ಬಾಗಲಕೋಟೆ: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಬೆನ್ನಲ್ಲೆ ಮುಳುಗಡೆ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
Advertisement
ಹೌದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗಲಿದೆ. ನಮಗೆ ನಿಗಮ ಮಂಡಳಿ ಇಲ್ಲವೇ ಪ್ರಮುಖ ಹುದ್ದೆಗಳ ನಿರ್ದೇಶಿತ ಸದಸ್ಯಗಳು ದೊರೆಯಲಿವೆ ಎಂಬ ಆಶಾಭಾವನೆ ಹಲವು ಪ್ರಮುಖ ಕಾರ್ಯಕರ್ತರು ಹೊಂದಿದ್ದು, ಇದೀಗ ಪಕ್ಷದ ಹಿರಿಯರು, ಆಕಾಂಕ್ಷಿ ಪೈಪೋಟಿ ಎದುರಿಸುವ ಅನಿವಾರ್ಯತೆ ಬಿಜೆಪಿಗರ ಸರತಿಯಾಗಿದೆ.
Related Articles
Advertisement
ಚರಂತಿಮಠ ಬೆಂಬಲಗರಿಂದ ಬೇಡಿಕೆ: 2004 ಮತ್ತು 2008ರಲ್ಲಿ ಶಾಸಕರಾಗಿ, ಮುಳುಗಡೆಯಿಂದ ನಲುಗಿದ್ದ ಬಾಗಲಕೋಟೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ, ಕ್ರಿಯಾಶೀಲ ಶಾಸಕರೆಂದೇ ಕರೆಸಿಕೊಳ್ಳುವ ಡಾ|ಚರಂತಿಮಠರಿಗೆ ಬರಲಿರುವ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಬೇಕು ಎಂಬ ಬಲವಾದ ಬೇಡಿಕೆ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವರು, ಪಕ್ಷದ ಹಿರಿಯ ನಾಯಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ನಗರ ಘಟಕದ ಮೂಲಗಳು ತಿಳಿಸಿವೆ.
ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕೋಟಾದಡಿ ಕಾರಜೋಳರು ಸ್ಥಾನ ಪಡೆದರೂ ಉಳಿದ ನಾಲ್ಕು ಕ್ಷೇತ್ರಗಳ ಶಾಸಕರಿಗೂ ಸರ್ಕಾರದಲ್ಲಿ ಜವಾಬ್ದಾರಿ ದೊರೆಯಲಿವೆ ಎಂಬ ವಿಶ್ವಾಸ ಬಿಜೆಪಿ ಪ್ರಮುಖರು ವ್ಯಕ್ತಪಡಿಸುತ್ತಿದ್ದಾರೆ.
ಸಿದ್ದು ಹಣಿಯಲು ಕೊಡಲೇಬೇಕು: ಮಾಜಿ ಸಿಎಂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸದ್ಯ ಬಾದಾಮಿ ಶಾಸಕರಾಗಿದ್ದು, ಅವರ ಪ್ರಭಾವವನ್ನು ಜಿಲ್ಲೆಯಲ್ಲಿ ಕಡಿಮೆ ಮಾಡಲು ಜಿಲ್ಲೆಯಲ್ಲಿ ಎರಡರಿಂದ ಮೂವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಒಂದೆಡೆ ಕೇಳಿ ಬರುತ್ತಿದೆ. ಆದರೆ, ಸದ್ಯಕ್ಕೆ ಅಂತಹ ಪರಿಸ್ಥಿತಿ ಬಿಜೆಪಿಯಲ್ಲಿಲ್ಲ ಎಂಬ ಮಾತಿದೆ.
ಕಾಂಗ್ರೆಸ್-ಜೆಡಿಎಸ್‌ನಲ್ಲಿ ಅತೃಪ್ತರಾಗಿರುವವರು ಬಿಜೆಪಿಗೆ ಬರಲಿದ್ದು, ಅವರನ್ನು ಸಮಾಧಾನಪಡಿಸಿದ ಬಳಿಕವೇ ಬಿಜೆಪಿಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿರ್ಧಾರವಾಗಲಿದೆ ಎನ್ನಲಾಗಿದೆ. ಹೀಗಾಗಿ ಸದ್ಯಕ್ಕೆ ಜಿಲ್ಲೆಯಲ್ಲಿ ಕಾರಜೋಳರು ಹೊರತುಪಡಿಸಿದರೆ, ಉಳಿದವರಿಗೆ ಸಚಿವ ಸ್ಥಾನ ಸಿಗುವುದು ಅಷ್ಟು ಸುಲಭದ ಮಾತಲ್ಲ.
ಒಟ್ಟಾರೆ, ಕಳೆದ 14 ತಿಂಗಳಿಂದ ಮಂಕಾಗಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಸದ್ಯ ಹುರುಪು ಹುಮ್ಮಸ್ಸು ಕಾಣುತ್ತಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಶಾಸಕರಿದ್ದರೂ ತಮ್ಮ ಕೆಲಸ ಕಾರ್ಯಗಳಾಗುತ್ತಿಲ್ಲ ಎಂಬ ಕೊರಗು ಎದುರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ, ಪ್ರಸ್ತುತ ರಾಜಕೀಯ ಬೆಳವಣಿಗೆ ಮುಖ ಅರಳುವಂತೆ ಮಾಡಿದೆ.
3ನೇ ಬಾರಿ ಶಾಸಕರಾಗಿರುವ ಡಾ|ವೀರಣ್ಣ ಚರಂತಿಮಠರು ಸ್ವಚ್ಛ ಹಾಗೂ ಕ್ರಿಯಾಶೀಲ, ಉತ್ತಮ ಆಡಳಿತಗಾರರೆಂದು ಹೆಸರು ಪಡೆದಿದ್ದಾರೆ. ಇಂದಿನ ಸೂಕ್ಷ್ಮ ರಾಜಕೀಯ ಪರಿಸ್ಥಿತಿಯಲ್ಲಿ ಇಂತಹ ನಾಯಕರಿಗೆ ಸಚಿವ ಸ್ಥಾನ ಕೊಟ್ಟರೆ, ಪಕ್ಷಕ್ಕೂ ಅನುಕೂಲ ಹಾಗೂ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ಜಿಲ್ಲಾ ಕೇಂದ್ರ ಸ್ಥಾನದಲ್ಲಿದ್ದು ಪಕ್ಷಕ್ಕೆ ತನು-ಮನ-ಧನದಿಂದ ಅವರು ದುಡಿದಿದ್ದಾರೆ. ಈಚೆಗೆ ಲೋಕಸಭೆ ಚುನಾವಣೆಯಲ್ಲಿ ಸಂಸತ್ ಸ್ಥಾನ ಗೆಲ್ಲಲು ಅವರ ಪಾತ್ರವೂ ದೊಡ್ಡದಿದೆ. ಹೀಗಾಗಿ ಚರಂತಿಮಠರಿಗೆ ನಮ್ಮ ಪಕ್ಷದ ಹಿರಿಯರು ಸಚಿವ ಸ್ಥಾನ ಕೊಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಕೊಡುವಂತೆ ಒತ್ತಾಯವೂ ಮಾಡುತ್ತೇವೆ. ಒಂದು ವೇಳೆ ಕೊಡದಿದ್ದರೆ, ಅವರ ಪರವಾಗಿ ನಾವು ಹೋರಾಟಕ್ಕೂ ಸಿದ್ಧರಿದ್ದೇವೆ.• ರಾಜು ವಿ. ನಾಯ್ಕರ,
ಬಿಜೆಪಿ ನಗರ ಘಟಕದ ಅಧ್ಯಕ್ಷ