Advertisement

ದಾನಿಗಳಿಂದ ಸಕಲ ಸವಲತ್ತು ಪಡೆದ ಬಡಗಕಜೆಕಾರು ಸರಕಾರಿ ಶಾಲೆ

10:58 PM Nov 03, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡಪಲ್ಕೆಯಲ್ಲಿರುವ ಬಡಗಕಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ತರ ದಶಮಾನೋತ್ಸವ ಆಚರಿಸಿ 1904ರಲ್ಲಿ ಕನಪಾಡಿಬೆಟ್ಟು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಿಜನಾರುಗುತ್ತು ಸೇಸಪ್ಪ ಶೆಟ್ಟಿ ಅವರು ನಿವೇಶನ ಒದಗಿಸಿ, ಮುಳಿ ಹುಲ್ಲಿನ ಛಾವಣಿಯಲ್ಲಿ ಸ್ಥಾಪನೆಗೊಂಡ ಈ ಶಾಲೆ ಬಳಿಕ 1974ರಲ್ಲಿ ಆಟದ ಮೈದಾನದೊಂದಿಗೆ ಹೆಂಚಿನ ಛಾವಣಿಯ ಶಾಲೆಯಾಗಿ ಮಾರ್ಪಟ್ಟಿತ್ತು. ಇಲ್ಲಿನ ಹಳೆವಿದ್ಯಾರ್ಥಿಯೂ ಶಿಕ್ಷಕರೂ ಆಗಿದ್ದ ಕುಂಜತ್ತೋಡಿ ಶ್ರಿನಿವಾಸ ಭಟ್‌ ಅವರು 1978ರಲ್ಲಿ ಮಾಡಪಲ್ಕೆಗೆ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಿದರು. 1981ರಲ್ಲಿ ಖಂಡಿಗ ರಾಮಚಂದ್ರ ಪೂಜಾರಿ ಅವರ ಸಹಕಾರದಲ್ಲಿ ಆಟದ ಮೈದಾನ ಸಹಿತ ಶಾಲೆಗೆ 2.90 ಎಕ್ರೆ ಭೂಮಿಯನ್ನು ಮಂಜೂರು ಮಾಡಿಸಿದರು.

ವಿಶೇಷ ಸವಲತ್ತುಗಳು
ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿ ನ್ಯಾಯವಾದಿಯಾಗಿದ್ದ ದಿ| ಎಲ್ಯಣ್ಣ ಪೂಜಾರಿ ಮತ್ತು ಅವರ ಕುಟುಂಬಸ್ಥರು ಪ್ರತಿವರ್ಷ ಶಾಲಾ ಮಕ್ಕಳಿಗೆ ಲೇಖನ ಪುಸ್ತಕ, ಉಚಿತ ಪ್ರವಾಸ, ಪ್ರೊಟೀನ್‌ಯುಕ್ತ ಆಹಾರ ನೀಡುತ್ತಿದ್ದು, ಸಂಪೂರ್ಣ ಮರು ವಿದ್ಯುದ್ದೀಕರಣ, ಸೋಲಾರ್‌ ವಿದ್ಯುತ್‌, ಕೊಳವೆ ಬಾವಿ, ಕಂಪ್ಯೂಟರ್‌, ಜ್ಞಾನ ಚಾವಡಿ ಎಂಬ ಸಭಾಂಗಣ, 7 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ನೀಡಿದ್ದಾರೆ. ಸರಕಾರದಿಂದ ವಿಶಾಲ ಮೈದಾನ, ರಂಗಮಂದಿರ, ರಸ್ತೆಗೆ ಡಾಮರು, ತರಗತಿ ಕೋಣೆ, ಅಕ್ಷರ ದಾಸೋಹ, ಮುಖ್ಯ ಶಿಕ್ಷಕರ ಕೊಠಡಿ, ವಿಶೇಷ ಶೌಚಾಲಯ, ಆವರಣ ಗೋಡೆ, ಮೂತ್ರಾಲಯ, ಶೌಚಾಲಯ, ಕೊಳವೆ ಬಾವಿ ನಿರ್ಮಿಸಲಾಗಿದೆ.

ಮುಖ್ಯ ಶಿಕ್ಷಕರು ಶೀನ ರೈ, ವಾಸುದೇವ ಭಟ್‌, ರಘುಚಂದ್ರ ಚೌಟ, ಶಿವಪ್ಪ ಪೂಜಾರಿ, ರುಕ್ಮಯ ಸಾಲ್ಯಾನ್‌, ಹರಿಣಾಕ್ಷಿ, ಅಂಜಲಿ, ಮೀನಾ ಕುಮಾರಿ, ಶ್ರೀನಿವಾಸ ಭಟ್‌, ವಿಜಯಾಕ್ಷಿ, ಪದ್ಮಾವತಿ ಪಾದೆ ಈ ಶಾಲೆಯನ್ನು ಮುನ್ನಡೆಸಿದ್ದಾರೆ.

ಸುತ್ತಮುತ್ತ ಪಾಂಡವರಕಲ್ಲು, ಪುಂಜಾಲಕಟ್ಟೆ, ಬೆರ್ಕಳ, ತೆಂಕಕಜೆಕಾರು ಸ.ಹಿ.ಪ್ರಾ. ಶಾಲೆ, ಕಕ್ಯಪದವು ಎಲ್‌ಸಿಆರ್‌ ಇಂಡಿಯನ್‌ ಸ್ಕೂಲ್‌, ಮಡಂತ್ಯಾರು ಖಾಸಗಿ ಹಿ.ಪ್ರಾ. ಶಾಲೆಗಳಿದ್ದರೂ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಧ.ಗ್ರಾ. ಯೋಜನೆ ಸಹಕಾರದಲ್ಲಿ ಕೈತೋಟ ನಿರ್ಮಿಸಲಾಗಿದೆ.

Advertisement

ಮುಂದಿನ ಯೋಜನೆಗಳು
ಪ್ರೌಢ ಶಾಲೆ, ಶಾಲಾ ಕೊಠಡಿಗಳ ದುರಸ್ತಿ, ಹೆಚ್ಚುವರಿ ಕೊಠಡಿ, ವಾಚನಾಲಯ ಆಗಬೇಕಾಗಿದೆ.

ಹಿ.ಪ್ರಾ. ಶಾಲೆಯಾಗಿ ಅಭಿವೃದ್ಧಿ ಪದ್ಮಾವತಿ ಎನ್‌. ಪಾದೆ ಅವರು ಮುಖ್ಯ ಶಿಕ್ಷಕರಾಗಿದ್ದಾಗ ಹಿರಿಯ ಪ್ರಾಥಮಿಕ ಶಾಲೆಯಾಗಿ ಅಭಿವೃದ್ಧಿಯಾಯಿತು.ಪ್ರಸ್ತುತ 1ರಿಂದ 8ನೇ ತರಗತಿಯಿದ್ದು, ಶಾಲೆಯಲ್ಲಿ 6 ಶಿಕ್ಷಕರಿದ್ದು, 84 ವಿದ್ಯಾರ್ಥಿಗಳಿದ್ದಾರೆ.

ಶಾಲೆಗೆ ಸೌಲಭ್ಯಗಳನ್ನು ಒದಗಿಸುತ್ತಿರುವ ದಿ| ಎಲ್ಯಣ್ಣ ಪೂಜಾರಿ ಅವರ ಕುಟುಂಬ ಮತ್ತು ದಾನಿಗಳಿಂದ ಶಾಲಾಭಿವೃದ್ಧಿಗೆ ಆಸರೆಯಾಗಿದೆ.
-ಸೀತಾರಾಮ, ಪ್ರಭಾರ ಮುಖ್ಯ ಶಿಕ್ಷಕರು.

ಗ್ರಾಮೀಣ ಪ್ರದೇಶದ ಶಾಲೆ ಯೊಂದು ಇಲ್ಲಿನ ಮಕ್ಕಳಿಗೆ ಜ್ಞಾನದೇಗುಲವಾಗಿದೆ. ಸರಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಊರವರು ಮತ್ತು ಶಿಕ್ಷಕರ ಮೇಲಿದೆ.
-ಶ್ರೀನಿವಾಸ ಭಟ್‌ ಕುಂಜತ್ತೋಡಿ,
ಹಳೆ ವಿದ್ಯಾರ್ಥಿ,ನಿವೃತ್ತ ಮುಖ್ಯ ಶಿಕ್ಷಕರು.

ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next