Advertisement

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

01:35 PM Sep 13, 2024 | Team Udayavani |

ಉದಯವಾಣಿ ಸಮಾಚಾರ
ಗುಳೇದಗುಡ್ಡ: ತೋಗುಣಶಿ ಗ್ರಾಮದ ಹತ್ತಿರ ಇಂದಿರಾಗಾಂಧಿ ವಸತಿಯುತ ಶಾಲೆಯ ನೂತನ ಕಟ್ಟಡ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ. ಹೀಗಾಗಿ ಶಾಲೆ ಇನ್ನೂ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದ್ದು ಸುಸಜ್ಜಿತ ಹೊಸ ಕಟ್ಟಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬಳಕೆಗೆ ಸಿಗುತ್ತಿಲ್ಲ. ಹೊಸ ಕಟ್ಟಡ ಸಮುಚ್ಛಯದಲ್ಲಿ ವಸತಿ ಶಾಲೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿಗೃಹ ಸೇರಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

Advertisement

ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಎಲ್ಲ ಸಾಮಗ್ರಿಗಳು ಇಲ್ಲಿಗೆ ಬಂದಿವೆ. ಆದರೆ ಇದುವರೆಗೆ ಶಾಲೆ ಸ್ಥಳಾಂತರವಾಗಿಲ್ಲ. ಅ ಧಿಕಾರಿಗಳು ಶೀಘ್ರವೇ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎನ್ನುತ್ತಿದ್ದಾರೆ. ಆದರೆ ಈವರೆಗೂ ಮುಹೂರ್ತ ಕೂಡಿಬಂದಿಲ್ಲ.

ಪಟ್ಟಣದ ಖಾಸಗಿ ಕಟ್ಟಡದಲ್ಲಿ 2016-17ನೇ ಸಾಲಿನಿಂದ ಇಂದಿರಾಂಧಿ ವಸತಿ ಶಾಲೆ ಆರಂಭವಾಗಿದೆ. ಇದುವರೆಗೆ ಎಸ್‌ಎಸ್‌ಎಲ್‌
ಸಿಯ ಮೂರು ಬ್ಯಾಚ್‌ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಹೊರ ಹೋಗಿದ್ದಾರೆ. ಪ್ರಸ್ತುತ ಒಟ್ಟು 240 ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 10ನೇ ತರಗತಿಗಳಲ್ಲಿ ಓದುತ್ತಿದ್ದಾರೆ. ಒಟ್ಟು 19 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಅದರಲ್ಲಿ 8 ಜನ ಹೊರಗುತ್ತಿಗೆ ನೌಕರರಿದ್ದಾರೆ.

ವಾರ್ಷಿಕ 14 ಲಕ್ಷ ಬಾಡಿಗೆ: ಪಟ್ಟಣದ ಖಾಸಗಿ ಕಟ್ಟಡದಲ್ಲಿ ವಸತಿ ಶಾಲೆ ನಡೆಸುವುದಕ್ಕೆ ವಾರ್ಷಿಕ 14 ಲಕ್ಷಕ್ಕೂ ಅಧಿಕ ಬಾಡಿಗೆ ನೀಡಲಾಗುತ್ತಿದೆ. ಆದರೆ ಆಟದ ಬಯಲು ಇರದೆ ಇರುವುದರಿಂದ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಲ್ಲ ಸೌಲಭ್ಯ ಒಳಗೊಂಡಿರುವ ಕಟ್ಟಡಕ್ಕೆ ಶೀಘ್ರ ಶಾಲೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು
ಒತ್ತಾಯಿಸುತ್ತಿದ್ದಾರೆ.

ಕಟ್ಟಡ ಮುಗಿದಿದ್ದು, ಕಟ್ಟಡದ ಮೂಲಭೂತ ಸೌಲಭ್ಯ ಮತ್ತು ಇತರೆ ಸಾಮಗ್ರಿ ಮತ್ತು ಸಿಸಿ ಟಿವಿ ಅಳವಡಿಸುವುದು ಸೇರಿದಂತೆ ಎಲ್ಲ ಮಾಹಿತಿ ನೀಡಿದ್ದು, ಅದರಂತೆ ಎಲ್ಲ ಕೆಲಸ ಮುಗಿದಿದೆ. ವಿದ್ಯಾರ್ಥಿಗಳಿಗೆ ಸಂಬಂಧಿ ಸಿದ ಸಾಮಗ್ರಿಗಳು ಬಂದಿವೆ. ಕೆಲವೇ ದಿನಗಳಲ್ಲಿ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.
●ಆರ್‌.ಜೆ.ಪವಾರ, ಪ್ರಾಚಾರ್ಯರು,
ಇಂದಿರಾಗಾಂಧಿ  ವಸತಿ ಶಾಲೆ,ಗುಳೇದಗುಡ್ಡ

Advertisement

ಇಂದಿರಾಗಾಂಧಿ ವಸತಿ ನಿಲಯ ಕಟ್ಟಡ ನಿರ್ಮಾಣವಾಗಿದೆ. ಆದರೆ ಅದರ ಹಸ್ತಾಂತರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಸಂಬಂಧಿಸಿದ ಪ್ರಾಚಾರ್ಯರಿಗೆ ಹಸ್ತಾಂತರ ಮಾಡಬೇಕಾಗುತ್ತದೆ. ಅದು ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿ ಇಲ್ಲ.
●ಸದಾಶಿವ ಬಡಿಗೇರ,
ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆ

ಕಟ್ಟಡ ಪೂರ್ಣಗೊಂಡರೂ ಇದುವರೆಗೆ ಸ್ಥಳಾಂತರಿಸಿಲ್ಲ. ಮಕ್ಕಳಿಗೆ ಎಲ್ಲ ಸೌಲಭ್ಯ ಇರುವುದರಿಂದ ಅದಷ್ಟು ಬೇಗನೇ ಹೊಸ
ಕಟ್ಟಡದಲ್ಲಿ ಪಾಠಗಳು ನಡೆಯುವಂತಾಗಬೇಕು.
●ಶ್ರೀನಿವಾಸ ನೆಲ್ಲೂರ, ಹಾನಾಪೂರ ಎಸ್‌.ಪಿ. ಗ್ರಾಮ

ಎಲ್ಲ ಕೆಲಸಗಳು ಮುಗಿದಿದ್ದು ವಿದ್ಯುತ್‌ ಸರಬರಾಜಿಗೆ ಸಂಬಂಧಿ ಸಿದ ಕೆಲಸ ಬಾಕಿ ಇದೆ. ಅದನ್ನು ಈ ವಾರದಲ್ಲಿ ಪೂರ್ಣಗೊಳಿಸಿ
15 ದಿನದಲ್ಲಿ ಪ್ರಾಚಾರ್ಯರಿಗೆ ಕಟ್ಟಡ ಹಸ್ತಾಂತರಿಸಲಾಗುವುದು.
●ನಟರಾಜನ್‌, ಕಿರಿಯ ಇಂಜಿನಿಯರ್‌,
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next