Advertisement

ಮುಂದಿನ ದಿನಗಳಲ್ಲಿ ಕೆಎಚ್‌ಡಿಸಿ ನಿಗಮಕ್ಕೆ ಹೊಸ ಬೆಳಕು –ಸಿದ್ದು ಸವದಿ

08:34 PM Aug 28, 2021 | Team Udayavani |

ಬನಹಟ್ಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜ್ಯ ಸರ್ಕಾರ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಎಚ್‌ಡಿಸಿ ನಿಗಮದ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ  ಕೆಎಚ್‌ಡಿಸಿ ನಿಗಮಕ್ಕೆ ಹೊಸ ಬೆಳಕು ಬರಲಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಶನಿವಾರ ಬಾಗಲಕೋಟೆ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿಕ್ಷಣ ಇಲಾಖೆಯ ಬಟ್ಟೆ ಖರೀದಿಯ ಸಂದರ್ಭದಲ್ಲಿ ನಿಗಮಕ್ಕೆ ಅಂದಾಜು ರೂ.10 ಕೋಟಿಯಷ್ಟು ಹಾನಿಯಾಗುತ್ತಿತ್ತು. ಈಗ ಶೇ. 50 ರಷ್ಟು ಹಾನಿಯನ್ನು ಸರ್ಕಾರ ತುಂಬುವುದಾಗಿ ತಿಳಿಸಿದೆ. ನೇಕಾರರ ವಿಶೇಷ  ಪ್ಯಾಕೇಜ್ ಯೋಜನೆ ಅಡಿಯಲ್ಲಿ ನಿಗಮದ ನೇಕಾರರಿಗೆ ನೀಡಲಾಗುತ್ತಿರುವ ಪ್ರತಿ ತಿಂಗಳು ರೂ. 1 ಕೋಟಿ ಸರಕಾರದಿಂದ ಭರಿಸಲು ಒಪ್ಪಿಗೆ ಸೂಚಿಸಿದ್ದಾರೆ. ವಿದ್ಯಾ ವಿಕಾಸ ಯೋಜನೆ ಅಡಿಯಲ್ಲಿ ಕನಿಷ್ಠ ಶೇ. 25 ರಷ್ಟು ಬಟ್ಟೆ ಖರೀದಿಗೆ ಸರ್ಕಾರ ಆದೇಶ ನೀಡಿದೆ. ಈ ಯೋಜನೆ ಅಡಿಯಲ್ಲಿ ಶೇಖರಣೆಯಾಗುವ ರೂ. 20 ಕೋಟಿ ಹಣವನ್ನು ನಿಗಮದ ಅಭಿವೃದ್ಧಿಗಾಗಿ ಬಳಸಲಾಗುವುದು. ಕೇಂದ್ರ ಬ್ಯಾಂಕಿನಿಂದ 23 ಕೋಟಿ ರೂ.ಗಳಷ್ಟು ಹಾಗೂ 2017-18 ರಲ್ಲಿನ ರಾಜ್ಯ ಸರ್ಕಾರದ 6 ಕೋಟಿ ಸಾಲವನ್ನು ಷೇರು ಬಂಡವಾಳವಾಗಿ ಪರಿವರ್ತಿಸಲಾಗಿದೆ.

ರಾಜ್ಯದಲ್ಲಿ ನಿಗಮಕ್ಕೆ ಸೇರಿದ 32  ಪ್ರದೇಶಗಳಲ್ಲಿ ಆಸ್ತಿಗಳಿವೆ. ಇವುಗಳಲ್ಲಿ ಆರಂಭದಲ್ಲಿ 10 ಪ್ರದೇಶಗಳಲ್ಲಿ ಪೆಟ್ರೊಲ್ ಬಂಕ್‌ ಗಳನ್ನು ಸ್ಥಾಪನೆ ಮಾಡಲು ನಿಗಮದಿಂದ ನಿರ್ಧರಿಸಿದ್ದೇವೆ. ನೇಕಾರರ ಮಕ್ಕಳನ್ನೇ ಬಂಕ್‌ಗಳಲ್ಲಿನ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗುವದೆಂದು ಸವದಿ ತಿಳಿಸಿದರು.

2005-೦6 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾದ ರೂ. 40 ಕೋಟಿ ಮಾರ್ಜಿನ್ ಹಣವನ್ನು ಠೇವಣಿಯನ್ನಾಗಿ ಮಾಡಲಾಗಿತ್ತು. ಇದು ಈಗ ರೂ.101.55 ಕೋಟಿಯಷ್ಟಾಗಿದೆ. ಈ ಠೇವಣಿಯ ಮೇಲೆ ರೂ. 85 ಲಕ್ಷ ಸಾಲವನ್ನು ಮಾಡಲಾಗಿತ್ತು. ಈಗ ಸಾಲವನ್ನು ಮರು ಪಾವತಿಸಿ ಉಳಿದ ಹಣವನ್ನು ನಿಮಗದ ಅಭಿವೃದ್ಧಿಗಾಗಿ ಬಳಸಲಾಗುವುದು. ರಾಜ್ಯ ಸರ್ಕಾರದಿಂದ ರೂ.23 ಕೋಟಿ 54 ಲಕ್ಷ ಸಾಲವನ್ನು ಪಡೆದುಕೊಳ್ಳಲಾಗಿತ್ತು. ಈಗ ಈ ಹಣವನ್ನು ಸರ್ಕಾರ ಶೇರು ಬಂಡವಾಳವನ್ನಾಗಿ ಪರಿವರ್ತಿಸಲು ಸರ್ಕಾರ ಸಮ್ಮತಿಯನ್ನು ಸೂಚಿಸಿದೆ ಎಂದು ಸವದಿ ತಿಳಿಸಿದರು.

Advertisement

ಇದನ್ನೂ ಓದಿ:ಸರ್ಕಾರದ ಸುಳ್ಳುಗಳನ್ನು ತಡೆಯಲು ನಾಗರಿಕರು ಕಟಿಬದ್ಧರಾಗಿ : ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌

ನೇಕಾರರಿಗೆ ಮುಂಗಡ, ಪ್ರೋತ್ಸಾಹ ಧನವನ್ನು ಹಂತ ಹಂತವಾಗಿ ನೀಡಲಿದ್ದು, ಕನಿಷ್ಠ 2 ವರ್ಷ ನಿಗಮದಲ್ಲಿ ಕೆಲಸ ಮಾಡಿದ ನೇಕಾರರಿಗೆ ಮನೆ ಹಂಚಿಕೆ ಮಾಡುವಲ್ಲಿ ಚಿಂತನೆಯಾಗಿದ್ದು ಒಟ್ಟಾರೆ ಮುಳುಗುವ ಹಂತದಲ್ಲಿದ್ದ ನಿಗಮವನ್ನು ಹೊಸ ಆಶಾಕಿರಣವಾಗಿ ನೇಕಾರರಿಂದ ಹೋರಾಟಗಳಿಗೆ ಅವಕಾಶ ನೀಡದೆ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಿದ್ದು ನೆಮ್ಮದಿ ತಂದಿದೆ ಎಂದು ಸವದಿ ಸಂತಸ ವ್ಯಕ್ತಪಡಿಸಿದರು.

ನಿಗಮದ ನೇಕಾರರಿಗೆ ನೀಡಬೇಕಾಗಿದ್ದು ಹಲವಾರು ಸೌಲಭ್ಯಗಳು ನಿಂತು ಹೋಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಹಂತ ಹಂತವಾಗಿ ಮತ್ತೆ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಕೆಎಚ್‌ಡಿಸಿ ನಿಗಮವನ್ನು ಲಾಭದಾಯಕ ಸಂಸ್ಥೆಯನ್ನು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ರಾಜು ಅಂಬಲಿ, ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ದುಂಡಪ್ಪ ಮಾಚಕನೂರ, ಮಲ್ಲಿಕಾರ್ಜುನ ಬಾಣಕಾರ, ಸುರೇಶ ಅಕ್ಕಿವಾಟ, ಆನಂದ ಕಂಪು, ಗೋವಿಂದ ಡಾಗಾ, ಮಹಾದೇವ ಕೋಟ್ಯಾಳ, ಸಂಜಯ ತೆಗ್ಗಿ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಶ್ರೀಶೈಲ ಆಲಗೂರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next