ಬ್ಯಾಡಗಿ: ದೇವಸ್ಥಾನ, ಮಠ, ಮಂದಿರಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಪಟ್ಟಣದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯ ನಿರ್ಮಿಸುವ ಮೂಲಕ ಪಟ್ಟಣದ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವಲ್ಲಿ ಯಶಸ್ವಿಯಾಗಿರುವ ಸವಿತಾ ಸಮಾಜದ ಕಾರ್ಯ ಪ್ರಶಂಸನಾರ್ಹ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ನಿಸರ್ಗನಗರದಲ್ಲಿ ಸವಿತಾ ಸಮಾಜದ ಆಶ್ರಯದಲ್ಲಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀ ಪದ್ಮಾವತಿ ಮತ್ತು ಶ್ರೀ ವೆಂಕಟೇಶ್ವರಸ್ವಾಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆ ಉದ್ದೇಶಿಸಿ ಮಾತನಾಡಿದರು.
ದೇವಸ್ಥಾನಗಳ ನಿರ್ಮಾಣ ಸುಲಭದ ಮಾತಲ್ಲ. ಅದರಲ್ಲೂ ಸಾರ್ವಜನಿಕರ ಸಹಕಾರದೊಂದಿಗೆ ಬಹುದೊಡ್ಡ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಪಟ್ಟಣದಲ್ಲಿ “ಸಣ್ಣ ತಿರುಪತಿ’ಯನ್ನು ನಿರ್ಮಿಸುವಲ್ಲಿ ಸವಿತಾ ಸಮಾಜ ಯಶಸ್ವಿಯಾಗಿದೆ ಎಂದರು. ಜೈವಿಕ ಇಂಧನ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳು.
ನಮ್ಮ ಸಂಸ್ಕೃತಿಯ ತಳಹದಿ ದೇವಸ್ಥಾನಗಳು ಎಂಬುದು ಸಾರ್ವಕಾಲಿಕ ಸತ್ಯ. ಈ ಹಿನ್ನೆಲೆಯಲ್ಲಿ ಬ್ಯಾಡಗಿ ಪಟ್ಟಣದಲ್ಲಿಯೇ ಅತ್ಯಂತ ಸುಂದರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ನಿರ್ಮಾಣವಾಗಿರುವುದು ಸಂತಸದ ಸಂಗತಿ ಎಂದರು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಗೌಡರ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಪ್ರತಿಯೊಬ್ಬರು ತನು-ಮನ-ಧನದ ಸಹಾಯ ಸಹಕಾರ ನೀಡಿದ್ದು, ಅವರೆಲ್ಲರಿಗೂ ಸಮಾಜ ಋಣಿಯಾಗಿದೆ. ಸೌಕರ್ಯಗಳ ಕೊರತೆಯಿಂದ ಅರ್ಧಕ್ಕೆ ನಿಂತಿರುವ ಸವಿತಾ ಸಮಾಜದ ಸಮುದಾಯ ಭವನ ಪೂರ್ಣಗೊಳಿಸುವುದು ಸೇರಿದಂತೆ ನಿರ್ಮಾಣ, ಸ್ವಾಗತ ಕಮಾನು ನಿರ್ಮಿಸಲು ಸಹಕರಿಸುವಂತೆ
ಮನವಿ ಮಾಡಿದರು.
ಕೊಂಚೂರುವಾಡಿ ಸವಿತಾ ಪೀಠದ ಸವಿತಾನಾಥನಂದ ಸ್ವಾಮೀಜಿ, ಹಾವೇರಿ ರಾಘವೇಂದ್ರಸ್ವಾಮಿ ಮಠದ ಧರ್ಮಾಧಿಕಾರಿ ಹರಿಕೃಷ್ಣ ಆಚಾರ್ಯ, ಪಟ್ಟಣದ ಮುಪ್ಪಿನೇಶ್ವರ ಮಠದ ಮ.ನಿ.ಪ್ರ. ಮಲ್ಲಿಕಾರ್ಜುನ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಸದಸ್ಯರಾದ ಕವಿತಾ ಸೊಪ್ಪಿನಮಠ, ಗಾಯತ್ರಿ ರಾಯ್ಕರ್, ಉದ್ದಿಮೆದಾರ ಆರ್. ನಾಗರಾಜ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಸೋಮಯ್ಯ ಕರ್ನೂಲ, ಕುಮಾರ ಗೊಂದಿಮಲ್ಲ, ಪರಸಪ್ಪ ಕರ್ನೂಲ, ಪರಶುರಾಮ ಕರ್ನೂಲ್, ರಾಜು ಕರ್ನೂಲ, ಶ್ರೀನಿವಾಸ್
ಕರ್ನೂಲ ಇನ್ನಿತರರಿದ್ದರು. ಶಿಕ್ಷಕ ಶ್ರೀನಿವಾಸ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಮೂರು ದಿನಗಳ ಕಾಲ ನಡೆದ ವೈಭವದ ಕಾರ್ಯಕ್ರಮದ ಅಂಗವಾಗಿ ಶಿಗ್ಗಾವಿ ಜೋಡಿ ಬಸವೇಶ್ವರ ಕಲಾತಂಡವರಿಂದ “ಜನಪದ ಸಿರಿ’ ಸಂಗೀತ, ದುರ್ಗಾಪೂಜೆ, ಬಾಗಿನ ಕಾರ್ಯಕ್ರಮ, ನಾಂದಿ ವಿಸರ್ಜನೆ, ಮಹಾಮಂತ್ರಾಕ್ಷತೆ ನಡೆದರೆ, ಶುಕ್ರವಾರ ಮುಂಜಾನೆ 6ಗಂಟೆಗೆ ಶ್ರೀ ವೆಂಕಟೇಶ್ವರ ಪ್ರತಿಷ್ಠಾ ಹೋಮ, ಶ್ರೀ ವೆಂಕಟೇಶ್ವರ ಪ್ರಧಾನ ಹೋಮ, ತತ್ವ ಹೋಮ, ಬ್ರಹ್ಮ ಕಲಶ ಪ್ರತಿಷ್ಠೆ, ಕಲಶ ಪೂಜೆ, ಕಲಶಾಭಿಷೇಕ ಬ್ರಹ್ಮ ಕುಂಭಾಭಿಷೇಕ ನೆರವೇರಿಸಲಾಯಿತು.