Advertisement

ಜಿಪಂ ಅಧಿಕಾರಿ-ಸಿಬ್ಬಂದಿ ಮೇಲೆ ಕ್ಯಾಮೆರಾ ಕಣ್ಣು

03:42 PM Oct 17, 2019 | Team Udayavani |

ಬಾಗಲಕೋಟೆ: ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು ವಿವಿಧ ವಿಭಾಗಗಳ ಕಾರ್ಯವೈಖರಿ, ಆಡಳಿತ ಹಂತದ ಎಲ್ಲ ರೀತಿಯ ಕೆಲಸ-ಕಾರ್ಯ-ಕಡತಗಳನ್ನು ನೇರವಾಗಿ ವೀಕ್ಷಿಸಲು ಇಲ್ಲಿನ ನವನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಸಿಇಒ ಕಚೇರಿ ಸಹಿತ ಜಿಪಂನ ಆಡಳಿತ ಕಚೇರಿಯಲ್ಲಿ 20 ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಪಂ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ. ಸಿಇಒ ಕಚೇರಿ ವ್ಯಾಪ್ತಿಯಲ್ಲಿಯ ಎಲ್ಲ ವಿಭಾಗಗಳ ದಿನನಿತ್ಯದ ಕಾರ್ಯ-ಕಲಾಪಗಳನ್ನು ನೇರವಾಗಿ ತಮ್ಮ ಕಚೇರಿಯಿಂದಲೇ ವೀಕ್ಷಿಸಲು ಹಾಗೂ ಸಾರ್ವಜನಿಕರ ಸಮಸ್ಯೆ ಇತ್ಯರ್ಥಪಡಿಸಲು ಇದರಿಂದ ಅನುಕೂಲವಾಗಲಿದೆ. ಕಚೇರಿಗೆ ಅಹವಾಲು, ಸಮಸ್ಯೆ ಹೊತ್ತು ತರುವ ಸಾರ್ವಜನಿಕರ ಪ್ರಕರಣಗಳು, ಕಚೇರಿ ಕಡತಗಳ ವಿಳಂಬ, ಕೇಸ್‌ ವರ್ಕರ್‌ ಕಿರಿಕಿರಿ ತಪ್ಪಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸಿಇಒ ಕಚೇರಿಯಲ್ಲಿಯ ಕೆಲಸ ಕಾರ್ಯದ ನೇರ ಪ್ರಸಾರವನ್ನು ಕಾರಿಡಾರ್‌ನ ಸ್ಕ್ರೀನ್‌ನಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ನೇರವಾಗಿ ವೀಕ್ಷಿಸಬಹುದಾಗಿದೆ. ಸಿಇಒ ಕಚೇರಿ ಆಪ್ತ ಶಾಖೆ, ಉಪ ಕಾರ್ಯದರ್ಶಿ ಕಚೇರಿ, ಯೋಜನಾ ನಿರ್ದೇಶಕರ ಕಚೇರಿ, ಆಡಳಿತ ವಿಭಾಗ, ಯೋಜನಾ ವಿಭಾಗ, ಲೆಕ್ಕಪತ್ರ ಶಾಖೆ ಹಾಗೂ ಕಾರಿಡಾರ್‌ ಸೇರಿದಂತೆ ವಿವಿಧ ಪ್ರಮುಖ ಕೇಸ್‌ ವರ್ಕರ್‌ಗಳ ವಿಭಾಗಗಳು ಸೇರಿ ಒಟ್ಟು 20 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇವುಗಳನ್ನು ತಮ್ಮ ಕಚೇರಿಯಿಂದ ವೀಕ್ಷಣೆ ಹಾಗೂ ನಿರ್ವಹಣೆ ಮಾಡಲಾಗುವುದು ಎಂದಿದ್ದಾರೆ.

ಪೇಪರ್‌ಲೆಸ್‌ ಇ-ಆಫೀಸ್‌ : ಪೇಪರ್‌ ಲೇಸ್‌ ಇ ಆಫೀಸ್‌ಗೆ ಕಳೆದೆರಡು ತಿಂಗಳಿನಿಂದಲೇ ಚಾಲನೆ ನೀಡಿದೆ. ಈ ತಿಂಗಳೊಳಗೆ ಸಂಪೂರ್ಣವಾಗಿ “ಇ’ ಕಚೇರಿಯಾಗಿ ಪರಿವರ್ತಿಸಲಾಗುವುದು. ಸದ್ಯ ಪ್ರತಿದಿನ 3-4 ಕಡತಗಳನ್ನು “ಇ’ ಕಚೇರಿಯಲ್ಲೇ ವ್ಯವಹರಿಸಲಾಗುತ್ತಿದೆ. ನುರಿತ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ.

ತುರ್ತು ಸಂದರ್ಭಗಳಲ್ಲಿ ತಮ್ಮ ಪ್ರವಾಸ ವೇಳೆ ಬೇರೆ ಕಡೆಯಿಂದಲೂ, ಗೃಹ ಕಚೇರಿಯಿಂದಲೂ ಕಡತ ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next