ಬಾಗಲಕೋಟೆ: ತಾಯಿಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರದಲ್ಲಿ ಬುಧವಾರ ಸಂಜೆ ನಡೆದಿದೆ.
ರೇಖಾ ಅರ್ಜುನ ಬಗಲಿ (30), ಪುತ್ರಿಯರಾದ ಸನ್ನಿಧಿ (8), ಸಮೃದ್ಧಿ (5) ಹಾಗೂ ಶ್ರೀನಿಧಿ (3) ಮೃತಪಟ್ಟವರು.
ತಿಮ್ಮಾಪುರದ ರೇಖಾ ಬಂಗಾರಿ ಅವರನ್ನು ಬೀಳಗಿ ತಾಲೂಕಿನ ಸುನಗ ಗ್ರಾಮದ ಅರ್ಜುನ ಬಗಲಿ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ರೇಖಾ ತನ್ನ ಮೂವರು ಮಕ್ಕಳು ಹಾಗೂ ಪತಿಯೊಂದಿಗೆ ತವರು ಮನೆಯಲ್ಲೇ ವಾಸವಾಗಿದ್ದಳು. ಸಹೋದರ ಸದ್ಯ ಮುಧೋಳದಲ್ಲಿದ್ದು, ತಾಯಿ ಸಂಗಾಪುರದಲ್ಲಿದ್ದಾರೆ. ತನಗೆ ಮೂವರೂ ಹೆಣ್ಣು ಮಕ್ಕಳಾಗಿದ್ದು, ಅವರ ಶಿಕ್ಷಣ, ಮುಂದಿನ ಭವಿಷ್ಯದ ಬಗ್ಗೆ ರೇಖಾ ಸದಾ ಚಿಂತೆ ಮಾಡುತ್ತಿದ್ದಳು ಎನ್ನಲಾಗಿದೆ.
ಒಮ್ಮೊಮ್ಮೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಳು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೇ ಪತಿ ಕಬ್ಬು ಕಡಿಯುವ ಗ್ಯಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ಮ್ಯಾಂಗೋ ಜ್ಯೂಸ್‌ನಲ್ಲಿ ಬಳೆ ಚೂರಿನ ಪುಡಿ ಬೆರೆಸಿ ಮಕ್ಕಳಿಗೆ ಕೊಟ್ಟು, ಬಳಿಕ ತಾನೂ ಕುಡಿದಿದ್ದಾಳೆ. ಅಸ್ವಸ್ಥಗೊಂಡು ಬೊಬ್ಬೆ ಹಾಕುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
Related Articles
ಮಾಜಿ ಸಚಿವ ಮೇಟಿ ಸಂಬಂಧಿ ರೇಖಾ ಅವರು ಮಾಜಿ ಸಚಿವ ಎಚ್.ವೈ. ಮೇಟಿ ಅವರ ಸಹೋದರಿಯ ಮೊಮ್ಮಗಳು ಎನ್ನಲಾಗಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.