Advertisement

ಬಾದಾಮಿಯಲ್ಲಿ ರಿಂಗಣಿಸಿದೆ ಕುಲ ಕುಲ ಕುಲವೆಂದು…

06:50 AM May 08, 2018 | |

ಚಾಲುಕ್ಯರ ದೊರೆ ಮಂಗಳೇಶನು ದೇವಸ್ಥಾನಕ್ಕೆ ಬಳವಳಿಯಾಗಿ ಕೊಟ್ಟ, ಅಂದು ಪರಿಪೂರ್ಣ ಅಭಿವೃದ್ಧಿ ಹೊಂದಿದ್ದ ನಂದಿಕೇಶ್ವರ ಗ್ರಾಮದಲ್ಲಿ ಇಂದು ಜನ ಮೂಗಿಗೆ ಬಟ್ಟೆ ಕಟ್ಟಿ ಓಡಾಡುವ ಸ್ಥಿತಿಯೂ ಸೇರಿ ಅಭಿವೃದ್ಧಿ ನಾಲ್ಕನೇ ಸ್ಥಾನದಲ್ಲಿದೆ.ರಾಜಕೀಯ ಪಕ್ಷಗಳ ಬಲಾಬಲ ಮೂರನೇ ಸ್ಥಾನದಲ್ಲಿದೆ. 

Advertisement

ಪಕ್ಷಗಳ ಮುಖಂಡರ ವರ್ಚಸ್ಸು ಮತ್ತು ಪ್ರಣಾಳಿಕೆಗೆ ಎರಡನೇ ಸ್ಥಾನ. ಹಾಗಿದ್ದರೆ ಇಲ್ಲಿ ನಂ. 1 ಸ್ಥಾನ ಯಾವುದು ಅಂತೀರಾ? ನೀವು ನಂಬಲೇಬೇಕು. ಅದು ಇವನಾರವ..ಇವನಾರವ..ಇವನಾರವ ಎಂಬ ಕುಲದ ವಿಚಾರ.

ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಸುಪ್ತವಾಗಿ ಕೆಲಸ ಮಾಡು ತ್ತಿರುವುದು ಸುಳ್ಳಲ್ಲ. ಇದು ಇನ್ನಷ್ಟು ಸಾಬೀ ತಾಗುತ್ತಿರುವುದು ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಯ ಬಿ. ಶ್ರೀರಾಮುಲು ಅವರು ಸ್ಪರ್ಧಿಸಿ ರಂಗೇರಿಸಿರುವ ಬಾದಾಮಿ ಕ್ಷೇತ್ರದಲ್ಲಿ. ಹಳ್ಳಿ ಹೈದರೂ ಈ ಕ್ಷೇತ್ರದ ರಾಜಕೀಯ ವಿದ್ಯಮಾನಗಳನ್ನು ಇಂದು ವಿಶ್ಲೇಷಣೆ ಮಾಡುತ್ತಿದ್ದಾರೆ. 

ಆದರೆ ಪಕ್ಕಾ ರಾಜಕೀಯ ಅಖಾಡಕ್ಕೆ ಇಳಿದವರು ಬಾದಾಮಿ ಕ್ಷೇತ್ರದ ಗೆಲುವು-ಸೋಲಿನ ಲೆಕ್ಕಾಚಾರ ಮಾಡುತ್ತಿದ್ದಾರೆ. ಎಲ್ಲಾ ಲೆಕ್ಕಾಚಾರಗಳು ಪಕ್ಷಗಳ ಮತ್ತು ಮುಖಂಡರ ವರ್ಚಸ್ಸು ಅಥವಾ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಅವಲಂಬಿತ ವಾಗಿಲ್ಲ. ಬದಲಿಗೆ ಅಭ್ಯರ್ಥಿಗಳ ಜಾತಿ ಲೆಕ್ಕಾಚಾರವೇ ಪ್ರಾಧಾನ್ಯತೆ ಪಡೆದುಕೊಂಡಿದೆ.

ಮುಗ್ಧತೆಯೊಳಿದೆ ನಮ್ಮತನ: ಇಲ್ಲಿನ ಕುರಿ ಕಾಯು ವವ, ಕೂಲಿ ಕಾರ್ಮಿಕ ಯಾರೇ ಆದರೂ ರಾಜಕೀ ಯವಾಗಿ ಮುಗ್ಧರೇ ಆಗಿದ್ದಾರೆ. ತಮ್ಮ ಕುಲದ ವ್ಯಕ್ತಿಗಳು ಮೈಸೂರು, ಬಳ್ಳಾರಿ ಬಿಟ್ಟು ಇಲ್ಲಿಗೆ ಬಂದಿ ದ್ದಾರೆ. ಅವರನ್ನು ನಾವು ಗೆಲ್ಲಿಸೋಣ ಎಂದು ಸ್ಥಳೀಯ ರಾಜಕೀಯ ಮುಖಂಡರು ಇವರ ಮುಗ್ಧ ತೆ ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

Advertisement

ಕುರುಬ ವರ್ಸಸ್‌ ವಾಲ್ಮೀಕಿ: ಸ್ಥಳೀಯವಾಗಿ ಕುರು ಬರು ಮತ್ತು ವಾಲ್ಮೀಕಿ ಸಮುದಾಯಗಳ ಮಧ್ಯೆ ಮೇಲಿಂದ ಮೇಲೆ ವ್ಯಾಜ್ಯಗಳು ಏರ್ಪಡುವುದು ಇಲ್ಲಿ ಸಾಮಾನ್ಯ. ಇಂತ ಸಂದರ್ಭದಲ್ಲಿ ಇವರೆಲ್ಲ ತಮ್ಮ ಜಾತಿ ಮುಖಂಡರ ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಅಡಗಲ್‌ ಗ್ರಾಮದಲ್ಲಿ ಈ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ಸಮು ದಾಯದ ಮುಖಂಡರು ಸತೀಶ ಜಾರಕಿಹೊಳಿ ಅವರಿಗೆ ನೇರವಾಗಿ, ನಾವು ಈ ಬಾರಿ ಶ್ರೀರಾಮುಲು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದು ಕೈ ಮುಖಂಡರಿಗೆ ಕೊಂಚ ಇರುಸು ಮುರುಸಾಗುವಂತೆ ಮಾಡಿದೆ. ಇದು ಸಿದ್ದರಾಮಯ್ಯ ಗೆಲುವಿನ ಓಟಕ್ಕೆ ಕೊಂಚ ಅಡ್ಡಿಯಾಗಲೂಬಹುದು.

ವೀರಶೈವ ಮುಖಂಡರಿಗೆ ಇಕ್ಕಟ್ಟು: ಇಲ್ಲಿನ ನಂದಿಕೇ ಶ್ವರ, ಚೊಳಚಗುಡ್ಡ ಸೇರಿ ಕ್ಷೇತ್ರದಲ್ಲಿ 10 ಸಾವಿರದ ಷ್ಟಿರುವ ವೀರಶೈವ ಜಂಗಮರು ಈ ಬಾರಿ ಇಕ್ಕಟ್ಟಿನಲ್ಲಿ ಸಿಲುಕಿದ್ದು ಸುಳ್ಳಲ್ಲ. ಅದರಲ್ಲೂ ಮಾಜಿ ಶಾಸಕ ಎಚ್‌. ಸಿ. ನಂಜಯ್ಯನಮಠ ಮತ್ತು ಎಂ.ಬಿ. ಹಂಗರಗಿ ಅವರು ವೀರಶೈವ ಜಂಗಮರಾಗಿದ್ದು, ಇಬ್ಬರೂ ನಾಯಕರಿಗೂ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಬಿಸಿತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಎಂದು ಶಿವಯೋಗ ಮಂದಿರದ ಸ್ವಾಮೀಜಿಗಳು ಕ್ಷೇತ್ರದಲ್ಲಿ ಬಹಿರಂಗವಾಗಿ ಹೇಳಿ ಕೊಂಡು ತಿರುಗುತ್ತಿದ್ದರೆ, ಈ ಇಬ್ಬರು ಮುಖಂಡರು ಜಂಗಮ ಸಮುದಾಯದ ಮತಗಳನ್ನು ಕಾಂಗ್ರೆಸ್‌ಗೆ ತರುವ ಜವಾಬ್ದಾರಿ ಹೊತ್ತಿದ್ದಾರೆ. ಇವರ ಸ್ಥಿತಿ ಇತ್ತ ಧರಿ ಅತ್ತ ಪುಲಿ ಎಂಬಂತಾಗಿದೆ ಎಂಬುದು ನಂದಿಕೇ ಶ್ವರ ಗ್ರಾಮದ ಶಿವಲಿಂಗಯ್ಯ ಪೂಜಾರ ಅಭಿಮತ.

ಜೆಡಿಎಸ್‌ ಒಲವು ಕೈಗೆ ಬಲ: ಸಿದ್ದರಾಮಯ್ಯ ಅವ ರಿಗೆ ಪ್ಲಸ್‌ ಪಾಯಿಂಟ್‌ ಆಗಿ ನಿಂತಿದ್ದು ಈ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ. ಮೂಲತಃ ಕೋಟೆಕಲ್‌-ಗುಳೇದಗುಡ್ಡದ ಯುವ ನಾಯಕ ಹನುಮಂತ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಸ್ಥಳೀಯವಾಗಿ ಉತ್ತಮ ಹೆಸರು ಪಡೆದಿದ್ದು, ಬಿಜೆಪಿಯ ಮತ ಬ್ಯಾಂಕ್‌ಗೆ ಹೆಚ್ಚು ನಷ್ಟ ಮಾಡುವ ಸಾಧ್ಯತೆಯಿದೆ.

ಇಡೀ ಬಾದಾಮಿ ಕ್ಷೇತ್ರದಲ್ಲಿ ಬಾದಾಮಿ, ಗುಳೇ ದಗುಡ್ಡ ಮತ್ತು ಕೆರೂರು ಈ ಮೂರು ಊರುಗಳು ಅಭ್ಯರ್ಥಿಯ ಗೆಲುವು ನಿರ್ಧರಿಸುತ್ತವೆ ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಇಲ್ಲಿ 10 ಸಾವಿರಕ್ಕಿಂತ ಅಧಿಕ ಮತಗಳಿವೆ. ಈ ಪೈಕಿ ಗುಳೇದಗುಡ್ಡದಲ್ಲಿ ಜೆಡಿಎಸ್‌, ಬಾದಾಮಿಯಲ್ಲಿ ಬಿಜೆಪಿ ಮತ್ತು ಕೆರೂರಿನಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ ಅಧಿಕವಾಗಿದೆ.

ಬಾಳ ಶ್ಯಾಣ್ಯಾಕೀ…
“ಅಕ್ಕಾ ಬಾಳ ಶ್ಯಾಣ್ಯಾಕೀ…ಕೈಗೆ ಓಟ ಹಾಕಾಕೀ..’ ಎನ್ನುವ ಅಪ್ಪಟ ಜವಾರಿ ಭಾಷೆಯ ಪ್ರಚಾರದ ಹಾಡು, ಡೊಳ್ಳು ಬಡಿಯುತ್ತ ಭಂಡಾರ ಎರಚಿ ಕುರಿಮರಿ ತೂರುವ ಕುರುಬರ ಹಿಂಡು, ಇನ್ನೊಂದೆಡೆ “ನಾವು ವೀರ ಮದಕರಿ ವಂಶದ ವರು… ನಾವ್ಯಾರಿಗೂ ಕಮ್ಮಿ ಇಲ್ಲ… ಈ ಸಲಾ ಆಗೋಗಲಿ’ ಎಂದು ಗಂಡು ಮೆಟ್ಟಿನ ಭಾಷೆಯಲ್ಲಿ ಮಾತಾಡುವ ವಾಲ್ಮೀಕಿ ಯುವಕರ ಪಡೆ. “ಯಡಿಯೂರಪ್ಪ ಸಿಎಂ ಆಗಬೇಕ್ರಿ.. ರೈತರಿಗೆ ಅವರ ಅಧಿಕಾರಕ್ಕೆ ಬಂದ್ರೇನೆ ಒಂದಿಷ್ಟೇನಾದ್ರು ಸಿಕ್ಕೋದು’ ಎನ್ನುವ ರೈತ ಸಂಕುಲದ ಮಾತುಗಳು ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿವೆ.

ಕೈ-ಕಮಲದಲ್ಲಿ ಕುಲದ ಲೆಕ್ಕಾಚಾರ
ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇ ಕುರುಬರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಂದು. ಇಲ್ಲಿ 48 ಸಾವಿರದಷ್ಟು ಕುರುಬರಿದ್ದಾರೆ. 57 ಸಾವಿರದಷ್ಟು ಲಿಂಗಾಯತರು. 28 ಸಾವಿರ ವಾಲ್ಮೀಕಿ, 18 ಸಾವಿರ ಮುಸ್ಲಿಂ, 12 ಸಾವಿರ ನೇಕಾರರಿದ್ದಾರೆ.

ಕೈ ಲೆಕ್ಕಾಚಾರ
ಕುರುಬ-48,000, ಮುಸ್ಲಿಂ- 18,000, ನೇಕಾರ-12,000, ಇತರ ಹಿಂದುಳಿದ ಜಾತಿಗಳು 10,000. ಇನ್ನು  ಮುಖ್ಯಮಂತ್ರಿ ವರ್ಚಸ್ಸು 10 ಸಾವಿರ ಮತಗಳು. ಒಟ್ಟು ಒಂದು ಲಕ್ಷದ ಲೆಕ್ಕ. ಈ ಪೈಕಿ 85 ಸಾವಿರ ಮತಗಳು ಬಂದರೂ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ.

ಕಮಲ ಲೆಕ್ಕಾಚಾರ
57 ಸಾವಿರ ಲಿಂಗಾಯತರು, 28 ಸಾವಿರ ವಾಲ್ಮೀಕಿ, 12 ಸಾವಿರ ನೇಕಾರರು ಮತ್ತು ಇತರೆ 10 ಸಾವಿರ ಒಟ್ಟು ಒಂದು ಲಕ್ಷಕ್ಕೂ ಅಧಿಕ. ಈ ಪೈಕಿ 80-85 ಸಾವಿರ ಮತಗಳು ಬರಲಿವೆ ಎಂಬುದು ಕಮಲ ಲೆಕ್ಕಾಚಾರ.

ರಾಮುಲು ನಜರ್‌.. ಸಿಎಂ ಖದರ್‌…
ಮುಖ್ಯಮಂತ್ರಿಗಳ ಖದರ್‌ ಭಾಷಣದ ಕಿಡಿಗಳು ಕುರುಬ ಸಮುದಾಯವನ್ನು ಹುಚ್ಚೆಬ್ಬಿಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ಭಾಷಣದ ತುಣಕುಗಳು ಬಾದಾಮಿ ಕ್ಷೇತ್ರದ ಮತದಾರರ ಮೊಬೈಲ್‌ಗ‌ಳಲ್ಲಿ ರಿಂಗಣಿಸುವಂತೆ ಮಾಡುತ್ತಿದೆ ಕಮಲ ಪಾಳೆಯ. ಹೀಗಾಗಿ ಸದ್ಯಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಇಂತವರಿಗೆ ಜಯ ಲಭಿಸುತ್ತದೆ ಎಂದು ಹೇಳುವುದು ಕಷ್ಟ.

ಆದರೆ ಸಿದ್ದರಾಮಯ್ಯ ಬೆಂಬಲಿಗರು ಹಾಕುತ್ತಿರುವ ಶ್ರಮ, ತಂತ್ರಗಾರಿಕೆ ಖಂಡಿತವಾಗಿಯೂ ಅವರನ್ನು ಗೆಲುವಿನ ಮೆಟ್ಟಿಲಿಗೆ ತಂದು ನಿಲ್ಲಿಸುವ ಸಾಧ್ಯತೆಗಳು ಗೋಚರಿಸುತ್ತಿವೆ. ಇನ್ನೊಂದೆಡೆ ಬಿಜೆಪಿಯು ರಾಜ್ಯವ್ಯಾಪಿ ಬೀರುತ್ತಿರುವ ಪ್ರಭಾವದ ಫಲಿತದ ಜೊತೆಗೆ ರಾಮುಲು ಅವರ ಗೆಳೆಯ ಜನಾರ್ದನ ರೆಡ್ಡಿಯ ಕೃಪೆ ತೆರೆಮರೆಯಲ್ಲಿ ಕೆಲಸ ಮಾಡಿದರೂ ಸಾಕು, ಸಿದ್ದರಾಮಯ್ಯ ಅವರು ಉಸಿರು ಬಿಗಿಹಿಡಿಯಬೇಕಾಗುತ್ತದೆ.

ಸಿದ್ದರಾಮಯ್ಯ ಅವರು ನಮ್ಮ ಕುಲದ ಮನುಷ್ಯಾ. ನಮ್ಮ ಮನಿಯವ್ರು ಎಲಕ್ಷನ್‌ ನಿಂತ್ರ ಓಟ್‌ ಹಾಕಾಂಗಿಲ್ಲೇನ್‌? ಇದೊಮ್ಮೆ ಅಲ್ಲಿಂದ ಬಂದಾರು ನಮ್ಮ ಸಮುದಾಯದವರು ನಾವು ಓಟ್‌ ಹಾಕ್ತೇವೆ. ತಪ್ಪೇನೈತಿ.
– ರೇಣಕವ್ವ ಕುರುಬರ, ನಂದಿಕೇಶ್ವರ ನಿವಾಸಿ

ನೋಡ್ರಿ ಇಲ್ಲೇ ಮುಖ್ಯಮಂತ್ರಿ ಎಲೆಕ್ಷನ್‌ ನಿಲ್ಲಲ್ಲಿ. ಆದ್ರ ರಾಜ್ಯದಾಗ ಬಿಜೆಪಿ ಸರ್ಕಾರ ಬಂದ್ರ ರೈತರಿಗೆ ಒಂದಿಷ್ಟ ಸಹಾಯ ಅಕ್ಕೇತಿ. ಅದಕ್ಕ ನಾವು ಯಡಿಯೂರಪ್ಪ ಕೈ ಬಲ ಪಡಸ್ತೇವೆ.
– ಬಸಲಿಂಗಯ್ಯ ಹಿರೇಮಠ, ಸುಳ್ಳ ಗ್ರಾಮ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next