Advertisement

ಆರು ತಿಂಗಳ ಬಳಿಕ ಬದನವಾಳು ಅಭಿವೃದ್ಧಿ: ರಾಹುಲ್‌ ಗಾಂಧಿ

11:58 PM Oct 02, 2022 | Team Udayavani |

ನಂಜನಗೂಡು: ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಹೊಸ ಕಾಯಕಲ್ಪ ನೀಡಲಾಗುವುದು. ಇನ್ನು ಆರು ತಿಂಗಳ ಬಳಿಕ ಬದನವಾಳಿನ ಅಭಿವೃದ್ಧಿ ಮಾಡಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದರು.

Advertisement

ರವಿವಾರ ನಂಜನಗೂಡು ತಾಲೂಕಿನ ಬದನವಾಳಿಗೆ ಆಗಮಿಸಿದ ಅವರು ಗಾಂಧಿ ಜಯಂತಿ ಪ್ರಯುಕ್ತ ಅಲ್ಲಿನ ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿಗೆ ಗೌರವ ಸಲ್ಲಿಸಿ ಭಜನೆಯಲ್ಲಿ ಭಾಗಿಯಾದರು. ಅನಂತರ ಖಾದಿ ಗ್ರಾಮೋದ್ಯೋಗ ಕೇಂದ್ರದ ನೌಕರ ರೊಡನೆ ಸಂವಾದ ನಡೆಸಿ, ಇನ್ನು 6  ತಿಂಗಳ ಬಳಿಕ  ನಿಮ್ಮ ಕಷ್ಟ ಪರಿಹಾರವಾಗಲಿದೆ. ಆಗ ಈ ಗ್ರಾಮೋ ದ್ಯೋಗ ಕೇಂದ್ರಕ್ಕೆ ಹೊಸ ಕಾಯಕಲ್ಪ ನೀಡಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಕಷ್ಟ ಕೇಳುವವವರೇ ಇಲ್ಲ ಎಂದು ಅಲ್ಲಿನ ಮಹಿಳಾ ಕಾರ್ಮಿಕರು ರಾಹುಲ್‌ ಗಾಂಧಿ ಅವರಲ್ಲಿ ಹೇಳಿಕೊಂಡಾಗ ಈ ಭರವಸೆ  ನೀಡಿದರು.

ರಾಹುಲ್‌ ಗಾಂಧಿ ಜತೆಗೆ ಸಂವಾದ ಮುಗಿಸಿ ಹೊರಬಂದ 75  ವರ್ಷದ ಗೌರಮ್ಮ  ಮಾತನಾಡಿ, ಒಂದು ದಾರದ ಉಂಡೆ ಸಿದ್ಧಪಡಿಸಿದ್ದಕ್ಕೆ 10 ಪೈಸೆ ನೀಡುತ್ತಿದ್ದ ಕಾಲವನ್ನು ನೆನಪಿಸಿಕೊಂಡು ಇಷ್ಟು ವರ್ಷ ಕಾದಿದ್ದೇವೆ. ಇನ್ನೂ ಆರು ತಿಂಗಳು ಕಾಯುತ್ತೇವೆ ಎಂದರು. ಎಂಟು ತಿಂಗಳಿಂದ ಕೆಲಸವೂ ಇಲ್ಲ, ಸಂಬಳವೂ ಇಲ್ಲ ಎಂದು ರಾಹುಲ್‌ ಗಾಂಧಿ ಅವರಲ್ಲಿ ಅರಿಕೆ ಮಾಡಿಕೊಂಡಿದ್ದೇವೆ ಎಂದು ಮಸಣಮ್ಮ ಎಂಬವರು ಹೇಳಿದರು.

ಮೈಸೂರಿನಿಂದ ಆಗಮಿಸಿದ್ದ ಬಾಣಸಿಗರು ಖಾದಿ ಕೇಂದ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು, ಜನರಿಗೆ ಜೋಳದ ರೊಟ್ಟಿ, ಬಾತ್‌, ಪಾಯಸ, ಅನ್ನ ಸಾಂಬಾರು, ರಸಂ, ಮಜ್ಜಿಗೆ ಮತ್ತು  ಮೈಸೂರು ಪಾಕ್‌ನೊಂದಿಗೆ ಭೂರಿ ಭೋಜನ ಉಣ ಬಡಿಸಿದರು.

Advertisement

ಖಾದಿ ಗ್ರಾಮೋದ್ಯೋಗದ ಆವರಣ  ರವಿವಾರ ಖಾದಿ ಪಂಚೆ, ಶರ್ಟ್‌, ಟೋಪಿಗಳಿಂದಲೇ ತುಂಬಿ ಹೋಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ, ಮಾಜಿ ಸಂಸದ ಆರ್‌. ಧ್ರುವನಾರಾಯಣ, ವಿಧಾನಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಅವರು ಖಾದಿ ಟೋಪಿಯಲ್ಲೇ ಕಾಣಿಸಿಕೊಂಡರು.

ಫ‌ಲವನ್ನುಅವರೇ ಅನುಭವಿಸುತ್ತಾರೆ ಬಿಜೆಪಿ ನಾಯಕರು ಸೋಮವಾರ ಬೆಳಗ್ಗೆ ಮೈಸೂರಿನಲ್ಲಿ ಭಾರತ ಐಕ್ಯತಾ ಯಾತ್ರೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಅಹಿತಕರ ಘಟನೆಗೆ ಕಾರಣರಾದರೆ ಇದರ ಫ‌ಲವನ್ನು ಮುಂದೆ ಅವರೇ ಅನುಭವಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಸಿದರು.

ರವಿವಾರ ಬದನವಾಳಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಮೈಸೂರಿನಲ್ಲಿ ಕಪ್ಪು ಬಾವುಟ ಪ್ರದರ್ಶಿಸುತ್ತಾರೆಂಬ ಮಾಹಿತಿ ಬಂದಿದೆ. ನಾನು ಪೊಲೀಸ್‌ ಆಯುಕ್ತರ ಜತೆ ಮಾತ ನಾಡುತ್ತೇನೆ. ಕಪ್ಪು ಬಾವುಟ, ಮೊಟ್ಟೆ, ಕಲ್ಲು, ಧಿಕ್ಕಾರ ಕೂಗುವುದು ಇದೆಲ್ಲ ಮಾಡಿದರೆ ಇದರ ಫ‌ಲವನ್ನು ಮುಂದೆ ಅವರೇ ಅನುಭವಿಸುತ್ತಾರೆ ಎಂದರು.

ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ  ಪ್ರಿಯಾಂಕ್‌ ಖರ್ಗೆ ಮಾತನಾಡಿ,   ಭಾರತ ಜೋಡೋ ಯಾತ್ರೆ ಸರಿಯಿಲ್ಲ. ಇದಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಟೀಕಿಸಿದ್ದರು. ಅವರು ಕೆಲವೊಮ್ಮೆ ರಾಹುಲ್‌ ಗಾಂಧಿ ಗಂಭೀರವಾಗಿ ಪರಿಗಣಿಸಬೇಕಾದ ರಾಜಕಾರಣಿ ಅಲ್ಲ ಎಂದು ಹೇಳುತ್ತಾರೆ. ಆದರೆ ಕಳೆದ 48 ಗಂಟೆಗಳಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು ಸೇರಿಕೊಂಡು ರಾಹುಲ್‌ ಗಾಂಧಿ ಹಾಗೂ ಭಾರತ ಐಕ್ಯತಾ ಯಾತ್ರೆ ಬಗ್ಗೆ ಎಷ್ಟು ಹೇಳಿಕೆ ನೀಡಿದ್ದಾರೆ ಎಂದು ನೀವೇ ಲೆಕ್ಕ ಹಾಕಿ ನೋಡಿ ಎಂದರು,

ಯಂಗ್‌ ಇಂಡಿಯಾ ಹಾಗೂ ನ್ಯಾಷನಲ್‌ಹೆರಾಲ್ಡ್ ಪ್ರಕರಣ ವಿಚಾರವಾಗಿ ನನಗೆ ಅ. 7ರಂದು ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡಿದ ಬಳಿಕ ನನ್ನನ್ನು  ವಿಚಾರಣೆಗೆ ಕರೆದಿದ್ದಾರೆ
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಏಕತೆಯ ಕ್ಷಣಗಳಿಗೆ ಸಾಕ್ಷಿಯಾದ ಭಾರತ್‌ ಜೋಡೋ
ರವಿವಾರ ಬದನವಾಳು ಗ್ರಾಮ  ಎರಡು ಸಮಾಜದವರನ್ನು ದ್ವೇಷ ಮರೆತು ಒಂದಾಗಿಸಿದ ಕ್ಷಣಕ್ಕೆ ಸಾಕ್ಷಿಯಾಯಿತು. ಗ್ರಾಮದಲಿ 1993ರಲ್ಲಿ ವೀರಶೈವ-ಲಿಂಗಾಯತರು ಹಾಗೂ ದಲಿತರ ಮಧ್ಯೆ ಸಂಘರ್ಷ ನಡೆದು ಮೂವರು ದಲಿತರ ಕಗ್ಗೊಲೆಯಾಗಿತ್ತು.  ಬಳಿಕ ಗ್ರಾಮದಲ್ಲಿ ಎರಡು ಸಮಾಜದ ಬೀದಿಗಳ ಮಧ್ಯೆ ಸಂಪರ್ಕ ಕಲ್ಪಿಸುವ ಕಿರಿದಾದ ರಸ್ತೆಯನ್ನು ಮುಚ್ಚಲಾಗಿತ್ತು.  ಪಾಳು ಬಿದ್ದಿದ್ದ ಈ ಕಿರಿದಾದ ರಸ್ತೆಯನ್ನು ಭಾರತ್‌ ಜೋಡೋ ಯಾತ್ರೆ ಸಂದರ್ಭ ಸ್ವತ್ಛಗೊಳಿಸಿ  ಅಗಲಗೊಳಿಸಿ ಟೈಲ್ಸ್‌ ಅಳವಡಿಸಲಾಯಿತು. ಎರಡು ಸಮುದಾಯಗಳ ಬೀದಿಗಳ ಮಧ್ಯೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ರಾಹುಲ್‌ ಗಾಂಧಿ ಟೈಲ್ಸ್‌ಗಳನ್ನು ಕೂಡಿಸಿ ಬಣ್ಣ ಹಚ್ಚಿ ಶ್ರಮದಾನ ಮಾಡಿದರು. ವೀರಶೈವ – ಲಿಂಗಾಯತ ಸಮಾಜ ಹಾಗೂ ದಲಿತ ಸಮಾಜದವರು ಈ ರಸ್ತೆಯನ್ನು ಈಗ ಬಳಸುತ್ತಿದ್ದಾರೆ.  ಈ ರಸ್ತೆಗೆ ಈಗ ಭಾರತ್‌ ಜೋಡೋ ರಸ್ತೆ ಎಂದು ಹೆಸರಿಡಲಾಗಿದೆ.  1993ರ   ಬಳಿಕ ಇದೇ ಮೊದಲ  ಬಾರಿಗೆ ರವಿವಾರ ರಾಹುಲ್‌  ಸಮ್ಮುಖದಲ್ಲಿ ಉಭಯ ಸಮುದಾಯದವರು  ಸಹಭೋಜನ ಮಾಡಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next