Advertisement

Bagalkot: ಕಾಯಕ ಶ್ರಮ ಜೀವಿಗಳೇ ನಿಜ ದೇವರು- ರಕ್ಷಿತಾ ಭರತಕುಮಾರ

04:50 PM Oct 21, 2023 | Team Udayavani |

ಬಾಗಲಕೋಟೆ: ಭೂಮಿಯಲ್ಲಿ ಶ್ರಮಪಟ್ಟು ದುಡಿಯುವ ರೈತರು, ನಿತ್ಯ ಪರಿಶ್ರಮಪಡುವ ಕಾಯಕ ಜೀವಿಗಳೇ ನಮಗೆ ನಿಜವಾದ ದೇವರು. ನವರಾತ್ರಿ ಅಂಗವಾಗಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಉಡಿ ತುಂಬುವುದು ಸಾಮಾನ್ಯ. ಆದರೆ, ಕೆರೆಯಂಗಳದಲ್ಲಿ ಬೆವರು ಸುರಿಸಿ ಶ್ರಮಪಡುವ ಕಾಯಕ ಜೀವಿಗಳಿಗೆ ಉಡಿ ತುಂಬುವ ಮೂಲಕ ಅವರನ್ನು ಗೌರವಿಸಬೇಕೆಂಬುದು ನಮ್ಮ ಅಭಿಲಾಸೆ. ಹೀಗಾಗಿ ಕಾಯಕ ಜೀವಿ ಮಹಿಳೆಯರೇ ದೇವರೆಂದು ಭಾವಿಸಿ, ಅವರ ಉಡಿ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯೆ, ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಹೇಳಿದರು.

Advertisement

ಜಿಲ್ಲೆಯ ಬಾದಾಮಿ ತಾಲೂಕಿನ ಕೆಂದೂರ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಹೂಳೆತ್ತುವ ಕಾಯಕದಲ್ಲಿ ತೊಡಗಿರುವ ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನವರಾತ್ರಿ ಅಂಗವಾಗಿ ಎಲ್ಲರೂ ಪ್ರತಿಯೊಬ್ಬ ಮಹಿಳೆಯರು ದೇವಾಲಯಕ್ಕೆ ಹೋಗುತ್ತೇವೆ. ಎಲ್ಲ ಮಹಿಳೆಯರನ್ನು ಒಟ್ಟಿಗೆ ಕೂಡಿಸಿ, ಅರಿಶಿಣ, ಕುಂಕುಮ, ಕುಪ್ಪಸ ನೀಡಿ ಉಡಿ ತುಂಬುವುದು ಸಂಪ್ರದಾಯ. ಮಹಾನವಮಿಯಲ್ಲಿ ಮುತ್ತೈದೆ ಮಹಿಳೆಯರನ್ನು ದೇವಿ ಸ್ವರೂಪವೆಂದೇ ಭಾವಿಸಲಾಗುತ್ತದೆ. ಆದರೆ, ನಾನು ಇಂದು ಕೂಲಿ ಕಾರ್ಮಿಕ ಮಹಿಳೆಯರನ್ನೇ ದೇವಿ ಸ್ವರೂಪವೆಂದು ಭಾವಿಸಿ, ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಮಹಿಳೆಯರಿಗೆ ಉಡಿ ತುಂಬಲು ಬಂದಿದ್ದೇನೆ. ಇವರೇ ನಿಜವಾದ ದೇವರು ಎಂದು ಹೇಳಿದರು.

ನಿತ್ಯವೂ ಬಿರು ಬಿಸಲಿನಲ್ಲಿ ಎಲ್ಲರೂ ಶ್ರಮಪಟ್ಟು ದುಡಿಯುತ್ತಾರೆ. ಸಧ್ಯ ಜಿಲ್ಲೆಯಲ್ಲಿ ತೀವ್ರ ಬರವಿದೆ. ಮಳೆ ಇಲ್ಲ. ಬೆಳೆಯೂ ಬಂದಿಲ್ಲ. ಹೀಗಾಗಿ ಗ್ರಾಮೀಣ ರೈತರು, ಬಡ ಜನರು ಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ನೆಮ್ಮದಿಯ ಬದುಕು ಸಿಗಬೇಕು. ಹೀಗಾಗಿ ಕಾಂಗ್ರೆಸ್‌ ಸರ್ಕಾರ, ಮಹಿಳೆಯರಿಗೆ ಮಾಸಿಕ 2 ಸಾವಿರ ನೀಡುವ ಜತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಯೂ ಕೊಡುತ್ತಿದೆ. ಪ್ರತಿಯೊಬ್ಬ ಮಹಿಳೆಯರು ಇದರ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.

ನಮ್ಮ ಸರ್ಕಾರ ಮಹಿಳೆಯರು, ತಮ್ಮ ಬಂಧು- ಬಾಂಧವರ ಭೇಟಿ ಮಾಡಲು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದೆ. ಇದು ಮಹಿಳೆಯರಿಗೆ ಅತ್ಯುತ್ತಮ ಯೋಜನೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗೊಮ್ಮೆ ಬಡವರು, ದೀನ ದಲಿತರು ಹಾಗೂ ಕಾಯಕ ಜೀವಿಗಳ ಪರವಾಗಿ ಯೋಜನೆ ರೂಪಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಯೋಜನೆಗಳು, ಯಾವುದೇ ಜಾತಿ, ಧರ್ಮ, ಪಂಗಡ ಎನ್ನದೇ ಎಲ್ಲರಿಗೂ ನೀಡಲಾಗುತ್ತಿದೆ.

Advertisement

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದೇ ಕಾಂಗ್ರೆಸ್‌ನ ಧ್ಯೇಯ. ಗ್ರಾಮೀಣ ಮಹಿಳೆ ಯರು ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಸಲಹೆ ನೀಡಿದರು.

ಮಾದರಿಯಾದ ಈಟಿ ನಡೆ: ನವರಾತ್ರಿ ನಿಮಿತ್ಯ ಗ್ರಾಮೀಣ ಕೂಲಿ ಕಾರ್ಮಿಕರು, ಕೆರೆಯ ಹೂಳೆತ್ತು ಸ್ಥಳಕ್ಕೆ ತೆರಳಿ, ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬುವ ಮೂಲಕ ವಿಶೇಷವಾಗಿ ನವರಾತ್ರಿ ಆಚರಣೆ ಮಾಡಿದ ಕಾರ್ಯಕ್ಕೆ ಹಲವರ ಮೆಚ್ಚುಗೆ ಕೂಡ ವ್ಯಕ್ತವಾಯಿತು. ನಗರ-ಪಟ್ಟಣ ಪ್ರದೇಶದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸುವುದು ಸಾಮಾನ್ಯ. ಆದರೆ, ನಾವು ಕೂಲಿ ಕೆಲಸ ಮಾಡುವ ಸ್ಥಳಕ್ಕೆ ಬಂದು ಉಡಿ ತುಂಬಿದ್ದು ಬಹಳ ಖುಷಿ ಆಯಿತು ಎಂದು ಕೆಂದೂರ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಬಳಿಕ, ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕೆಲ ಮಹಿಳೆಯರು, ನಮಗೆ ಆಶ್ರಯ ಮನೆ ಇಲ್ಲ. ಕಳೆದ 2019ರಲ್ಲಿ ಪ್ರವಾಹ ಬಂದಾಗ, ಶೆಡ್‌ನ‌ಲ್ಲಿ ವಾಸಿಸುತ್ತಿದ್ದು, ಅಂದಿನಿಂದ ಅದೇ ಶೆಡ್‌ನ‌ಲ್ಲಿ ಇದ್ದೇವೆ. ನಮಗೆ ಮನೆ ಕೊಡಿಸಿ ಎಂದು ಮನವಿ ಮಾಡಿದರು. ಇನ್ನೂ ಕೆಲ ಮಹಿಳೆಯರು, ಗ್ಯಾರಂಟಿ ಯೋಜನೆಯ 2 ಸಾವಿರ ಹಣ ನಮಗೆ ಬರುತ್ತಿಲ್ಲ ಎಂದು ತಿಳಿಸಿದರು. ಬಹುತೇಕರ ಸಮಸ್ಯೆ ಆಲಿಸಿದ ಬಳಿಕ, ನಿಮ್ಮೆಲ್ಲ ಸಮಸ್ಯೆಗಳ ಕುರಿತು ಈ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ಗಮನಕ್ಕೆ ತರುತ್ತೇವೆ. ಶಾಸಕರೂ ಈ ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ
ನಿರ್ವಹಿಸುತ್ತಿದ್ದು, ನಿಮ್ಮೆಲ್ಲರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಈಟಿ ತಿಳಿಸಿದರು.

ನವರಾತ್ರಿ ವೇಳೆ ಮಹಿಳೆಯರಿಗೆ ಉಡಿ ತುಂಬುವುದು ನಮ್ಮ ಸಂಪ್ರದಾಯ. ಆದರೆ, ಕೂಲಿ ಕಾರ್ಮಿಕರ ಮಹಿಳೆಯರಿಗೆ ಅವರದೇ ಆದ ಕೆಲಸ-ಜಂಟಾಟಗಳಿರುತ್ತವೆ. ನವರಾತ್ರಿ ಆಚರಣೆ ಮಾಡಿದರೂ, ಪರಸ್ಪರ ಉಡಿ ತುಂಬಿ ಸತ್ಕರಿಸುವ ಕಾರ್ಯ ನಡೆಯುವುದು ವಿರಳ. ಹೀಗಾಗಿ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಮಹಿಳೆಯರಿಗೆ ಪ್ರೀತಿಯಿಂದ ಉಡಿ ತುಂಬುವ ಕಾರ್ಯ ಮಾಡಲಾಗಿದೆ. ಇದಕ್ಕೆ ಕಾರ್ಮಿಕ ಮಹಿಳೆಯರೂ ಸಂತಸಪಟ್ಟಿದ್ದಾರೆ. ಶ್ರಮಜೀವಿ ತಾಯಂದಿರೇ ನಿಜವಾದ ದೇವರು ಎಂದು ನಾನು ಭಾವಿಸಿರುವೆ.
ರಕ್ಷಿತಾ ಭರತಕುಮಾರ ಈಟಿ, ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್‌

Advertisement

Udayavani is now on Telegram. Click here to join our channel and stay updated with the latest news.

Next