Advertisement

ಬೇಡಿಕೆ ಈಡೇರಿಸದಿದ್ದರೆ ರಾಜೀನಾಮೆ ಕೊಡಿ

08:06 PM Apr 15, 2021 | Team Udayavani |

ಬಾಗಲಕೋಟೆ: ರಾಜ್ಯದ ಸಾರಿಗೆ ಸಂಸ್ಥೆಯ ನೌಕರರು ಕಳೆದ ಏಳು ದಿನಗಳಿಂದ ಮುಷ್ಕರ ನಡೆಸಿದ್ದಾರೆ. ಯುಗಾದಿ ಸಂಭ್ರಮವೂ ಇಲ್ಲದೇ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕನಿಷ್ಟ ಸೌಜನ್ಯಕ್ಕಾದರೂ ಅವರನ್ನು ಕರೆದು ಮಾತನಾಡಿಸುತ್ತಿಲ್ಲ. ಮುಖ್ಯಮಂತ್ರಿಗಳು ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು. ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷೆ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. ಗ್ಯಾಸ್‌ ಬೆಲೆ 400ರಿಂದ 900ಕ್ಕೆ ಏರಿಕೆಯಾಗಿದೆ. ಡಿಸೇಲ್‌, ಪೆಟ್ರೋಲ್‌ ಬೆಲೆ ರೂ. 100 ತಲುಪುತ್ತಿದೆ. ಆದರೆ, ಸಾರಿಗೆ ನೌಕರರ ವೇತನ ಹೆಚ್ಚಿಸಿಲ್ಲ. ನೌಕರರ ವೇತನ ಪರಿಷ್ಕರ ಒಪ್ಪಂದ 2020ರಲ್ಲೇ ಮುಕ್ತಾಯವಾಗಿದೆ. ಈವರೆಗೆ ವೇತನ ಪರಿಷ್ಕರ ಮಾಡುತ್ತಿಲ್ಲ. ಸದ್ಯ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಲು ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ನ್ಯಾ| ಸದಾಶಿವ ಆಯೋಗದ ವರದಿ ಜಾರಿಗಾಗಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರಿಗೆ ಸಂಸ್ಥೆಯ ನೌಕರರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕನಿಷ್ಠ ಸೌಜನ್ಯಕ್ಕೂ ಅವರನ್ನು ಮಾತನಾಡಿಸುತ್ತಿಲ್ಲ. ಯುಗಾದಿ ಸಂಭ್ರಮದ ದಿನದಂದು ಹಲವಾರು ಕುಟುಂಬಗಳು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿವೆ. ಎಲ್‌ ಐಸಿ, ಬ್ಯಾಂಕ್‌ ಖಾಸಗೀಕರಣವನ್ನು ಕೇಂದ್ರ ಸರ್ಕಾರ ಮಾಡಿದೆ. ಇದೀಗ ಹಲವಾರು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಮುಂದೆ ದೇಶವನ್ನೇ ಮಾರಾಟ ಮಾಡಿದರೂ ಆಶ್ಚರ್ಯವಿಲ್ಲ ಎಂದು ಟೀಕಿಸಿದರು. ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೆ ಮುಖ್ಯಮಂತ್ರಿಗಳು ಹಾಗೂ ಅವರ ಪುತ್ರ ಮಸ್ಕಿ ಉಪ ಚುನಾವಣೆಯಲ್ಲಿ ನಿರತರಾಗಿದ್ದಾರೆ.

ಇಂತಹ ಸರ್ಕಾರ ಇದೆಂದೂ ಇರಲಿಲ್ಲ. ರಾಜಕೀಯ ಬಿಟ್ಟು, ಜನರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇದೊಂದು ಕಣ್ಣು-ಕಿವಿ-ಮೂಗು ಇಲ್ಲದ ಸರ್ಕಾರ. ಇದೊಂದು ಶ್ರೀಮಂತರ ಸರ್ಕಾರವಾಗಿದ್ದು, ಬಡವರ ವಿರುದ್ಧವಾಗಿದೆ. ದೆಹಲಿಯಲ್ಲಿ ರೈತರು ಎರಡು ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ದೇಶದ ಬಡ ಜನರು 500 ಖರ್ಚು ಮಾಡಿ, ಬ್ಯಾಂಕ್‌ ಗಳಲ್ಲಿ ಜನಧನ ಖಾತೆ ಆರಂಭಿಸಿದರು. ಆ ಖಾತೆಗೆ ಹಣ ಹಾಕುತ್ತಾರೆ ಎಂದು ಜನ ನಂಬಿದ್ದರು. ಒಂದು ರೂಪಾಯಿಯೂ ಹಾಕಿಲ್ಲ ಎಂದರು. ಸಂಸದರಿಗೆ ಕನಿಷ್ಠ ಜವಾಬ್ದಾರಿ ಇಲ್ಲ: ಕೊರೊನಾ 2ನೇ ಅಲೆ ಹೆಚ್ಚುತ್ತಿದೆ. ವ್ಯಾಕ್ಸಿನ್‌ ಪೂರೈಕೆಯಲ್ಲೂ ಕೇಂದ್ರ ಸರ್ಕಾರ ನಿರ್ಲಕ್ಷé ವಹಿಸುತ್ತಿದೆ. ಕಳೆದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಬಾಗಲಕೋಟೆಯ ಪಿ.ಸಿ. ಗದ್ದಿಗೌಡರ ಅವರಿಗೆ ಕನಿಷ್ಠ ಜವಾಬ್ದಾರಿಯೂ ಇಲ್ಲ. ನೇಕಾರರು, ಕಾರ್ಮಿಕರು, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವ ಸಮಸ್ಯೆಯನ್ನೂ ಕೇಳುತ್ತಿಲ್ಲ. ಸಂಸದರು 4ನೇ ಬಾರಿ ಆಯ್ಕೆಯಾದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದೇವು. ಆದರೆ, ಯಾವ ಕನಸು ಈಡೇರಿಲ್ಲ ಎಂದು ಟೀಕಿಸಿದರು. ಬಾಗಲಕೋಟೆ ಜಿಲ್ಲೆಗೆ ಜಾರಿಗೊಂಡ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾನ ಕೊಡುವಂತೆ ಕರವೇ ಹೋರಾಟ ನಡೆಸಿದೆ. ಇದಕ್ಕೆ ಆಡಳಿತ ಪಕ್ಷದ ಯಾರೂ ಸ್ಪಂದಿಸಿಲ್ಲ ಎಂದರು.

ಜನರು ಬಯಿಸಿದರೆ ಸ್ಪರ್ಧೆ: ನಾನು ಜಿ.ಪಂ. ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಇದೀಗ ಜಿ.ಪಂ. ಐದು ವರ್ಷಗಳ ಅಧಿಕಾರವಧಿ ಪೂರ್ಣಗೊಂಡಿದ್ದು, ಮತ್ತೆ ಜಿ.ಪಂ. ಚುನಾವಣೆಗೆ ಸ್ಪರ್ಧಿಸಲು ಚಿಂತನೆ ಮಾಡಿಲ್ಲ. ಜನರು ಒತ್ತಾಯ ಮಾಡಿದ್ದಕ್ಕೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಆದರೆ, ಜಿ.ಪಂ. ಚುನಾವಣೆಯಲ್ಲಿ ಜನ ಬಯಸಿದರೆ ಮತ್ತೆ ಸ್ಪರ್ಧೆ ಮಾಡುವ ಕುರಿತು ಚಿಂತನೆ ಮಾಡುತ್ತೇನೆ ಎಂದು ಹೇಳಿದರು.

Advertisement

ಮಹಿಳೆಯರಿಗೆ ಭದ್ರತೆ ಇಲ್ಲ: ರಾಜ್ಯ, ದೇಶದಲ್ಲಿ ಇಂದು ಮಹಿಳೆಯರಿಗೆ ಭದ್ರತೆ ಇಲ್ಲ. ಹಲವೆಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅತ್ಯಾಚಾರ ನಡೆದರೂ ಸರ್ಕಾರ ಕಠೀಣ ಕ್ರಮ ಕೈಗೊಂಡಿಲ್ಲ. ಸರ್ಕಾರದ ಮಾಜಿ ಸಚಿವರ ವಿರುದ್ಧ ಎಸ್‌ಐಟಿ ತನಿಖೆ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ. ಸರಿಯಾದ ತನಿಖೆ ನಡೆಯುತ್ತಿದ್ದರೆ ಮಾಜಿ ಸಚಿವರನ್ನು ಬಂಧಿಸಬೇಕಿತ್ತು ಎಂದರು. ಜಿಲ್ಲೆಯ ನಿರಾಣಿ ಕುಟುಂಬ ಮತ್ತು ಕಾಶಪ್ಪನವರ ಕುಟುಂಬಗಳು ರಾಜಕೀಯ ಹೊರತುಪಡಿಸಿ, ಅಣ್ಣ-ತಮ್ಮಂದಿರು ಇದ್ದಂತೆ. ಅಣ್ಣ-ತಮ್ಮನ ನಡುವೆ ಕೆಲವು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಬರುತ್ತವೆ. ಅವು ಮುಂದೆ ಬಗೆಹರಿಯಲಿವೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಎಸ್‌.ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ, ಬಾಗಲಕೋಟೆ ಬ್ಲಾಕ್‌ ಅಧ್ಯಕ್ಷ ಹಾಜಿಸಾಬ ದಂಡಿನ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನ್ಯಾಮಗೌಡ, ನಗರಸಭೆ ಮಾಜಿ ಸದಸ್ಯ ಗೋವಿಂದರಾಜ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next