ಬೆಂಗಳೂರು: ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಯಶಸ್ಸಿಗಾಗಿ ಪೂರ್ವಭಾವಿ ಸಭೆಗಳು ಸೆಪ್ಟೆಂಬರ್ 27ರಿಂದ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿವೆ ಎಂದು ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇದಕ್ಕಾಗಿ ಪಕ್ಷದ ಮುಖಂಡರ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ನೇತೃತ್ವದ ಮೊದಲ ತಂಡವು ಸೆ.27ರಂದು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ, 30ರಂದು ಚಾಮರಾಜನಗರ, ಮೈಸೂರು ನಗರ ಮತ್ತು ಗ್ರಾಮಾಂತರ, ಅಕ್ಟೋಬರ್ 1ರಂದು ಮಂಡ್ಯ, ಹಾಸನ ಜಿಲ್ಲೆಗಳಲ್ಲಿ, ಅ.3ರಂದು ಬೀದರ್ ಜಿಲ್ಲೆಯಲ್ಲಿ ಸಭೆ ನಡೆಸಲಿದೆ ಎಂದರು.
ಎರಡನೇ ತಂಡದ ನೇತೃತ್ವವನ್ನು ಇಂಧನ ಸಚಿವ ಸುನಿಲ್ ಕುಮಾರ್ ವಹಿಸಲಿದ್ದಾರೆ. ಆ ತಂಡವು ಸೆ.27ರಂದು ದಕ್ಷಿಣ ಕನ್ನಡ, ಉಡುಪಿ, ಅಕ್ಟೋಬರ್ 3ರಂದು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಭೆ ನಡೆಸಲಿದೆ.
3ನೇ ತಂಡವು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸೆ. 28ರಂದು ಕೋಲಾರ, ಚಿಕ್ಕಬಳ್ಳಾಪುರ, ಸೆ.29 ರಂದು ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆಗಳಿಗೆ ಸಂಬಂಧಿಸಿದ ಸಭೆಗಳನ್ನು ನಡೆಸಲಿದೆ ಎಂದು ವಿವರಿಸಿದರು.
ಸಚಿವ ಬೈರತಿ ಬಸವರಾಜ ನೇತೃ ತ್ವದ 4ನೇ ತಂಡವು ಅಕ್ಟೋಬರ್ 1ರಂದು ಚಿತ್ರದುರ್ಗ, ದಾವಣಗೆರೆ, ಅ.2ರಂದು ಹಾವೇರಿ, ಹುಬ್ಬಳ್ಳಿ- ಧಾರವಾಡ, ಅ.3ರಂದು ತುಮಕೂರು-ಮಧುಗಿರಿ ಸಂಘಟನ ಜಿಲ್ಲೆಗಳಲ್ಲಿ ಸಭೆಗಳನ್ನು ಏರ್ಪಡಿಸಲಿದೆ.
ಸಚಿವ ಆನಂದ್ ಸಿಂಗ್ ನೇತೃತ್ವದ 5ನೇ ತಂಡವು ಅಕ್ಟೋಬರ್ 1ರಂದು ವಿಜಯನಗರ, ಬಳ್ಳಾರಿ, ಅ.3ರಂದು ಬೆಳಗಾವಿ ಮತ್ತು ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಲಿದೆ ಎಂದು ತಿಳಿಸಿದರು.