ಕುಮಟಾ: ಪರಿಸರವಾದಿಗಳ ವಿರೋಧಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟೋ ಬೃಹತ ಕೈಗಾರಿಕೆಗಳು ಸ್ಥಾಪನೆಯಾಗದೆ ಹಿನ್ನಡೆಗೆ ಕಾರಣವಾಗಿದೆ. ಜಿಲ್ಲೆಯ ಕೈಗಾರಿಕಾ ಕ್ಷೇತ್ರ ಹಿಂದುಳಿದಿದೆ ಎಂದು ರಾಜ್ಯ ಮೀನುಗಾರಿಕೆ ನಿಗಮದ ಅಧ್ಯಕ್ಷ ರಾಜೇಂದ್ರ ನಾಯಕ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಹವ್ಯಕ ಸಭಾಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಉದ್ಯೋಗ ಮಿತ್ರ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ, ಕಾನ್ ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ, ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗ ಸಭೆಯ ಪ್ರಯುಕ್ತ ಗುರುವಾರ ನಡೆದ ಉತ್ತರ ಕನ್ನಡದ ರೋಡ್ ಶೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಹಾಗೂ ಕೆಲ ಬೃಹತ್ ಕೈಗಾರಿಕೆಯನ್ನು ತರಲು ಸಾಕಷ್ಟು ಅವಕಾಶಗಳಿದ್ದರೂ ಪರಿಸರವಾದಿಗಳ ವಿರೋಧದ ಕಾರಣಕ್ಕೆ ಸಾಕಷ್ಟು ಹಿನ್ನಡೆಯಾಗಿದ್ದು ಸತ್ಯ. ಜಿಲ್ಲೆಯ ಉತ್ತಮ ಶ್ರೇಷ್ಠ ಪರಿಸರ ಒಂದು ರೀತಿ ವರವೂ ಹೌದು, ಆದರೆ ಬೃಹತ್ ಕೈಗಾರಿಕೆಗಳ ಅನುಷ್ಠಾನಕ್ಕೆ ಶಾಪವೂ ಆದಂತಾಗಿದೆ. ಪರಿಸರ ಪೂರಕ ಕೈಗಾರಿಕೆಗಳೂ ಅನುಷ್ಠಾನವಾಗುತ್ತಿಲ್ಲ.
ಜಿಲ್ಲೆಗೆ ಕೈಗಾರಿಕೆಗಳು ಬಂದಿದ್ದರೆ ಇಲ್ಲಿನ ಶಿಕ್ಷಣ ಪಡೆದ ಯುವ ಜನತೆಗೆ ಇಲ್ಲಿಯೇ ಉದ್ಯೋಗ ಸಾಧ್ಯವಾಗುತ್ತಿತ್ತು. ಅಂಕೋಲಾಕ್ಕೆ ಒಮ್ಮೆ ಬಂದಿದ್ದ ಟಾಟಾ ಸ್ಟೀಲ್ ಕಂಪನಿಯನ್ನು ಡೋಂಗಿ ಪರಿಸರವಾದಿಗಳು ವಿರೋಧಿಸಿದ್ದರು. ಒಂದೊಮ್ಮೆ ಆ ಕಂಪನಿ ಅಂಕೋಲಾದಲ್ಲಿ ಸ್ಥಾಪನೆಯಾಗಿದ್ದರೆ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿತ್ತು ಎಂದರು.
ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣ ಪಡೆದ ಯುವಕರಿಗೆ ಈ ಜಿಲ್ಲೆಯಲ್ಲೇ ಉದ್ಯೋಗ ಅವಕಾಶಗಳಿಲ್ಲ. ನಿಜವಾಗಿಯೂ ಪರಿಸರಕ್ಕೆ ತೊಂದರೆಯಾಗುವಲ್ಲಿ ನಾವೂ ಹೋರಾಡುತ್ತೇವೆ. ಆದರೆ ಸ್ವಾರ್ಥಕ್ಕಾಗಿ ಪರಿಸರದ ನೆಪವೊಡ್ಡಿ ಜಿಲ್ಲೆಯ ಉನ್ನತಿಗೆ ಹಿನ್ನಡೆಯಾಗಿರುವುದು ವಿಷಾದನೀಯ ಎಂದರು. ತಾಪಂ ಅಧ್ಯಕ್ಷ ವಿಜಯಾ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ರತ್ನಾಕರ ನಾಯ್ಕ, ಸಹಾಯಕ ಆಯುಕ್ತ ಲಕ್ಷಿಪ್ರಿಯಾ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಜಿ. ಹೆಗಡೆ ಕಡೇಕೋಡಿ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಿ.ವಿ. ಜೋಶಿ, ಬಸವರಾಜ್ ಜವಳಿ, ಅರುಣ ಪಡಿಯಾರ್ ಮತ್ತಿತರರು ಹಾಜರಿದ್ದರು.
ಜಂಟಿ ನಿರ್ದೇಶಕ ರಮಾನಂದ ನಾಯಕ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ವಿಸ್ತರಣಾಧಿಕಾರಿ ನಾಗರಾಜ ನಾಯಕ
ನಿರ್ವಹಿಸಿದರು.