Advertisement
ಶತಕದ ಯೋಜನೆ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣದ ಬೇಡಿಕೆ ಇಂದು-ನಿನ್ನೆಯದ್ದಲ್ಲ. 1912ರಲ್ಲಿ ಬ್ರಿಟಿಷರ ಕಾಲದಲ್ಲಿಯೇ ಇದಕ್ಕೆ ಒಂದು ಬಾರಿ ಸಮೀಕ್ಷೆ ಕೂಡಾ ಆಗಿತ್ತು. ಕಾರಣಾಂತರಗಳಿಂದ ಈ ಯೋಜನೆ ಮುಂದೂಡುತ್ತಲೇ ಬಂದಿದ್ದು, ದಿ| ಜಾಫರ್ ಶರೀಫ್ ಅವರು ರೈಲ್ವೆ ಸಚಿವರು, ಸಿದ್ದು ನ್ಯಾಮಗೌಡ ಅವರು ಕೇಂದ್ರದ ಕಲ್ಲಿದ್ದಲು ಸಚಿವರಾಗಿದ್ದ ವೇಳೆ ಈ ಯೋಜನೆಗೆ ಮತ್ತಷ್ಟು ಬೇಡಿಕೆ ಹೆಚ್ಚಿತು. ಒಟ್ಟಾರೆ, ಈ ಯೋಜನೆಗೆ ಅನುಮೋದನೆ ದೊರೆತಿದ್ದು, 2010ರಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದ ವೇಳೆ. ಆಗ ಈ ಯೋಜನೆಗೆ ಬೇಕಾಗಿದ್ದು ಕೇವಲ 816 ಕೋಟಿ ಮಾತ್ರ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 1 ಸಾವಿರ ಕೋಟಿ ಅನುದಾನದೊಳಗೆ ಈ ಯೋಜನೆ ಪೂರ್ಣಗೊಳ್ಳುತ್ತಿತ್ತು.
Related Articles
Advertisement
ಇನ್ನೂ ಬೇಕು 814 ಎಕರೆ: ಬಾಗಲಕೋಟೆ ಉಪ ವಿಭಾಗದಲ್ಲಿ 580 ಎಕರೆ ಸ್ವಾಧೀನ ಮಾಡಿಕೊಂಡು ಮಾರ್ಗ ನಿರ್ಮಾಣ ಮಾಡಿದ್ದು, ಇದಕ್ಕಾಗಿ ಸುಮಾರು 700 ಕೋಟಿಯಷ್ಟು ಅನುದಾನ ಖರ್ಚು ಮಾಡಲಾಗಿದೆ. ಇನ್ನು ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 1323 ಎಕರೆ 09 ಗುಂಟೆ ಭೂಮಿ ಅಗತ್ಯವಿದೆ. ಅದರಲ್ಲಿ 508.10 ಎಕರೆ ಸ್ವಾಧೀನ ಮಾಡಿಕೊಂಡಿದ್ದು ಇದಕ್ಕಾಗಿ 113.30 ಕೋಟಿ ಪರಿಹಾರ ರೈತರಿಗೆ ವಿತರಣೆ ಮಾಡಲಾಗಿದೆ.
ಈ ಯೋಜನೆ, ಬಾಗಲಕೋಟೆ ಜಿಲ್ಲೆಯಲ್ಲಿ ಪೂರ್ಣಗೊಳ್ಳಲು ಇನ್ನೂ 814.30 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯಿದೆಯಡಿ ಸುಮಾರು 115 ಕೋಟಿ ಅನುದಾನದ ಅಗತ್ಯವಿದೆ. ರಾಜ್ಯ ಸರ್ಕಾರ ಈ ಅನುದಾನ ನೀಡಿದರೆ, ಭೂಸ್ವಾಧೀನ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಆದರೆ, ಅನುದಾನ ಕೊರತೆಯಿಂದ ಭೂಸ್ವಾಧೀನ ನಡೆಯುತ್ತಿಲ್ಲವೆಂದು ರೈಲ್ವೆ ಹೋರಾಟ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿ ಅವರ ಪ್ರಬಲ ಆರೋಪವಾಗಿದೆ.
ಪಾಳು ಬಿದ್ದ ರೈಲು ನಿಲ್ದಾಣಗಳು ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗದಡಿ ಖಜ್ಜಿಡೋಣಿವರೆಗೆ ಒಟ್ಟು ಸಾವಿರಾರು ಕೋಟಿ ಖರ್ಚು ಮಾಡಿ ಐದು ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದೆ. ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಶೆಲ್ಲಿಕೇರಿ ಹಾಗೂ ಖಜ್ಜಿಡೋಣಿ ರೈಲ್ವೆ ನಿಲ್ದಾಣಗಳು ಬಳಕೆ ಇಲ್ಲದೇ ಪಾಳು ಬಿದ್ದಿದ್ದು, ಕಾನೂನುಬಾಹಿರ ಚಟುವಟಿಕೆಗಳ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಪ್ರತಿಯೊಂದು ರೈಲು ನಿಲ್ದಾಣದಲ್ಲಿದ್ದ ಕಟ್ಟಡಗಳು ಬಿರುಕು ಬಿಟ್ಟಿದ್ದು, ಕೆಲವೆಡೆ ಹಾಕಿರುವ ಸ್ಟೀಲ್ ಮತ್ತು ಕಬ್ಬಿಣದ ಸಾಮಗ್ರಿ ತುಕ್ಕು ಹಿಡಿದು ಹಾಳಾಗಿವೆ.
ಪ್ರಸ್ತುಕ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಈ ಮಾರ್ಗಕ್ಕೆ ಕೇವಲ 50 ಕೋಟಿ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಕೇವಲ 816 ಕೋಟಿಯಲ್ಲಿ ಮುಗಿಯಬೇಕಿದ್ದ ಈ ಯೋಜನೆಗೆ ಈಗ ಕನಿಷ್ಠ 3 ಸಾವಿರ ಕೋಟಿ ಬೇಕಾಗುತ್ತದೆ. ಜಿಲ್ಲಾಡಳಿತ ಭೂಸ್ವಾಧೀನ ಪೂರ್ಣಗೊಂಡಿದೆ ಎಂದು ಹೇಳುತ್ತದೆ, ರೈಲ್ವೆ ಇಲಾಖೆ ಭೂಮಿಯೇ ಹಸ್ತಾಂತರಿಸಿಲ್ಲ ಎಂದು ಹೇಳುತ್ತಿದೆ. ಅಲ್ಲದೇ ಈ ಯೋಜನೆ ಕಳೆದ 12 ವರ್ಷಗಳಿಂದ ವಿಳಂಬವಾಗಲು ಈ ಭಾಗದ ಸಂಸದರು, ಶಾಸಕರು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಕೂಡಲೇ ಭೂ ಸ್ವಾಧೀನಕ್ಕೆ ಅಗತ್ಯವಾದ 115 ಕೋಟಿ ಹಣವನ್ನು ರಾಜ್ಯ ಸರ್ಕಾರ ಹಾಗೂ ಮಾರ್ಗ ನಿರ್ಮಾಣಕ್ಕೆ ಬೇಕಾದ ಅನುವಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಕುತುಬುದ್ದೀನ್ ಖಾಜಿ, ರಾಜ್ಯಾಧ್ಯಕ್ಷ, ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ
*ಶ್ರೀಶೈಲ ಕೆ.ಬಿರಾದಾರ