ದುಬೈ: ಐಸಿಸಿ ಟಿ20 ವಿಶ್ವಕಪ್ ನ ಮೊದಲೆರಡು ಪಂದ್ಯದಲ್ಲಿ ಸೋಲನುಭವಿಸಿ ಹಿನ್ನಡೆಯಲ್ಲಿದ್ದ ಟೀಂ ಇಂಡಿಯಾ ಸದ್ಯ ಗೆಲುವಿನ ದಾರಿ ಹಿಡಿದಿದೆ. ನಂತರದ ಎರಡೂ ಪಂದ್ಯಗಳನ್ನು ಗೆದ್ದು, ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸ್ಕಾಟ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದ ವಿರಾಟ್ ಪಡೆ ನೆಟ್ ರನ್ ರೇಟ್ ಉತ್ತಮ ಪಡಿಸಿಕೊಂಡಿದೆ. ಸದ್ಯ ಭಾರತದ ರನ್ ರೇಟ್ ಅಫ್ಘಾನಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ಗಿಂತ ಉತ್ತಮವಾಗಿದೆ. ರವಿವಾರ ನಡೆಯಲಿರುವ ಕಿವೀಸ್- ಅಫ್ಘಾನ್ ನಡುವಿನ ಪಂದ್ಯದಲ್ಲಿ ಭಾರತದ ಸೆಮಿ ಭವಿಷ್ಯ ನಿರ್ಧಾರವಾಗಲಿದೆ.
ಅಫ್ಘಾನ್ ವಿರುದ್ಧ ಕಿವೀಸ್ ಗೆದ್ದರೆ, ಅದು ನಿರಾತಂಕವಾಗಿ ಸೆಮಿ ಫೈನಲ್ ಪ್ರವೇಶ ಪಡೆಯಲಿದೆ. ಆದರೆ ಅಫ್ಘಾನ್ ಗೆದ್ದರೆ, ನಮೀಬಿಯಾ ವಿರುದ್ಧ ಭಾರತ ಗೆದ್ದರೆ ಭಾರತ ತಂಡ ಸೆಮಿ ಫೈನಲ್ ಗೆ ಪ್ರವೇಶ ಪಡೆಯಲಿದೆ.
ಸ್ಕಾಟ್ಲೆಂಡ್ ವಿರುದ್ಧದ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಜಡೇಜಾ ಇದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಎದುರಿಸಿದರು. “ಅಫ್ಘಾನ್ ಗೆದ್ದರೆ ಅವಕಾಶಗಳು ಹೆಚ್ಚುತ್ತದೆ, ಆದರೆ ಒಂದು ವೇಳೆ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿದರೆ ಏನು ಮಾಡುತ್ತೀರಿ” ಎಂದು ಪತ್ರಕರ್ತರೊಬ್ಬರು ಕೇಳಿದರು.
ಇದನ್ನೂ ಓದಿ:ಗೆಳತಿಯ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ಕೆ.ಎಲ್.ರಾಹುಲ್
ಇದಕ್ಕೆ ಉತ್ತರಿಸಿದ ರವೀಂದ್ರ ಜಡೇಜಾ, “ ಮತ್ತೇನು ಮಾಡುವುದು.. ಬ್ಯಾಗ್ ಪ್ಯಾಕ್ ಮಾಡುವುದು ಮನೆ ಕಡೆಗೆ ಹೋಗುವುದು” ಎಂದು ಉತ್ತರಿಸಿದರು.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಿಗು ದಾಳಿ ನಡೆಸಿದ ಜಡೇಜಾ, 15 ರನ್ ಗೆ ಮೂರು ವಿಕೆಟ್ ಕಿತ್ತರು. ಅರ್ಹವಾಗಿಯೇ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.