Advertisement
ಉಚ್ಚಿಲ ಪೇಟೆಯು ಜನನಿಬಿಡ ಸ್ಥಳವಾಗಿದ್ದು, ವೇಗದೂತ ಬಸ್ಸು ತಂಗುದಾಣಗಳ ಸಹಿತ ಹಲವು ವ್ಯಾಪಾರ ಮಳಿಗೆಗಳನ್ನು ಹೊಂದಿರುವ ಪ್ರಮುಖ ಪೇಟೆಯಾಗಿದೆ. ದೂರದೂರಿಗೆ ಸಹಿತ ಉಡುಪಿ-ಮಂಗಳೂರು ಭಾಗದತ್ತ ತೆರಳುವ ಮಂದಿ ಸಹಿತ ಪಣಿಯೂರು – ಎಲ್ಲೂರು – ಮುದರಂಗಡಿಗೆ ಇಲ್ಲಿಂದಲೇ ಸಂಪರ್ಕ ರಸ್ತೆಯೂ ಇದೆ. ಸಾವಿರಾರು ಜನರು ಉಚ್ಚಿಲ ಪೇಟೆಯನ್ನೇ ತಮ್ಮ ಕೆಲಸ ಕಾರ್ಯಗಳಿಗೆ ಆಶ್ರಯಿಸಿದ್ದಾರೆ. ಹಾಗಾಗಿ ಇಲ್ಲಿ ಸಾರ್ವಜನಿಕ ಸುರಕ್ಷತೆ ಅಷ್ಟೇ ಮುಖ್ಯವಾಗಿದೆ. ಸುಗಮ ಸಂಚಾರಕ್ಕಾಗಿ ಹೆದ್ದಾರಿ ಬದಿಯ ಸರ್ವಿಸ್ ಸಂಪರ್ಕ ರಸ್ತೆಯ ರಚನೆಯು ಅತ್ಯವಶ್ಯವಾಗಿದೆ.
ಮರೆತ ರಾ. ಹೆ. ಅ.ಪ್ರಾಧಿಕಾರ
2017ರ ಅ. 23ರಂದು ಬಡಾಗ್ರಾಮ ಪಂಚಾಯತ್ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಮುಖ್ಯ ನಿರ್ದೇಶಕ ವಿಜಯ ಸ್ಯಾಮ್ಸನ್ ಉಚ್ಚಿಲ ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಕಿ. ಮೀ. ಪ್ರಸ್ತಾವನೆ ಕಳುಹಿಸಲಾಗಿದ್ದ ಸರ್ವೀಸ್ ರಸ್ತೆಯನ್ನು ಗ್ರಾಮಸ್ಥರ ಬೇಡಿಕೆಯಂತೆ 3 ಕಿ. ಮೀ.ಗೆ ಹೆಚ್ಚಿಸಿ 1 ತಿಂಗಳೊಳಗಾಗಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದಿದ್ದರು. ಆದರೆ ಯಾವುದೂ ಕಾರ್ಯರೂಪಕ್ಕಿಳಿದಿಲ್ಲ. ಅದಮಾರು ತಿರುವಿನಿಂದ ಮೂಳೂರು ಕಾರ್ಪೋರೇಶನ್ ಬ್ಯಾಂಕ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಅಂದು ಒತ್ತಾಯಿಸಲಾಗಿತ್ತು. ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಬಳಿ ಅಂಡರ್‌ಪಾಸ್ ನಿರ್ಮಿಸಲು ಆಗ್ರಹಿಸಲಾಗಿತ್ತು.
Related Articles
2017ರ ಅ. 25 ರಂದು ಸಂಜೆಯ ವೇಳೆಗೆ ಉಚ್ಚಿಲ ಭಾಗದ ಸಾರ್ವಜನಿಕರ ಅನುಕೂಲದ ಬೇಡಿಕೆಗಳ ಪರಿಶೀಲನೆ ನಡೆಸಲು ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಡಾ | ಸಂಜೀವ ಎಂ. ಪಾಟೀಲ್, ಎ. ಸಿ. ಶಿಲ್ಪಾ ನಾಗ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜತೆ ಭೇಟಿ ನೀಡಿದ್ದರು.
Advertisement
ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅವರು ಎನ್. ಎಚ್. ಎ. ಐ., ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರೊಡನೆ ಮಾತುಕತೆ ನಡೆಸಿ ವಿವರಣೆ ಸಂಗ್ರಹಿಸಿ ಹೆದ್ದಾರಿಯ ಸ್ಥಳ ವೀಕ್ಷಣೆ ನಡೆಸಿದರು. ಆದರೆ ಯಾವ ಕಾಮಗಾರಿಗಳೂ ಈವರೆಗೆ ನಡೆದಿಲ್ಲ.
ಕೇವಲ ಬಸ್ ಬೇ ನಿರ್ಮಾಣ ಮಾತ್ರವನ್ನೇ ಉಚ್ಚಿಲ ಪೇಟೆ ಕಂಡಿದೆ. ಹೆದ್ದಾರಿ ಪಕ್ಕದಲ್ಲಿ ಎರಡು ಶಾಲೆಗಳು, ಸಭಾಭವನಗಳು, ದೇವಾಲಯಗಳು, ಚರ್ಚ್, ಮಸೀದಿ, ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಜನನಿಬಿಡ-ವಾಹನ ದಟ್ಟಣೆಯ ಪ್ರದೇಶವಾಗಿರುವ ಉಚ್ಚಿಲ ಭಾಗದಲ್ಲಿ ಅಧಿಕಾರಿಗಳು ನೀಡಿದ ಭರವಸೆಗಳಿಗೆ ಇದೀಗ ಸುಮಾರು ಒಂದೂವರೆ ವರ್ಷಗಳಷ್ಟು ಕಾಲ ಕಳೆದು ಹೋಗಿದೆ. ಅಪಘಾತಗಳಸರಮಾಲೆಯೇ ಹೆದ್ದಾರಿ ಭಾಗದಲ್ಲಿ ನಡೆದಿದೆ. ಸಾವುಗಳೂ ಸಂಭವಿಸಿದೆ. ಆದರೆ ಸಂಬಂಧಪಟ್ಟ ಯಾವುದೇ ಇಲಾಖೆಯು ಈ ಬಗ್ಗೆ ಗಮನ ಹರಿಸುತ್ತಿಲ್ಲ. ತಹಶೀಲ್ದಾರರಿಗೆ ಸೂಚಿಸಲಾಗಿದೆ
ಮುಂದಿನ ವಾರದೊಳಗಾಗಿ ಜಿಲ್ಲೆಯ ಶಿರೂರಿನಿಂದ ಹೆಜಮಾಡಿಯವರೆಗೆ 68 ಗ್ರಾಮಗಳಲ್ಲಿ ಹಾದು ಹೋಗುತ್ತಿರುವ ರಾ.ಹೆ. ಚತುಷ್ಪಥದ ಮಿಕ್ಕುಳಿದ ಕಾಮಗಾರಿಗಳೇನು? ಎಲ್ಲೆಲ್ಲಿ ಏನೇನು ಕಾಮಗಾರಿಯ ಕೊರತೆಗಳಿವೆ ಎನ್ನುವುದನ್ನು ಪಟ್ಟಿಮಾಡಿಕೊಂಡು ವರದಿ ಮಾಡಲು ಈಗಾಗಲೇ ಆಯಾಯ ತಹಶೀಲ್ದಾರರಿಗೆ ಸೂಚಿಸಲಾಗಿದೆ. ಈ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತಾಗಿ ವಿಸ್ತೃತ ಸಭೆಯನ್ನು ನಡೆಸಲಾಗುವುದು.
– ಡಾ|ಎಸ್.ಎಸ್.ಮಧುಕೇಶ್ವರ್,
ಕುಂದಾಪುರ ಸಹಾಯಕ ಕಮಿಷನರ್