Advertisement
15 ವರ್ಷಗಳ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು, ಬಿಜೆಪಿ ಮೂರು ಅವಧಿಗಳಿಂದ ತನ್ನ ಕೈವಶ ಮಾಡಿಕೊಂಡಿದೆ. ಆ ಮೂಲಕ ಸದ್ಯಕ್ಕೆ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತಿದೆ.
Related Articles
Advertisement
ಸಿದ್ದು-ಶಿವಾನಂದಗೆ ಪ್ರತಿಷ್ಠೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಈ ಕ್ಷೇತ್ರ, ರಾಜ್ಯ ಅಷ್ಟೇ ಅಲ್ಲ, ದೇಶದ ಗಮನವೂ ಸೆಳೆದಿದೆ. ಇದೇ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಸದ್ಯ ಸಿದ್ದರಾಮಯ್ಯ ಶಾಸಕರು.
ಮೇಲಾಗಿ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರ ಬರಲು ಅದೇ ವರ್ಗಕ್ಕೆ ಸೇರಿದ ವೀಣಾ ಕಾಶಪ್ಪನವರಿಗೆ ಟಿಕೆಟ್ ಕೊಡಿಸಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಇಡೀ ಕ್ಷೇತ್ರದ ಚುನಾವಣೆ ಉಸ್ತುವಾರಿ ಹೊಣೆಯೂ ವಹಿಸಿದ್ದಾರೆ.
ಕಾಂಗ್ರೆಸ್ ಇಡೀ ರಾಜ್ಯದ ಅಷ್ಟೂ ಕ್ಷೇತ್ರಗಳ ಪೈಕಿ ಮಹಿಳೆಗೆ ಅವಕಾಶ ಕೊಟ್ಟಿದ್ದು ಈ ಕ್ಷೇತ್ರದಲ್ಲಿ ಮಾತ್ರ.ಅದನ್ನೇ ಚುನಾವಣೆ ಪ್ರಚಾರದ ಅಸ್ತ್ರಗ ಳಲ್ಲಿ ಒಂದಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಗೆಲುವಿನ ಲೆಕ್ಕಾಚಾರ: ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, 8 ಕ್ಷೇತ್ರಗಳಲ್ಲಿ ಬಿಜೆಪಿ 6,09,299 ಮತ ಪಡೆದಿದ್ದರೆ, ಕಾಂಗ್ರೆಸ್ 5,19,008 ಮತ ಪಡೆದಿತ್ತು. ಜೆಡಿಎಸ್ ಅಭ್ಯರ್ಥಿಗಳು 73,272 ಮತ ಗಳಿಸಿದ್ದರು. ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಒಂದೇ ಅಭ್ಯರ್ಥಿ ಕಣಕ್ಕಿಳಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳು 6,12,033 ಆಗುತ್ತಿದ್ದು, ಬಿಜೆಪಿಗಿಂತ 2,734ಮತಗಳು ಹೆಚ್ಚಾಗುತ್ತವೆ. ಈ ಹೆಚ್ಚಿನ ಮತಗಳ ಜತೆಗೆ ಬಿಜೆಪಿ ಪಾಲಾಗಿದ್ದ ಲಿಂಗಾಯತ ಮತಗಳು ಒಂದಷ್ಟು ಬಂದರೆ, ಕಾಂಗ್ರೆಸ್ ಗೆಲುವು ಸುಲಭ ಎಂಬುದು, ಪಕ್ಷದ ಕೆಲವರ ಲೆಕ್ಕಾಚಾರ. ಕಾಂಗ್ರೆಸ್ ಪಡೆದ ಮತಗಳೇ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಬಹಳ ಕಡಿಮೆ ಎಂಬ ಮಾತೂ ಕೇಳಿ ಬರುತ್ತಿದೆ. ಇಡೀ ಕ್ಷೇತ್ರದಲ್ಲಿ 8,42,513 ಮಹಿಳಾ ಮತದಾರರಿದ್ದು,ಮಹಿಳಾ ಅಭ್ಯರ್ಥಿಯಾಗಿದ್ದರಿಂದ ಕನಿಷ್ಠ 3 ಲಕ್ಷ ಮಹಿಳೆಯರ ಮತ ಪಡೆಯಬೇಕೆಂಬ ಲೆಕ್ಕಾಚಾರ ಕಾಂಗ್ರೆಸ್ ಮಾಡಿದೆ. ಅದಕ್ಕಾಗಿ ಮಹಿಳಾ ಸಂಘಟನೆಗಳು, ಆಶಾ ಕಾರ್ಯಕರ್ತೆಯರ ಸಂಘಟನೆಗಳ ಮೊರೆ ಹೋಗಲಾಗಿದೆ ಎನ್ನಲಾಗಿದೆ. ನಿರ್ಣಾಯಕ ಅಂಶ
ಕ್ಷೇತ್ರದಲ್ಲಿ ಮೋದಿ ಅಲೆಯೂ ದೊಡ್ಡ ಮಟ್ಟದಲ್ಲಿದೆ. 2009ರ ಚುನಾವಣೆಯಲ್ಲಿ ಕೇವಲ 35,446 ಮತಗಳಿಂದ ಗೆದ್ದಿದ್ದ ಬಿಜೆಪಿಯ ಗದ್ದಿಗೌಡರ, 2014ರ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿ ಹೋದ ಮೇಲೆ ಈ ಅಂತರ 1,16,560 ಮತಗಳಿಗೆ ದಾಟಿತ್ತು. ಈ ಬಾರಿಯೂ ಗದ್ದಿಗೌಡರು ತಮ್ಮ ಕ್ರಿಯಾಶೀಲ ಕಾರ್ಯಕ್ಕಿಂತ ಮೋದಿ ಅಲೆ, ಬಿಜೆಪಿ ಶಾಸಕರ ಬಲದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಪ್ರಮುಖ ಪಾತ್ರ ವಹಿಸುವ ದಲಿತ, ರಡ್ಡಿ, ನೇಕಾರ,ಮುಸ್ಲಿಂ ಮತಗಳು ಪೂರ್ಣ ಪ್ರಮಾಣದಲ್ಲಿ ತಮಗೆ ಲಭಿಸಿದರೆ ಗದ್ದಿಗೌಡರ 4ನೇ ಬಾರಿಯ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಇದು ಕ್ಷೇತ್ರದಲ್ಲಿ ಜಾತಿ ನಿರ್ಣಾಯಕ ಅಂಶವೂ ಆಗಿದೆ. – ಶ್ರೀಶೈಲ ಕೆ. ಬಿರಾದಾರ