Advertisement

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

11:24 PM Mar 31, 2023 | Team Udayavani |

ಬಾಗಲಕೋಟೆ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳಲ್ಲಿ ಸ್ಪಷ್ಟ ಪೂರ್ವ ತಯಾರಿ ಇಲ್ಲ.
ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯ ವರುಣಾ ಮತ್ತು ಬಾದಾಮಿಯಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಕ್ಷೇತ್ರದಲ್ಲಿ ಇಂದಿಗೂ ಇದೆ. ಇಂಥ ಮಾತನ್ನು ಸ್ವತಃ ಕಾಂಗ್ರೆಸ್‌ನ ಮುಖಂಡರೇ ಕ್ಷೇತ್ರದಲ್ಲಿ ಹರಿಬಿಟ್ಟಿದ್ದಾರೆ. ವರುಣಾ ಮತ್ತು ಕೋಲಾರ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿರ್ಧರಿಸಿದ್ದೇನೆ, ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದರೂ ಅವರು ಬಾದಾಮಿಗೆ ಬರುವ ವಿಷಯದಲ್ಲಿ ಕ್ಷೇತ್ರದ ಕಾಂಗ್ರೆಸ್‌ನ ಕೆಲವು ಮುಖಂಡರು ಇನ್ನೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Advertisement

ಈ ಬೆಳವಣಿಗೆ ಕಂಡು ಈಚೆಗೆ ಬಾದಾಮಿಯಲ್ಲಿ ನಡೆದ ಬಿಜೆಪಿ ಒಬಿಸಿ ಸಮಾವೇಶದಲ್ಲಿ ಸ್ವತಃ ಸಚಿವ ಶ್ರೀರಾಮುಲು ಕೂಡ ಇಲ್ಲಿ ಎಂ.ಕೆ.ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ, ಶಾಂತಗೌಡ ಪಾಟೀಲ ಅವರೊಂದಿಗೆ ನಾನೂ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ ಎಂದು ಬಹಿರಂಗ ಸಮಾವೇಶದಲ್ಲಿ ಹೇಳಿದ್ದಾರೆ. ಹೀಗಾಗಿ ಬಿಜೆಪಿಗೂ ಸಿದ್ದರಾಮಯ್ಯ ಕೊನೆ ಗಳಿಗೆಯಲ್ಲಿ ಬಾದಾಮಿಗೆ ಬರಹುದೆಂಬ ಅನುಮಾನವಿದೆ.

ಸ್ಪಷ್ಟತೆ ಇಲ್ಲದೇ ತಯಾರಿಯೂ ಇಲ್ಲ: ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯ ಬರುವ ಕುರಿತು ಸ್ಪಷ್ಟತೆ ಇಲ್ಲ. ಅವರು ಬರದಿದ್ದರೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯಲಿದೆ ಎಂಬ ಪ್ರಬಲವಾದ ಒಂದೆಡೆ ಇದ್ದರೆ, ಚಿಮ್ಮನಕಟ್ಟಿ ಕುಟುಂಬ ಬಿಟ್ಟು ಬೇರೆ ಯಾರಿಗೆ ಬೇಕಾದರೂ ಟಿಕೆಟ್‌ ಕೊಡಿ ಎಂದು ಇನ್ನೊಂದು ಗುಂಪು ಹೇಳುತ್ತಿದೆ. ಹೀಗಾಗಿ ಚುನಾವಣೆಗಾಗಿ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಅಥವಾ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಪೂರ್ವ ತಯಾರಿಗಳು ಅಷ್ಟೊಂದು ಕಾಣುತ್ತಿಲ್ಲ. ಟಿಕೆಟ್‌ ಪಡೆಯುವವರು ತಯಾರಿ ಮಾಡಲೆಂದು ಒಂದು ಗುಂಪು ನಿರ್ಲಕ್ಷé ಮಾಡಿದರೆ, ಮತ್ತೆ ಸಿದ್ದರಾಮಯ್ಯ ಬಂದ್ರೆ ಹೇಗೆ ಎಂದು ಕಾಂಗ್ರೆಸ್‌ನ ಇನ್ನೊಂದು ಗುಂಪು ಹೇಳುತ್ತಿದೆ.

ಟಿಕೆಟ್‌ಗಾಗಿ ಪೈಪೋಟಿ: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರದಿದ್ದರೆ ಯಾರಿಗೆ ಕಾಂಗ್ರೆಸ್‌ ಟಿಕೆಟ್‌ ಎಂಬುದು ಈಗಿರುವ ಕುತೂಹಲ. ಚಿಮ್ಮನಕಟ್ಟಿ, ನಮಗೆ ಬಿಟ್ಟು ಯಾರಿಗೆ ಕೊಡುತ್ತಾರೆ ಎಂಬ ವಿಶ್ವಾಸದಲ್ಲಿದ್ದರೆ, ನಮ್ಮನ್ನೂ ಪರಿಗಣಿಸಿ ಎಂದು ಮಹೇಶ ಹೊಸಗೌಡರ, ಅನಿಲ ದಡ್ಡಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಸಿದ್ದು ಉತ್ತರಾಧಿಕಾರಿಯಾಗಲು ಹೊಳೆಬಸು ಶೆಟ್ಟರ, ಎಂ.ಬಿ.ಹಂಗರಗಿ ತೆರೆಮರೆಯಲ್ಲಿ ಗಂಭೀರ ಪ್ರಯತ್ನ ನಡೆಸಿದ್ದಾರೆ.
ಜೆಡಿಎಸ್‌ನ ಘೋಷಿತ ಅಭ್ಯರ್ಥಿ ಹನಮಂತ ಮಾವಿನಮರದ ಕಳೆದ ಬಾರಿ ಮೊದಲ ಪ್ರಯತ್ನವಾದರೂ 25 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಆಗ ಸೋತರೂ ಐದು ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆ, ಕ್ಷೇತ್ರದಲ್ಲಿ ಓಡಾಟ ಮಾಡಿಕೊಂಡಿದ್ದಾರೆ. ಇದೀಗ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಕ್ಷೇತ್ರಕ್ಕೆ ಕರೆಸಿ ಪ್ರಚಾರ ಮಾಡಿದ್ದಾರೆ. ಬಿಜೆಪಿ-ಕಾಂಗ್ರೆಸ್‌ನ ಒಳಜಗಳದಲ್ಲಿ ನನಗೆ ಜನ ಕೈ ಹಿಡಿಯಲಿದ್ದಾರೆ ಎಂಬುದು ಅವರ ನಿರೀಕ್ಷೆ.

ಒಟ್ಟಾರೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಬಾದಾಮಿಗೆ ಎರಡೂ ಪಕ್ಷಗಳ ಟಿಕೆಟ್‌ ಹಂಚಿಕೆ ಕುತೂಹಲ ಕೆರಳಿಸುತ್ತಿದೆ. ಮತ್ತೆ ಸಿದ್ದು-ಶ್ರೀರಾಮುಲು ಎದುರಾಳಿ ಗಳಾಗ್ತಾರಾ ಇಲ್ಲವೇ ಎರಡೂ ಪಕ್ಷಗಳ ಸ್ಥಳೀಯರಿಗೆ ಟಿಕೆಟ್‌ ಸಿಗುತ್ತಾ ಎಂಬ ಪ್ರಶ್ನೆ ಕ್ಷೇತ್ರದ ಮತದಾರರಲ್ಲಿದೆ.

Advertisement

ಮತ್ತೆ ಸಿದ್ದು ಬಂದರೆ ಬಂಡಾಯ ಭೀತಿ
ಪುನಃ ಸಿದ್ದರಾಮಯ್ಯ ಬಾದಾಮಿಗೆ ಬಂದರೆ ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಚಿಮ್ಮನಕಟ್ಟಿ ಕುಟುಂಬದವರು ಕಣಕ್ಕಿಳಿಯುತ್ತಾರೆ ಎಂಬ ಮಾತು ಹರಿದಾಡುತ್ತಿದೆ. ಇದನ್ನು ಅವರ ಕುಟುಂಬದವರು ತಳ್ಳಿ ಹಾಕಿದ್ದಾರೆ. ಆದರೆ 2018ರಲ್ಲಿ ಟಿಕೆಟ್‌ ಘೋಷಣೆಯಾಗಿ ಬಳಿಕ ಸಿದ್ದರಾಮಯ್ಯಗೆ ಬಿಟ್ಟು ಕೊಟ್ಟ ಡಾ|ದೇವರಾಜ ಪಾಟೀಲ ಈ ಬಾರಿ ಬಾಗಲಕೋಟೆ ಕ್ಷೇತ್ರದ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಟಿಕೆಟ್‌ ತಪ್ಪಿದರೆ ಮತ್ತು ಸಿದ್ದರಾಮಯ್ಯ ಪುನಃ ಬಾದಾಮಿಗೆ ಬಂದರೆ ಡಾ|ದೇವರಾಜ ಅವರೇ ರೆಬೆಲ್‌ ಆಗಿ ನಿಲ್ಲುವ ಸಾಧ್ಯತೆ ಇದೆ.

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next