Advertisement

ಕೀಳು ಭಾಷೆ ಬಳಕೆ: ಸ್ವಯಂ ನಿಯಂತ್ರಣವೊಂದೇ ಪರಿಹಾರ

01:19 AM May 02, 2023 | Team Udayavani |

ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರ ಬರುತ್ತಿದ್ದಂತೆ ಪ್ರಚಾರ ಸಭೆಗಳು, ರೋಡ್‌ಶೋ ಭರ್ಜರಿಯಾಗಿ ನಡೆಯುತ್ತಿವೆ. ಜತೆಗೆ ಚುನಾವಣ ಕಾವು ಏರ ತೊಡ ಗಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ಮಾತಿನ ಚಾಟಿಗಳು ಎಲ್ಲೇ ಮೀರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಿದ್ದಾಂತಗಳು, ಕಾರ್ಯಕ್ರಮಗಳು, ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತಯಾಚಿಸುವುದು ಆರೋಗ್ಯಕರ ರಾಜಕಾರಣದ ಲಕ್ಷಣ. ಕರ್ನಾಟಕ ಈ ವಿಷಯದಲ್ಲಿ ಕೆಲವು ದಶಕಗಳ ಹಿಂದೆ ದೇಶದ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿತ್ತು. ಮೌಲ್ಯಾಧಾರಿತ ರಾಜಕಾರಣಕ್ಕೆ ಕರ್ನಾಟಕ ಮಾದರಿ ಆಗಿತ್ತು. ಚುನಾವಣೆಗಳು ಕಳೆದಂತೆ ಮೌಲ್ಯಗಳು, ಮೌಲ್ಯಾಧಾರಿತ ರಾಜಕಾರಣಿಗಳು ಮರೆಯಾದರು. ಹೀಗಾಗಿ ಚುನಾವಣ ಕಣ ಕುಸ್ತಿ ಅಖಾಡದಂತೆ ಆಗಿದೆ.

Advertisement

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಮತಬೇಟೆ ಸಂದರ್ಭದಲ್ಲಿ ಆಡಿರುವ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿವೆ. ಮಾತಿಗೂ ಮಿತಿ ಇದೆ ಎಂಬುದನ್ನು ಮರೆತಿರುವ ನಾಯಕರು ವೈಯ ಕ್ತಿಕ ನಿಂದನೆ ಯಲ್ಲಿ ತೊಡಗಿರುವುದು ಆಕ್ಷೇಪಾರ್ಹ ಮಾತ್ರವಲ್ಲ ಖಂಡನೀಯ ಕೂಡ. ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ನಿಂದಿಸುವುದು ಶೋಭೆ ತರು ವುದಿಲ್ಲ. ವ್ಯಕ್ತಿಗಿಂತ ಹುದ್ದೆಗೂ ಗೌರವ ಕೊಡಬೇಕು. ಕೆಲವೊಮ್ಮೆ ಬಾಯಿತಪ್ಪಿ ಆಡುವ ಮಾತಿಗೆ ಕ್ಷಮೆ ಇದೆ. ಆದರೆ ನಿಂದಿಸುವ ಉದ್ದೇಶದಿಂದಲೇ ಮಾತನಾಡಿದರೆ ಅದಕ್ಕೆ ಕ್ಷಮೆ ಇರುವುದಿಲ್ಲ. ಈಗ ಕರ್ನಾಟಕ ರಾಜಕಾರಣದಲ್ಲಿ ಆಗುತ್ತಿರುವುದೇ ಇದು. “ನೀನು ಬೈಯ್ದರೆ ನಾನು ಬೈಯ್ಯುತ್ತೇನೆ’ ಎಂದು ಹಠಕ್ಕೆ ಬಿದ್ದವರಂತೆ ಬೈಗುಳಗಳ ಸುರಿ ಮಳೆಯಲ್ಲಿ ನಿರತರಾಗಿದ್ದಾರೆ. ಪ್ರಧಾನಿ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ ಖರ್ಗೆ, ಪ್ರಿಯಾಂಕ ಖರ್ಗೆ ಕುರಿತು ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯನಾಥ್‌, ಲಿಂಗಾಯತ ಸಮುದಾಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ, ಟಿಪ್ಪು ಹಾಗೂ ಕಾಂಗ್ರೆಸ್‌ ನಾಯಕರ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಬಳಸಿರುವ ಪದಗಳು ಯಾರೂ ಒಪ್ಪು ವಂತಹದ್ದಲ್ಲ. ವೈಯಕ್ತಿಕ ನಿಂದನೆ ಜತೆಗೆ ಸಮಾಜದಲ್ಲಿ ದ್ವೇಷ ಭಾವನೆ ಕೆರಳಿಸು ವಂತೆಯೂ ಮಾತುಗಳು ನಾಲಿಗೆಯಿಂದ ಹೊರಳಿ ಬರುತ್ತಿವೆ. ಆಡಿದ ಮಾತಿಗೆ ವ್ಯಕ್ತವಾಗುವ ಆಕ್ರೋಶಕ್ಕೆ ಆ ರೀತಿಯ ಹೇಳಿಕೆ ನೀಡಿಯೇ ಇಲ್ಲ, ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ, ತಿರುಚಲಾಗಿದೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿ ಸುತ್ತಿರುವುದು ಹೊಸದೇನೂ ಅಲ್ಲ. ಎದುರಾಳಿಗಳಿಂದ ಆಕ್ರಮಣಕಾರಿ ಟೀಕೆಗಳು ವ್ಯಕ್ತವಾದ ಬಳಿಕ ಮಾಧ್ಯಮಗಳತ್ತ ಬೊಟ್ಟು ತೋರಿಸುವುದು ಈಗಿನ ರಾಜಕಾರಣಿಗಳ ನಡೆ ಕೂಡ ಸರಿಯಲ್ಲ. ಹೀಗಾಗಿ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಟೀಕೆಗಳನ್ನು ಸಹಿಸಿಕೊಳ್ಳಬೇಕು, ಆರೋಗ್ಯಕರ ಟೀಕೆ, ನಾಲಗೆ ಮೇಲೆ ಹಿಡಿತ ವಿಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅವರಾಡುವ ಮಾತಿನಿಂದ ಸಮಾಜದಲ್ಲಿ ಅಶಾಂತಿ, ಸಂಘರ್ಷಕ್ಕೆ ಅವರೇ ನೇರ ಹೊಣೆಗಾರರಾಗುತ್ತಾರೆ. ಈ ಬಗ್ಗೆ ಯಾವುದೇ ನಿರ್ಬಂಧಗಳನ್ನು ಚುನಾವಣ ಆಯೋಗ ಅಥವಾ ಇತರೆ ಶಾಸನಬದ್ಧ ಪ್ರಾಧಿ ಕಾರಗಳು ಹಾಕಲು ಸಾಧ್ಯವಿಲ್ಲ, ಸ್ವಯಂ ನಿಯಂತ್ರಣವೇ ಇದಕ್ಕೆ ಪರಿಹಾರ.

ಚುನಾವಣೆ ಹೊರತಾಗಿಯೂ ವೈಯಕ್ತಿಕ ಸಂಬಂಧ, ಬಾಂಧವ್ಯಗಳು ಸಮಾಜ ದಲ್ಲಿ ಅತೀ ಮುಖ್ಯ ಎಂಬ ಸಂದೇಶವನ್ನು ಮುಂದಿನ ಪೀಳಿಗೆಗೆ ಸಾರುವ ಆವಶ್ಯಕತೆ ಇದೆ. ಯಾರನ್ನೋ ಮೆಚ್ಚಿಸಲು ಅಥವಾ ಇನ್ಯಾರನ್ನೋ ನಿಂದಿಸಲು ಬಳಸುತ್ತಿರುವ ಪದ ಪ್ರಯೋಗಗಳ ಬಗ್ಗೆಯೂ ನಮ್ಮ ರಾಜಕಾರಣಿಗಳು ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ. ಇನ್ನೊಬ್ಬರನ್ನು ಟೀಕಿಸಲು ಬಳಸಿದ ಪದಗಳು ತಮಗೆ ತಿರುಗುಬಾಣ ವಾದಾಗ ಆಗುವ ಬೇಸರ, ನೋವು ಎಲ್ಲಕ್ಕಿಂತ ಮುಖ್ಯವಾಗಿ “ಪರಿಣಾಮ’ ಗಳನ್ನು ಗಮನದಲ್ಲಿಟ್ಟುಕೊಂಡು ಸಭ್ಯ ರೀತಿಯಲ್ಲಿಯೇ ಟೀಕೆಗಳ ಮಾಡಿದರೆ ಅದು ಸ್ವೀಕಾರಾರ್ಹ. ಮಾತನಾಡಿ ಯೋಚಿಸುವ ಬದಲು ಯೋಚಿಸಿ ಮಾತನಾಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next