Advertisement

ಸಡಗರ-ಸಂಭ್ರಮದ ಕೆರೂರ ಶ್ರೀ ಬನಶಂಕರಿದೇವಿ ರಥೋತ್ಸವ

03:41 PM Feb 03, 2021 | Team Udayavani |

ಕೆರೂರ: ಪಟ್ಟಣದ ಆರಾಧ್ಯ ದೇವತೆ ಶ್ರೀ ಬನಶಂಕರಿದೇವಿ ರಥೋತ್ಸವ ಸಹಸ್ರಾರು ಭಕ್ತ ಸಮೂಹದ ಹರ್ಷೋದ್ಘಾರಗಳ ಮಧ್ಯೆ ಮಂಗಳವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

Advertisement

ಸ್ಥಳೀಯ ಬನಶಂಕರಿ ದೇವಾಲಯ ಇಕ್ಕೆಲಗಳಲ್ಲಿ ಜಾತ್ರೋತ್ಸವ ಸಂಭ್ರಮಕ್ಕೆಂದೇ ಮಂಗಳವಾರ ಸಂಜೆ ಸಹಸ್ರಾರು ಭಕ್ತಾದಿಗಳು ಕಿಕ್ಕಿರಿದು ಜಮಾಯಿಸಿದ್ದರು. ರಥೋತ್ಸವ ಮುಂದಕ್ಕೆ ಚಲಿಸುತ್ತಿದ್ದಂತೆ ಏಕಕಾಲಕ್ಕೆ ಹೊರ ಹೊಮ್ಮಿದ ಹರ್ಷೋದ್ಘಾರ “ಬನಶಂಕರಿ ತಾಯಿ ನಿನ್ನ ಪಾದುಕೆ ಶಂಭುಕೋ.. ಶಂಭುಕೋ’ ಎಂಬ ಭಕ್ತಿಯ ಉದ್ಘೋಷಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಾಂಗ ಸಮಾಜದ ಶಕ್ತಿ ಸ್ವರೂಪಿಣಿ ದೇವತೆ ಸ್ಥಳೀಯ ಹೊಸಪೇಟೆಯ ಬನಶಂಕರಿದೇವಿ ದೇವಸ್ಥಾನದ ಶತಮಾನೋತ್ಸವದ ಸಂಭ್ರಮದಲ್ಲಿ ಆಚರಿಸಲ್ಪಟ್ಟ 83ನೇ ವರ್ಷದ ಮಹಾ ರಥೋತ್ಸವದಲ್ಲಿ ಸ್ಥಳೀಯರು ಸೇರಿ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾದಿಗಳ ಭಾಗವಹಿಸಿ ರಥೋತ್ಸವದ ಸಡಗರ, ಸಂಭ್ರಮ ಕಣ್ತುಂಬಿಕೊಂಡರು. ಶೃದ್ಧೆ,ಭಕ್ತಿಯೊಂದಿಗೆ ಭಕ್ತ ಸಮೂಹ ಸಾಗುತ್ತಿದ್ದ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ತೂರಿ ದೇವಿಯಲ್ಲಿ ತಮ್ಮ ಇಷ್ಟಾರ್ಥ ನಿವೇದಿಸಿಕೊಂಡರು. ನಂತರ ಸರಿಯಾದ ಸಮಯಕ್ಕೆ ರಥವು ತನ್ನ ಸ್ವಸ್ಥಾನಕ್ಕೆ ಮರಳುತ್ತಿದ್ದಂತೆ ಸಮಸ್ತ ಭಕ್ತರು ಚಪ್ಪಾಳೆ ತಟ್ಟಿ ಸಂತಸಪಟ್ಟರು.

ರಥಕ್ಕೆ ಮಲ್ಲಿಗೆ, ಸೇವಂತಿಗೆ, ಚೆಂಡು ಹೂಗಳ ಬೃಹತ್‌ ಮಾಲೆಗಳು, ಹಲವಾರು ಬಣ್ಣಗಳ ಬಾವುಟಗಳಿಂದ ಅಲಂಕೃತಗೊಳಿಸಲಾಗಿತ್ತು. ರಥದ ಸುತ್ತ ಪಲ್ಲಕ್ಕಿ ಸೇವೆಯ ನಂತರ ದೇವಿ ಅರ್ಚಕ ದೇವಾಂಗಮಠದ ರುದ್ರಮುನಿ ಶ್ರೀ, ಬೆಳ್ಳಿ ವಿಗ್ರಹ ಹೊತ್ತು ರಥ ಏರುತ್ತಿದ್ದಂತೆ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತು ಎಲ್ಲೆಡೆ ಸಿಳ್ಳೆ, ಕೇಕೆಯ ಸಡಗರ ಮನೆ ಮಾಡಿತು. ರಥೋತ್ಸವದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಧುರೀಣ ವಿಠಲ ಗೌಡ ಗೌಡರ, ಪಿತಾಂಬ್ರೆಪ್ಪ ಹವೇಲಿ, ಸಂಕಪ್ಪ ಕರಿಮರಿ, ಶಿವಪ್ಪ ಹೆಬ್ಬಳ್ಳಿ, ಸೇರಿದಂತೆ ದೇವಾಂಗ
ಸಮಾಜದ ಅನೇಕ ಪ್ರಮುಖರು ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಭಕ್ತರಿಗೆ ಶಿರಾ ವಿತರಣೆ: ರಥೋತ್ಸವದ ನಂತರ ದೇವಿ ಪಾದಗಟ್ಟೆ ಪತ್ತಾರಕಟ್ಟೆ ಬಡಾ ವಣೆಯಲ್ಲಿ ಭಕ್ತ ಪರಿವಾರದ ಸದಸ್ಯರು ಜಾತ್ರೆಗೆ ಬಂದ
ಭಕ್ತಾದಿಗಳಿಗೆ ಶಿರಾದ ಸಿಹಿ ಹಂಚಿ ಜಾತ್ರೆಯ ಸಂತಸ ಸಮರ್ಪಿಸಿದರು. ಜಾತ್ರೆ ನಿಮಿತ್ತ ಪಾದಗಟ್ಟೆಯನ್ನು ವಿವಿಧ ಬಣ್ಣ, ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

Advertisement

ಓದಿ : ಪಂಚಾಯ್ತಿ ಗದ್ದುಗೆಗಾಗಿ ಸದಸ್ಯರಿಗೆ ಪ್ರವಾಸ ಭಾಗ್ಯ

Advertisement

Udayavani is now on Telegram. Click here to join our channel and stay updated with the latest news.

Next