Advertisement

ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಅನುಮತಿ ಸರಿಯಲ್ಲ-ಹೋರಾಟಕ್ಕೆ ಸಜ್ಜು: ಹಿರೇಮಠ

05:44 PM Jun 19, 2024 | Team Udayavani |

ಧಾರವಾಡ: ಅಕ್ರಮ ಗಣಿಗಾರಿಕೆಯಿಂದ ಬೆಂಡಾಗಿರುವ ಬಳ್ಳಾರಿಯಲ್ಲಿ ಕೇಂದ್ರ-ರಾಜ್ಯ ಸರಕಾರಗಳೇ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಈ ಹಿಂದೆ ಅವ್ಯಾಹತವಾಗಿ ನಡೆದಿತ್ತು. ಸುಪ್ರೀಂ
ಕೋರ್ಟ್‌ ಮಧ್ಯೆ ಪ್ರವೇಶಿಸಿ ಅರಣ್ಯ ಸಂರಕ್ಷಿಸುವ ಕೆಲಸ ಮಾಡಿತ್ತು. ಆದರೆ ಈ ಸಂರಕ್ಷಿತ ಅರಣ್ಯ ಪ್ರದೇಶವು ಈಗ ಗಂಡಾಂತರಕ್ಕೆ ಸಿಲುಕಿದೆ ಎಂದರು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುಮಾರಸ್ವಾಮಿ ಭಾಗದ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿನ ಗಣಿಗಾರಿಕೆಯನ್ನು ಕೆಐಒಸಿಎಲ್‌ ಕಂಪನಿಗೆ ಗುತ್ತಿಗೆ ನೀಡಲಾಗುತ್ತಿದೆ.

ಈ ಕಂಪನಿಗೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ಗಣಿಗಾರಿಕೆ ನಿಷೇಧಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದರೂ ಅದೇ ಕಂಪನಿಗೆ ಗುತ್ತಿಗೆ ನೀಡಲಾಗುತ್ತಿದೆ. ಜತೆಗೆ ವಿಶ್ವೇಶ್ವರಯ್ಯ ಐರನ್‌ ಆ್ಯಂಡ್‌ ಸ್ಟೀಲ್‌ ಕಂಪನಿಗೆ ಗುತ್ತಿಗೆ ನೀಡುವುದನ್ನು ರದ್ದುಪಡಿಸಬೇಕು. ಇಲ್ಲವಾದರೆ, ಸಂಡೂರು ತಾಲೂಕಿನ ಕುಮಾರಸ್ವಾಮಿ ಭಾಗದಲ್ಲಿ 450 ಎಕರೆ ಪ್ರದೇಶದ 99330 ಮರಗಳ ಮಾರಣಹೋಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

29 ಸಾವಿರ ಮರ ನಾಶ: ಅದೇ ರೀತಿ ಮೆ| ವಿಐಎಸ್‌ಎಲ್‌/ ಎಸ್‌ಎಐಎಲ್‌ ಕಂಪನಿಗೆ ನೀಡಿರುವ ದೇವದಾರು ಪ್ರದೇಶವು ದಟ್ಟ ಹರಿದ್ವರ್ಣ ಅರಣ್ಯಗಳಿಂದ ಕೂಡಿದ್ದು,  ಇಲ್ಲಿ 150 ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು ಸರಕಾರ ಸಿದ್ಧವಾಗಿದೆ. ಇದರಿಂದ 29,400 ಮರಗಳು ಗಣಿಗಾರಿಕೆಗೆ ಆಹುತಿಯಾಗುತ್ತವೆ. ಆದ್ದರಿಂದ ಈ ಗಣಿಗಾರಿಕೆಯನ್ನು ರದ್ದುಪಡಿಸಬೇಕು ಎಂದು
ಒತ್ತಾಯಿಸಿದರು. ಈ ಹಿಂದೆ ನಡೆದ ಅಕ್ರಮ ಗಣಿಗಾರಿಕೆಯಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಅನೇಕರು ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಅದೇ ಮರುಕಳಿಸಬಾರದು.

ಅಪರೂಪದ ಜೈವಿಕ ವೈವಿಧ್ಯತೆ ಇರುವ ಅರಣ್ಯ ಪ್ರದೇಶ ಅದಾಗಿದೆ. ಇದಕ್ಕೆ ನಾವು ಕಪ್ಪತಗುಡ್ಡದ ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಸಿಎಂ ಹಾಗೂ ಕಾನೂನು ಸಚಿವರನ್ನೂ ಭೇಟಿ ಮಾಡುತ್ತೇವೆ. ಇದಲ್ಲದೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರು ಸಹ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಅವರನ್ನು ಭೇಟಿಯಾಗಿ ಸಮಗ್ರ ಚಿತ್ರಣ ನೀಡುತ್ತೇವೆ. ಸುಪ್ರೀಂ ಕೋರ್ಟ್‌ ನ್ಯಾಯ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸವಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಂಡು ಹೋರಾಟಕ್ಕೆ ಸಜ್ಜಾಗಬೇಕು ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next