Advertisement

ಸುಗ್ಗಿ ಉತ್ಸವದ ಹಿನ್ನೆಲೆ : ಕೋವಿಗಳಿಗೆ ವಿಶೇಷ ಪೂಜೆ

10:02 PM Apr 22, 2019 | sudhir |

ಮಡಿಕೇರಿ: ಸೋಮವಾರಪೇಟೆ ಸಮೀಪದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಖ್ಯಾತಿಯಾಗಿರುವ ನಗರಳ್ಳಿ ಸುಗ್ಗಿ ಉತ್ಸವವು ಎ.29ರಂದು ನಡೆಯಲಿದ್ದು, ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ದೇವಿಯ ತವರು ಎಂದೇ ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ರವಿವಾರ ವಿಶೇಷ ಪೂಜೆ ನಡೆಯಿತು.

Advertisement

ಅನಾದಿ ಕಾಲದಿಂದಲೂ ನಡೆದು ಕೊಂಡು ಬಂದಿರುವ ಸಂಪ್ರದಾ ಯದಂತೆ ಚಾವಡಿ ಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದುಕುಗಳನ್ನು ತಂದಿಟ್ಟು ಸಾಮೂಹಿಕವಾಗಿ ಪೂಜೆ ಮಾಡಲಾಯಿತು. ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಿದರು.

ಪ್ರಮುಖ ಸುಗ್ಗಿ ಉತ್ಸವವು ಎಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ನಗರಳ್ಳಿ ಗ್ರಾಮದ ಸುಗ್ಗಿಕಟ್ಟೆ ಹಾಗೂ 12 ದೇವರ ಬನದಲ್ಲಿ ವಿವಿಧ ಆಚರಣೆಗಳೊಂದಿಗೆ ನಡೆಯುವುದು ವಾಡಿಕೆ.

ಈ ಆಚರಣೆಯಲ್ಲಿ ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ ಗ್ರಾಮ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟಡಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬಿಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಒಡಳ್ಳಿ ಗ್ರಾಮದ ಎಲ್ಲ ವರ್ಗದ ಜನರು ಒಗ್ಗೂಡಿ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಸುಗ್ಗಿ ಆಚರಣೆಯಲ್ಲಿ 12 ಬನ-ರಂಗಗಳಿದ್ದು ಸುಗ್ಗಿಯ ಕೊನೆಯ ಮೂರು ರಂಗಗಳಾದ ಕಂಬತಳೆ ರಂಗ, ಸುಗ್ಗಿ ರಂಗ, ಬಿಲ್ಲು ರಂಗ ಎಂಬಲ್ಲಿ ಸುಗ್ಗಿಯ ವಿಶೇಷತೆಗಳನ್ನು ಸಾರುವ ಆಚರಣೆಗಳು ನಡೆಯುತ್ತವೆ.
ಪ್ರತಿವರ್ಷದ ಸುಗ್ಗಿಯಲ್ಲಿ 9 ಮಂದಿ ದೇವರ ಒಡೆಕಾರರನ್ನು ನೇಮಿಸಲಾಗುತ್ತದೆ.

Advertisement

ಕೂತಿನಾಡು ಶ್ರೀ ಸಬ್ಬಮ್ಮ ದೇವಿ ಸಮಿತಿಯ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕೂತಿ ಗ್ರಾಮದ ಅಧ್ಯಕ್ಷ ಡಿ.ಎ. ಪರಮೇಶ್‌, ಉಪಾಧ್ಯಕ್ಷ ಯು.ಕೆ. ಶಿವರಾಜ್‌ ಅರ್ಚಕ ಅನಂತ ರಾಮ್‌, ಬಿ.ಪಿ. ಪ್ರದೀಪ್‌ ಕುಮಾರ್‌, ಎಚ್‌.ಎಸ್‌. ದಿವಾಕರ್‌, ಉಮೇಶ್‌, ದಯಾನಂದ, ಧರ್ಮಪಾಲ, ರೇವಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next