Advertisement

ಬಾದಾಮಿ ಪ್ರವಾಸೋದ್ಯಮ ಅಭಿವೃದ್ಧಿಗೆ ವೇಗ

04:54 PM Sep 01, 2022 | Team Udayavani |

ಬಾದಾಮಿ: ಐತಿಹಾಸಿಕ ಚಾಲುಕ್ಯರ ರಾಜಧಾನಿ ಬಾದಾಮಿ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪೂರಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಲಾಗುತ್ತಿದೆ. ಇದಕ್ಕಾಗಿಯೇ ಉಪವಿಭಾಗಾಧಿ ಕಾರಿ ಶ್ವೇತಾ ಬೀಡಿಕರ ಅವರನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರನ್ನಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

Advertisement

ಮಂಗಳವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಭವನದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಮಂಗಳವಾರ ಒಂದೊಂದು ತಾಲೂಕಿಗೆ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವುದರ ಜತೆಗೆ ವಿವಿಧ ಇಲಾಖೆಗಳ ಅಭಿವೃದ್ಧಿಯ ಪರಿಶೀಲನೆ ನಡೆಸಲಾಗುತ್ತಿದೆ. ಅದರಂತೆ ಮಂಗಳವಾರ ಬಾದಾಮಿ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಇದಕ್ಕೆ ಪೂರಕವಾಗಿ ಹೆಚ್ಚಿನ ಪ್ರಗತಿಗಾಗಿ ಸೂಕ್ತ ಸಲಹೆ ಸೂಚನೆಯನ್ನು ತಹಶೀಲ್ದಾರ್‌ ಅವರಿಗೆ ನೀಡಲಾಗಿದೆ. ಭೂಮಿ ರ್‍ಯಾಂಕಿಂಗ್‌ನಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರದ ಕಾರ್ಯ ನಿರ್ವಹಣೆಯಲ್ಲಿ 7 ನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ಬಾದಾಮಿ ತಾಲೂಕಿನ 30 ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದಿರುವ ಬಗ್ಗೆ ತಿಳಿದು ಬಂದಿದ್ದು, ಇದರಲ್ಲಿ ಕೇವಲ 3 ಗ್ರಾಮಗಳಲ್ಲಿ ಸರಕಾರಿ ಜಮೀನು ಲಭ್ಯವಿದೆ. ಉಳಿದ 27 ಗ್ರಾಮಗಳಲ್ಲಿ ಗ್ರಾಮಸ್ಥರ ಮನವೊಲಿಸಿ ಕಡಿಮೆ ಸರಕಾರಿ ದರದಲ್ಲಿ ಜಮೀನು ಖರೀದಿಸಲು ಚಿಂತನೆ ನಡೆಸಲಾಗಿದೆ. ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕು ಎಂದರು.

ಕೇಂದ್ರ ಸರಕಾರದ ಹೃದಯ ಯೋಜನೆ ಅಡಿಯಲ್ಲಿ ಮಂಜೂರಾಗಿರುವ 18.43 ಕೋಟಿ ರೂ. ಅನುದಾನದಲ್ಲಿ ಈಗಾಗಲೇ ಸಿಪಿಡಬ್ಲೂ ಇಲಾಖೆ 6.85 ಕೋಟಿ ರೂ ಅನುದಾನದಲ್ಲಿ 5.89 ಕೋಟಿ ರೂ. ವೆಚ್ಚ ಮಾಡಿದೆ. ಉಳಿದ 99 ಲಕ್ಷ ರೂ. ವೆಚ್ಚದ ಬಸವೇಶ್ವರ ಮತ್ತು ಪುಲಿಕೇಶಿ ಮೂರ್ತಿಗಳ ಸ್ಥಾಪನೆ ಆಗಬೇಕಾಗಿದೆ. ಈ ಮೂರ್ತಿಗಳು ಈಗಾಗಲೇ ಸಿದ್ಧವಾಗಿವೆ. ಇವುಗಳ ಸ್ಥಾಪನೆಗೆ ಜಾಗ ನಿಗದಿಯಾಗಬೇಕಾಗಿದೆ. ಹೀಗಾಗಿ ಜಾಗೆ ಪರಿಶೀಲನೆಯ ಹಂತದಲ್ಲಿದೆ. ರಸ್ತೆ ಮಧ್ಯೆ ಭಾಗದಲ್ಲಿ ಪ್ರತಿಷ್ಟಾಪಿಸಲು ಸಾಧ್ಯವಿಲ್ಲ. ಇದಕ್ಕೆ ಸರ್ವೋಚ್ಛ ನ್ಯಾಯಲಯದ ಆದೇಶವಿದೆ.

Advertisement

ಸ್ಥಳೀಯ ಪುರಸಭೆಯ ಒಡೆತನದ ಮತ್ತು ಸರಕಾರಿ ಜಾಗ ಗುರುತಿಸಲಾಗುತ್ತಿದೆ ಎಂದರು. ಹೃದಯ ಯೋಜನೆ ಅಡಿಯಲ್ಲಿ ಉಳಿದ 11.58 ಕೋಟಿ ರೂ. ಅನುದಾನದಲ್ಲಿ ಪುರಸಭೆ ವತಿಯಿಂದ ಈಗಾಗಲೇ 7.55 ಕೋಟಿ ರೂ. ಅನುದಾನದ ಕಾಮಗಾರಿ ಮಾಡಲಾಗಿದೆ. ಉಳಿದ 4 ಕೋಟಿ ರೂ. ಅನುದಾನ ಉಳಿತಾಯವಾಗಿದೆ. ಈ ಅನುದಾನಕ್ಕೂ ಕೂಡಾ ಕ್ರಿಯಾ ಯೋಜನೆ ಸಿದ್ಧಪಡಿಸಲು ಪುರಸಭೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನು ಅನುಮೋದನೆ ಪಡೆದು ನಿಯಮಾನುಸಾರ ಖರ್ಚು ಭರಿಸಲಾಗುವುದು ಎಂದು ತಿಳಿಸಿದರು.

ಉಳಿದಂತೆ ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳ ವಿವರ ನೀಡಿದ ಅವರು ಮೇಲಿಂದ ಮೇಲೆ ಬಾದಾಮಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಚಾಲುಕ್ಯರ ನಾಡು ಐತಿಹಾಸಿಕ ಪ್ರವಾಸಿ ತಾಣವನ್ನು ಸೌಂದಯಿìಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಬಾದಾಮಿ ತಹಶೀಲ್ದಾರ್‌ ಜೆ.ಬಿ. ಮಜ್ಜಗಿ, ಗುಳೇದಗುಡ್ಡ ತಹಶೀಲ್ದಾರ್‌ ಎಸ್‌.ಬಿ. ಬೊಮ್ಮನ್ನವರ, ಬಿಇಒ ಆರೀಫ್‌ ಬಿರಾದಾರ, ಮುಖ್ಯಾಧಿಕಾರಿ ಎ.ಎಚ್‌.ಮುದ್ದೇಬಿಹಾಳ, ಎಇಇ ನಾರಾಯಣ ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next