement

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

08:53 PM Sep 15, 2024 | Team Udayavani |

ಬಾಗಲಕೋಟೆ: ಅರ್ಧ ಕೋಟಿ ಕಳ್ಕೊಂಡ ಮಹಿಳಾ ವೈದ್ಯೆ. ಸಿಮೆಂಟ್‌ ಬ್ಯಾಗ್‌ ಬರುತ್ತವೆ ಎಂದು ಕಾದು ಕುಳಿತ ವ್ಯಾಪಾರಿಗೆ ಬರೋಬ್ಬರಿ 10 ಲಕ್ಷ ರೂ. ಪಂಗನಾಮ. ನಿವೃತ್ತಿಯ ಬಳಿಕ ಮನೆಯಲ್ಲೇ ಕುಳಿತು ಹಣ ಗಳಿಸಲು ಮುಂದಾಗಿ 30 ಲಕ್ಷ ರೂ. ಕೈಚೆಲ್ಲಿ ಕುಳಿತ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್‌.

Advertisement

ಹೀಗೆ ಕಳೆದೊಂದು ವಾರದಲ್ಲಿ ಮೂವರು ಪದವಿ ಪಡೆದ ಸುಶಿಕ್ಷಿಕರು ಆನ್‌ಲೈನ್‌ ವಂಚನೆಗೆ ಒಳಗಾಗಿ ದ್ದಾರೆ. ಅದು ಸಾವಿರ ಲೆಕ್ಕದಲ್ಲಿ ಅಲ್ಲ, ಬರೋಬ್ಬರಿ 93,36,967 ರೂ. ಹಣ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆಗೆ ಬಿದ್ದವರು, ಇದೀಗ ನಮ್ಮ ಹಣ ಮರಳಿ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಆನ್‌ಲೈನ್‌ನಲ್ಲೇ ಲಕ್ಷ ಲಕ್ಷ ಹಣ ದೋಚಿದ ವಂಚಕರು ಇದೀಗ ಮೊಬೈಲ್‌ ಸ್ವೀಚ್ಡ್ ಆಫ್‌ ಮಾಡಿ ಆನ್‌ಲೈನ್‌ದಿಂದಲೇ ದೂರ ಇದ್ದಾರೆ!.

ಸಿಮೆಂಟ್‌ ವ್ಯಾಪಾರಿಗೆ ನಾಮ: ಜಿಲ್ಲೆಯ ಇಳಕಲ್ಲ ನಗರದ ಸಿಮೆಂಟ್‌ ವ್ಯಾಪಾರಿಯೊಬ್ಬರಿಗೆ ಸ್ಕೆಚ್‌ ಹಾಕಿದ ಆನ್‌ಲೈನ್‌ ವಂಚಕರು ಅವರಿಂದ ಬರೋಬ್ಬರಿ 10,50,560 ರೂ. ಪಡೆದಿದ್ದಾರೆ. ಮೊದಲು 10 ರೂಪಾಯಿಂದ ಆರಂಭಗೊಂಡ ಈ ವಂಚನೆ 10 ಲಕ್ಷ ದಾಟುವವರೆಗೂ ಈ ವ್ಯಾಪಾರಿ ಅರಿವಿಗೇ ಬಂದಿಲ್ಲ. ತಮ್ಮ ಅಂಗಡಿಗೆ ಸಿಮೆಂಟ್‌ ಬ್ಯಾಗ್‌ ಬರುತ್ತವೆ ಎಂದು ಕಾದು ಕುಳಿತವಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂಬುದು ತಿಳಿಯುವಷ್ಟರಲ್ಲಿ ಆನ್‌ಲೈನ್‌ ವಂಚಕರು ಆಫ್‌ಲೈನ್‌ ಆಗಿದ್ದಾರೆ.

ಈ ವ್ಯಾಪಾರಿಗೆ ಎಸಿಸಿ ಸಿಮೆಂಟ್‌ ಬ್ಯಾಗ್‌ಗಳನ್ನು ಕಡಿಮೆ ದರಕ್ಕೆ ಹಾಗೂ ಡೀಲರ್‌ಶಿಪ್‌ ಕೊಡುವುದಾಗಿ ನಂಬಿಸಿದ ವಂಚಕರು ಮೊದಲು ಡಿಪಾಸಿಟ್‌ ಹಣ ಪಾವತಿಯ ನಿಖರತೆ ಅರಿಯಲು 10 ರೂ. ದಿಂದ ವಂಚನೆ ಆರಂಭಿಸಿದ್ದಾರೆ. 300 ಬ್ಯಾಗ್‌ ಸಿಮೆಂಟ್‌ ಕಳುಹಿಸುವ ನಂಬಿಕೆಯ ಮಾತುಗಳನ್ನಾಡಿ 45,740 ರೂ. ಹಾಕಿಸಿಕೊಂಡಿದ್ದಾರೆ. ಬಳಿಕ ಪೂರ್ಣ ಹಣ ಪಾವತಿಸಲು ಮತ್ತೆ 45,740 ಪಡೆದ ವಂಚಕರು ವಿಶೇಷ ಆಫರ್‌ ಕೊಟ್ಟು 2 ಸಾವಿರ ಬ್ಯಾಗ್‌ ಬುಕ್‌ ಮಾಡಲು ಹೇಳಿದ್ದಾರೆ. ಆ ಆಫರ್‌ ನಂಬಿ ಪುನಃ 1,03,700, 1,35,490, 1,64,500, 97,800, 1,52,500, 3,05,000 ಹೀಗೆ ಒಟ್ಟು 10,50,560 ರೂ.ಗಳನ್ನು ವಂಚಕರು ಹೇಳಿದ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಕಳೆದೊಂದು ವಾರದಲ್ಲಿ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣದಲ್ಲಿ 93,36,967 ರೂ. ಕಳೆದುಕೊಂಡ ಬಗ್ಗೆ ದೂರು ದಾಖಲಾಗಿವೆ. ವಿವಿಧ ಆಮಿಷವೊಡ್ಡಿ ಬಲೆಗೆ ಬೀಳಿಸುವ ಆನ್‌ಲೈನ್‌ ವಂಚಕರಿಂದ ಜನ ಜಾಗೃತರಾಗಿರಬೇಕೆಂದು ಎಷ್ಟೇ ಹೇಳಿದರೂ ಜಾಗೃತರಾಗುತ್ತಿಲ್ಲ. ಹಣ ಕಳೆದುಕೊಂಡವರ್ಯಾರೂ ಅನಕ್ಷರಸ್ಥರಲ್ಲ, ಎಲ್ಲರೂ ಸುಶಿಕ್ಷಿತರೇ. ಹಣ ಹಾಕಿದ 24 ಗಂಟೆಯೊಳಗೆ 1930ಗೆ ಕರೆ ಮಾಡಿದರೆ ಆ ಹಣ ಫ್ರೀಜ್‌ ಮಾಡಿಸಬಹುದು. ಎಂ. ನಾಗರಡ್ಡಿ, ಪಿಐ, ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆ

Advertisement

ಆನ್‌ಲೈನ್‌ ವಂಚಕರು ಆಫ್‌
ಇತ್ತ ಹಣ ಹಾಕಿದ ವ್ಯಾಪಾರಿ ಅಂಗಡಿಗೆ ಸಿಮೆಂಟ್‌ ಬ್ಯಾಗ್‌ ಬರುತ್ತವೆ. ನನಗೆ ಡೀಲರ್‌ಶಿಪ್‌ ಸಿಗುತ್ತದೆ ಎಂದು ಕಾದು ಕುಳಿತಿದ್ದ. ಸೆ.11ರಂದು ಪುನಃ ಆನ್‌ಲೈನ್‌ ವಂಚಕರಿಗೆ ಕರೆ ಮಾಡಿದಾಗ ಮೊಬೈಲ್‌ ರಿಸೀವ್‌ ಮಾಡಿಲ್ಲ. ಪದೇ ಪದೇ ಕರೆ ಮಾಡಿದಾಗ ಆ ಮೊಬೈಲ್‌ ಸಂಖ್ಯೆಯೇ ಸ್ವಿಚ್ಡ್ ಆಫ್‌ ಆಗಿತ್ತು. ಆಗ ಸಂಶಯ ಬಂದ ವ್ಯಾಪಾರಿ ಪರಿಚಯದವರೊಂದಿಗೆ ವಿಚಾರ ಹಂಚಿಕೊಂಡಿದ್ದು, ಮೋಸ ಆಗಿರುವುದು ಖಚಿತವಾಗಿದೆ. ಇದೀಗ ಆ ವ್ಯಾಪಾರಿ ಸಿಇಎನ್‌ ಕ್ರೈಂ ಪೊಲೀಸರಿಗೆ ದೂರು ನೀಡಿ ನನ್ನ ಹಣ ಮರಳಿಸಿಕೊಡಿ ಎಂದು ಬೇಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉತ್ತರ ಭಾರತದ ವಿವಿಧ ರಾಜ್ಯಗಳ ಮಾಹಿತಿ ಹೇಳುವ ಆನ್‌ಲೈನ್‌ ಸಿಮ್‌, ಬ್ಯಾಂಕ್‌ ಖಾತೆಗಳ ಶಾಖೆಗಳ ಜಾಡು ಹಿಡಿದು ತನಿಖೆ ನಡೆದಿದೆಯಾದರೂ ಆ ಹಣ ಮರಳಿ ಕೈ ಸೇರುವುದು ಸುಲಭವಲ್ಲ ಎನ್ನಲಾಗಿದೆ.

ಅರ್ಧ ಕೋಟಿ ನಾಮ
ಬಾಗಲಕೋಟೆಯ ವೈದ್ಯರೊಬ್ಬರು ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 53,83,600 (ಅರ್ಧ ಕೋಟಿ) ಹಣ ಕಳೆದುಕೊಂಡಿದ್ದಾರೆ. ಇದು ಕೂಡ ಕಳೆದೊಂದು ವಾರದಲ್ಲೇ ನಡೆದಿದ್ದು, ಹಣ ಕಳೆದುಕೊಂಡ ವೈದ್ಯೆ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.ಕರ್ನಾಟಕ ಅಷ್ಟೇ ಅಲ್ಲ, ರಾಷ್ಟ್ರದ ವಿವಿಧ ಹೋಟೆಲ್‌ ಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುವ ಜಾಬ್‌ ಆನ್‌ಲೈನ್‌ ಮೂಲಕ ಮಾಡಬಹುದು. ಜತೆಗೆ ಮನೇಲಿ ಕುಳಿತು ಹಣ ಗಳಿಸಬಹುದೆಂಬ ಆಸೆ ಹುಟ್ಟಿಸಿದ ವಂಚಕರು ವೈದ್ಯೆಗೆ 600, 2800, 66, 500 ಹೀಗೆ ಹಣ ಅವರ ಹೆಸರಿನಲ್ಲೇ ತಾವೇ ಸಿದ್ಧಪಡಿಸಿದ್ದ ಖಾತೆಯಲ್ಲಿ ಜಮೆ ಆದಂತೆ ತೋರಿಸಿದ್ದಾರೆ. ಇದನ್ನು ನಂಬಿದ ಆ ವೈದ್ಯೆ 1.80 ಲಕ್ಷ, 3.80 ಲಕ್ಷ, 7.80 ಲಕ್ಷ, 19.80 ಲಕ್ಷ ಹೀಗೆ ಹಣ ಹಾಕಿದ್ದಾರೆ. ತಮ್ಮ ಅಷ್ಟೂ ಹಣ ಮರಳಿ ಪಡೆಯಲು ಮತ್ತೆ 19.80 ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಇದೆಲ್ಲ ವ್ಯವಹಾರದ ಮಾಹಿತಿಯನ್ನು ಟೆಲಿಗ್ರಾಂ ಗ್ರುಪ್‌ನಲ್ಲಿ ಹಂಚಿಕೊಳ್ಳುತ್ತ ಬಂದಿದ್ದಾರೆ. ಒಟ್ಟಾರೆ ಆನ್‌ಲೈನ್‌ ಜಾಬ್‌ ನಂಬಿದ ವೈದ್ಯೆ ಇದೀಗ 53.83 ಲಕ್ಷ ಕಳೆದುಕೊಂಡಿದ್ದಾರೆ. ಈ ಘಟನೆಯೂ ಕಳೆದ ವಾರ ನಡೆದಿದ್ದು ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ಗೂ 30 ಲಕ್ಷ ಟೋಪಿ
ಇನ್ನು ಜಿಲ್ಲೆಯ ಮುಧೋಳ ನಗರದ ಬ್ಯಾಂಕ್‌ ವೊಂದರ ನಿವೃತ್ತ ಮ್ಯಾನೇಜರ್‌ ಕೂಡ ಹೋಟೆಲ್‌ ಗಳ ಬಗ್ಗೆ ಉತ್ತಮ ಪ್ರತಿಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಹಾಕಿದರೆ ಮನೇಲಿ ಕುಳಿತು ಹಣ ಗಳಿಸಬಹುದು ಎಂಬ ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 30,02,807 ರೂ. ಕಳೆದುಕೊಂಡಿದ್ದಾರೆ. ಇವರಿಗೂ ಆರಂಭದಲ್ಲಿ 210 ರೂ. ದಿಂದ ವಿವಿಧ ಹಂತದಲ್ಲಿ ಒಟ್ಟು 4230 ರೂ.ವರೆಗೆ ಹಾಕಿದ್ದಾರೆ. ಬಳಿಕ ಬೇರೊಂದು ಖಾತೆ ಕ್ರಿಯೇಟ್‌ ಮಾಡಿ ಅದರಲ್ಲಿ ನಿವೃತ್ತ ಮ್ಯಾನೇಜರ್‌ ಹೆಸರಿನಲ್ಲಿ ಹಣ ತೋರಿಸಿದ್ದು, ಅದನ್ನು ವಿತ್‌ ಡ್ರಾ ಮಾಡಲು ತೆರಿಗೆ ರೂಪದಲ್ಲಿ 12.04 ಲಕ್ಷ ಹಾಕಲು ಹೇಳಿದ್ದಾರೆ. ಅಷ್ಟೊತ್ತಿಗೆ ಅವರಿಂದ 30.02 ಲಕ್ಷ ಹಣ ದೋಚಿದ್ದರು. 12 ಲಕ್ಷ ಹಣವಿಲ್ಲದೇ ಸುಮ್ಮನಾದ ನಿವೃತ್ತ ಮ್ಯಾನೇಜರ್‌ ಮರುದಿನ ಅವರೊಂದಿಗೆ ಟೆಲಿಗ್ರಾಂ ಖಾತೆಯಲ್ಲಿ ಚಾಟ್‌ ಮಾಡುತ್ತಿದ್ದ ವ್ಯಕ್ತಿಗೆ ಚಾಟ್‌ ಮಾಡಿದ್ದಾರೆ. ಅದಕ್ಕೆ ಯಾವುದೇ ರೀತಿಯ ಸ್ಪಂದನೆ ಬಂದಿಲ್ಲ. ಈ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿದಾಗ ಇದು ಪಕ್ಕಾ ಆನ್‌ಲೈನ್‌ ವಂಚನೆ ಎಂಬುದು ಅರಿವಿಗೆ ಬಂದಿದೆ. ಆರಂಭದಲ್ಲಿ ವರ್ಕ್‌ ಫ್ರಾಮ್‌ ಹೋಂ ಎಂಬ ಆಸೆ ತೋರಿಸಿ, ಬಳಿಕ ಹಣ ಹೂಡಿಕೆಯ ಬಲೆ ಹಾಕಿದ ವಂಚಕರು ಅವರಿಂದ 30.02 ಲಕ್ಷ ಹಣವನ್ನು ಆನ್‌ಲೈನ್‌ ಮೂಲಕವೇ ದೋಚಿ ಇದೀಗ ಆಫ್‌ಲೈನ್‌ ಆಗಿದ್ದಾರೆ.

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next