Advertisement

ಸಂವಿಧಾನ ಶಿಲ್ಪಿಯ ಸ್ಮರಣೆ-ನಮನ, ಗೌರವ

07:53 PM Apr 15, 2021 | Team Udayavani |

ಬಾಗಲಕೋಟೆ: ಶಿಕ್ಷಣದಿಂದಲೇ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವೆಂಬುದನ್ನು ಮನುಕುಲಕ್ಕೆ ಸಾರುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಲು ಹೊರಟವರು ಡಾ|ಬಿ.ಆರ್‌.ಅಂಬೇಡ್ಕರ್‌ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಹೇಳಿದರು. ಜಿ.ಪಂ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಶೋಷಿತ ವರ್ಗಕ್ಕೆ ಅಂಬೇಡ್ಕರ್‌ವರ ಕೊಡುಗೆ ಅನನ್ಯವಾಗಿದೆ. ಗಾಂಧಿ ಮತ್ತು ಅಂಬೇಡ್ಕರ್‌ ಮಾರ್ಗಗಳು ಬೇರೆ ಬೇರೆಯಾದರೂ ಅವರಿಬ್ಬರ ಗುರಿ ಮಾತ್ರ ಒಂದೇ ಆಗಿತ್ತು. ಬುದ್ಧ, ಬಸವ ಧರ್ಮ ಸಂಸ್ಥಾಪನೆ ಮಾಡಿದರೆ, ಅಂಬೇಡ್ಕರ್‌ ಸಂವಿಧಾನ ರಚಿಸುವ ಮೂಲಕ ಸಮಾಜಕ್ಕೆ ಧರ್ಮ ಗ್ರಂಥವನ್ನು ನೀಡಿದ್ದಾರೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ನಮ್ಮ ದೇಶಕ್ಕೆ ಸಂವಿಧಾನ ರಚಿಸುವ ಮೂಲಕ ಮಹತ್ವದ ಕೊಡುಗೆ ನೀಡಿದ್ದು, ಅವರ ಅಶೋತ್ತರಗಳನ್ನು ಇಡೇರಿಸುವತ್ತ ನಾವೆಲ್ಲರೂ ಅವರ ಹಾದಿಯಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿ ನೋವು, ಅಪಮಾನ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಬಂದಾಗ ಮಾತ್ರ ಮುಂದೆ ಬರಲು ಸಾಧ್ಯವಾಗುತ್ತದೆ. ನಮ್ಮ ಭಾವನೆಯಿಂದ ಹೊರಬರಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್‌ ನಡೆದು ಬಂದ ಹಾದಿ ಇದಾಗಿತ್ತು ಎಂದು ತಿಳಿಸಿದರು.

ಕಲಬುರ್ಗಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ| ಎಚ್‌.ಟಿ. ಪೋತೆ ಮಾತನಾಡಿ, ಸಂವಿಧಾನದಲ್ಲಿ ಅನೇಕ ಅಪರೂಪದ ವಿಷಯಗಳು ಒಳಗೊಂಡಿದ್ದು, ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಶಿಕ್ಷಣವು ರಾಜ್ಯದ ಹಿಡಿತದಲ್ಲಿ ಇರಬೇಕೆಂಬುದು ಮತ್ತು ಉಚಿತ ಶಿಕ್ಷಣ, ಶಿಕ್ಷಣದ ಹಕ್ಕು ಹೀಗೆ ಉಪಯುಕ್ತವಾದ ವಿಷಯ ಒಳಗೊಂಡಿದೆ. ಅಂಬೇಡ್ಕರ್‌ ಒಬ್ಬ ಮಹಿಳಾ ಸಬಲೀಕರಣದ ರೂವಾರಿಗಳಾಗಿದ್ದರು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದರು ಎಂದರು. ಪ್ರಕೃತಿಗೆ ಜಾತಿ ಬೇಧವಿರುವುದಿಲ್ಲ. ಗಾಂಧೀಜಿ ಅವರಂತೆ ಅಂಬೇಡ್ಕರ್‌ ಅವರು ಸಹ ಅಹಿಂಸಾ ವಾದಿಗಳಾಗಿದ್ದರು. ಸಂವಿಧಾನ ಸಮಗ್ರ ವಿಷಯಗಳ ನಿರ್ದೇಶನ ನೀಡುವ ಮಾರ್ಗಸೂಚಿಯಾಗಿದ್ದು, ಇದರ ರಚನೆಯಲ್ಲಿ ಅಂಬೇಡ್ಕರ್‌ ಅವರಿಗಿದ್ದ ಪ್ರಭುತ್ವತೆ ಎತ್ತಿ ತೋರಿಸುತ್ತದೆ. ಅಂಬೇಡ್ಕರ್‌ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು, ದೇಶ-ವಿದೇಶಗಳಲ್ಲಿಯೂ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಬೇಕಾಗುವಂತ ಸಂವಿಧಾನ ರಚಿಸಿದ್ದಾರೆ.

ಅವರು ರಚಿಸಿದ ಸಂವಿಧಾನ ಹಿಂದಿನ, ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ. ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next