Advertisement

ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ

12:55 PM Jun 27, 2019 | Naveen |

ಬಾಗಲಕೋಟೆ: ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಸಂಸ್ಥೆಯ ವಿಭಾಗೀಯ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಮೂಲಕ ತೆರಳಿ, ಬಳಿಕ ಅಪರ ಜಿಲ್ಲಾಧಿಕಾರಿ ದುರ್ಗೆಶ್‌ ರುದ್ರಾಕ್ಷಿ ಅವರಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನೌಕರರು, ಪೋಲೀಸ್‌ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗಳಂತೆ ಸಾರಿಗೆ ಇಲಾಖೆ ಕೂಡಾ ಜನರಿಗೆ ಪ್ರತಿನಿತ್ಯ ಅವಶ್ಯಕ ಸೇವೆ ನೀಡುತ್ತಿದೆ. ಸಾರಿಗೆ ಸಂಸ್ಥೆ ರಾಜ್ಯ ಸರ್ಕಾರದ ಆದೇಶದಂತೆ ಕೆಲಸ ನಿರ್ವಹಿಸುತ್ತಿದೆ. ಆದರೂ ಇತರೆ ಸರ್ಕಾರಿ ಇಲಾಖೆಗಳಿಗಿಂತ ಸಾರಿಗೆ ಸಂಸ್ಥೆಯ ನೌಕರರಿಗೆ ಮೂಲಭೂತ ಸೌಕರ್ಯ ಮತ್ತು ವೇತನ ಕಡಿಮೆಯಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಮಿಕರು ದಿನದ 24 ಗಂಟೆ ಪ್ರಾಮಾಣಿಕವಾಗಿ ನಿಸ್ವಾರ್ಥ ಭಾವನೆಯಿಂದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಶ್ರಮದ ಜೊತೆಗೆ ತ್ಯಾಗ ಮಾಡುತ್ತಾ, ಹಬ್ಬ-ಹರಿದಿನಗಳೆನ್ನದೇ ಕರ್ತವ್ಯ ನಿರ್ವಹಿಸಿದರೂ, ಕೂಡಾ 8 ಗಂಟೆ ಕೆಲಸ ನಿರ್ವಹಿಸುವವರಿಗಿಂತ 3 ಪಟ್ಟು ಕಡಿಮೆ ಸಂಬಳ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಪರಿಶ್ರಮದಿಂದ ಹಲವಾರು ಬಾರಿ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಸಾರಿಗೆ ಪ್ರಶಸ್ತಿ ಪಡೆದಿದೆ. ಇಂತಹ ಹೆಮ್ಮೆಯ ಸಂಸ್ಥೆ ಉಳಿಸಿ-ಬೆಳೆಸಬೇಕಾಗಿದೆ. ನೆರೆಯ ಆಂಧ್ರದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿದ್ದಾರೆ. ಕರ್ನಾಟಕದಲ್ಲೂ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

Advertisement

ಎಂ.ಬಿ. ಬಾದಾಮಿ, ಎಚ್.ಎನ್‌. ಅಂದೇಲಿ, ಅಶೋಕ ಭಜಂತ್ರಿ, ರಮೇಶ ಬದ್ನೂರ, ಜಿ.ಎಸ್‌. ಮಹೀಂದ್ರಕರ, ರವಿ ಮಲಘಾಣ, ಮಂಜು ಬಾಳಿ, ಅನಿಲ ಕಾಮಾ, ವಿ.ಬಿ. ಪಟ್ಟಣಶೆಟ್ಟಿ, ಮಂಜು ಭಜಂತ್ರಿ, ಪಿ.ಎಚ್. ಮುದರಡ್ಡಿ, ಪಿ.ಎಸ್‌. ಹಿರೇಮಠ, ಗಂಗಾಧರ ಮಠ, ಬಾಲು ಬೆಕಿನಾಳ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next