ಪಣಜಿ: ಗೋವಾದ ಕನ್ನಡ ಶಾಲೆಗಳಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಜುವಾರಿನಗರ ಕನ್ನಡ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಪುಸ್ತಕ ಮತ್ತು ಶಾಲಾ ಬ್ಯಾಗ್‍ನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವುದು ಹೆಮ್ಮೆಯ ಸಂಗತಿ. ಗೋವಾದಲ್ಲಿ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು. ಗೋವಾದಲ್ಲಿ ಕನ್ನಡ ಸಂಘಟನೆಗಳ ಮೂಲಕ ಕನ್ನಡ ಶಾಲೆಗಳನ್ನು ಉಳಿಸಲು ನಡೆಯುತ್ತಿರುವ ಅಭಿಯಾನಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.
ಗೋವಾ ವಾಸ್ಕೊ ಜುವಾರಿನಗರದ ಝರಿಯಲ್ಲಿ ಜುವಾರಿನಗರ ಕನ್ನಡ ಸಂಘದ ವತಿಯಿಂದ ಕನ್ನಡ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಸ್ಕೂಲ್ ಬ್ಯಾಗ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಗೋವಾದಲ್ಲಿ ಕನ್ನಡ ಶಾಲೆಗಳು ಉಳಿಯಬೇಕು, ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಬೇಕು. ಕಳೆದ ಕೆಲ ತಿಂಗಳ ಹಿಂದೆ ಈ ನಿಟ್ಟಿನಲ್ಲಿಯೂ ಕೂಡ ಜುವಾರಿನಗರ ಕನ್ನಡ ಸಂಘ ಅಭಿಯಾನ ಹಮ್ಮಿಕೊಂಡಿತ್ತು. ಕನ್ನಡ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆತರಲು ಕನ್ನಡ ಸಂಘವು ಸತತ ಪ್ರಯತ್ನ ನಡೆಸುತ್ತಿದೆ. ಮಕ್ಕಳಿಗೂ ಕೂಡ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುವ ಮೂಲಕ ಕನ್ನಡ ಶಾಲೆಗೆ ಬರಲು ಆಸಕ್ತಿ ಹೆಚ್ಚುವಂತೆ ಮಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ನುಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಮಾತನಾಡಿ-ಕನ್ನಡ ಸಂಘದ ವತಿಯಿಂದ ಪ್ರತಿ ವರ್ಷವೂ ಕನ್ನಡ ಶಾಲೆಗಳಿಗೆ ಶೈಕ್ಷಣಿಕ ಕಿಟ್ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಹಲವು ಜನರು ಕನ್ನಡ ಸಂಘಕ್ಕೆ ಧನಸಹಾಯ ಮಾಡಿದ್ದಾರೆ ಅವರೆಲ್ಲರಿಗೂ ಈ ಮೂಲಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶ್ರೀ ಯಲ್ಲಾಲಿಂಗೇಶ್ವರ ಮಠದ ಅರ್ಚಕ ಕಂಬಳಯ್ಯ ಹಿರೇಮಠ, ಉದ್ಯಮಿ ಶಶಿಕಾಂತ ಗೌಡ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಕುಂದಾ ನಾಯ್ಕ, ಬಾಪುಗೌಡ ಮ್ಯಾಗೇರಿ, ಜುವಾರಿನಗರ ಕನ್ನಡ ಸಂಘದ ಚಂದ್ರಶೇಖರ ಬಿಂಗಿ, ವೀರೇಶ ಹಾದಿಮನಿ, ಯಲ್ಲಾಲಿಂಗೇಶ ತಾಳಿಕೋಟಿ, ಶ್ರೀಶೈಲ ಅಸಂಗಿಹಾಳ, ಸಂತೋಷ ಪಾದನಕಟ್ಟಿ, ಮಂಜು ಮಾಡಿ ಮತ್ತಿತರರು ಉಪಸ್ಥಿತರಿದ್ದರು.