Advertisement

ಜಾತಿ ಹೆಸರೇಳದೆ ಪ್ರಚಾರ ಮಾಡ್ತಿದ್ವಿ..

10:06 PM Feb 15, 2023 | Team Udayavani |

ಹಂಪನಗೌಡ ಬಾದರ್ಲಿ, ಮಾಜಿ ಶಾಸಕ-ಸಿಂಧನೂರು
ಈಗಿನ ಚುನಾವಣೆಗಳಲ್ಲಿ ಹಣ ಎಷ್ಟು ಮುಖ್ಯವೋ ಜಾತಿ ಕೂಡ ಅಷ್ಟೇ ಪ್ರಾಮುಖ್ಯ ಪಡೆದುಕೊಂಡಿದೆ. ಆದರೆ 1989ರಲ್ಲಿ ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದಾಗ ಯಾವುದೇ ಜಾತಿಯ ಹೆಸರು ಕೂಡ ಉಲ್ಲೇಖೀಸದೆ ಪ್ರಚಾರ ಮಾಡುತ್ತಿದ್ದೆವು. ಆಗ ಚುನಾವಣೆ ನಂಬಿಕೆ, ವಿಶ್ವಾಸದ ಮೇಲೆಯೇ ನಡೆಯುತ್ತಿತ್ತು. ಊರಿನ ಪ್ರಮುಖರನ್ನು ಸೇರಿಸಿ ಗ್ರಾಮದಲ್ಲಿ ಮತಯಾಚಿಸಿದರೆ ಮತ್ತೆ ಆ ಕಡೆ ತಲೆ ಹಾಕುತ್ತಿರಲಿಲ್ಲ. ಆದರೆ ಈಗ ಊರಿನ ಪ್ರತೀ ಓಣಿಗೂ ಹೋಗಬೇಕು. ಎಲ್ಲ ಜಾತಿ ಮತದವರನ್ನು ಗಣನೆಗೆ ಪಡೆಯಬೇಕು. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಹಣ ಇಲ್ಲದಿದ್ದರೆ ಚುನಾವಣೆ ಮಾಡಲಾಗದ ಸನ್ನಿವೇಶ ಬಂದಾಗಿದೆ. ನಮ್ಮನ್ನು ಪಕ್ಷದ ವರಿಷ್ಠರು ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ಕ್ಷೇತ್ರದ ಕಡೆ ಬರುತ್ತಿರಲಿಲ್ಲ. ಕೆಲವೇ ಕೆಲವು ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದರು. ಈಗ ಪ್ರತೀ ಕ್ಷೇತ್ರಕ್ಕೂ ವರಿಷ್ಠರನ್ನು ಕರೆಸಿ ಪ್ರಚಾರ ಮಾಡಬೇಕಾದ ಸಂಪ್ರದಾಯ ಶುರುವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಆಗ ಟಿಕೆಟ್‌ ಸಿಗುತ್ತಿತ್ತು. ಈಗಿನ ರಾಜಕೀಯ ಸನ್ನಿವೇಶದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೋ ಹೇಳದ ಸ್ಥಿತಿ ಇದೆ.

Advertisement

ಚುನಾವಣೆ ಕೆಲವೇ ತಿಂಗಳಿರುವಾಗ ಬಂದು ಅಭ್ಯರ್ಥಿಗಳಾಗುತ್ತಾರೆ. ಈಗಿನ ರಾಜಕೀಯ ಸನ್ನಿವೇಶ ಸಂಪೂರ್ಣ ಭಿನ್ನವಾಗಿದೆ.

ಮತದಾರರು ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಶೇ.50ರಷ್ಟು ವೈಯಕ್ತಿಕ ವರ್ಚಸ್ಸು ಕೂಡ ಮುಖ್ಯ. ನಾಲ್ಕು ಬಾರಿ ಶಾಸಕನಾಗಿದ್ದು, ಅಂದಿನಿಂದ ಇಂದಿನವರೆಗೂ ಎಲ್ಲ ರೀತಿಯ ರಾಜಕೀಯ ಅನುಭವಗಳಾಗಿವೆ. ಆದರೆ ಇಂದಿಗೂ ಕೆಲವೆಡೆ ಜನ ನಮ್ಮೊಂದಿಗೆ ಅದೇ ವಿಶ್ವಾಸ-ನಂಬಿಕೆ ಜತೆ ಸಾಗುತ್ತಿದ್ದಾರೆ.

ಯಮನಪ್ಪ ಪವಾರ್‌

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next