ಕಳೆದ ಎರಡು ವರ್ಷಗಳಿಂದ ನಟ ಪ್ರಜ್ವಲ್ ದೇವರಾಜ್ ಅವರನ್ನು ತೆರೆಮೇಲೆ ನೋಡೋದು ಅಪರೂಪವಾಗಿದೆ ಎನ್ನುತ್ತಿದ್ದ ಪ್ರೇಕ್ಷಕರ ಮುಂದೆ, ಪ್ರಜ್ವಲ್ ಈ ವರ್ಷದಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಬರಲು ತಯಾರಿ ನಡೆಸುತ್ತಿದ್ದಾರೆ.
ಹೌದು, “ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ನಂತರ ನಟ ಪ್ರಜ್ವಲ್ ದೇವರಾಜ್ “ಅನಂತು ವರ್ಸಸ್ ನುಸ್ರತ್’, “ಯದಾ ಯದಾ ಹೀ ಧರ್ಮಸ್ಯ’ ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಕಳೆದ ಎರಡು ವರ್ಷಗಳಿಂದ ಪ್ರಜ್ವಲ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಬಿಗ್ ಸ್ಕ್ರೀನ್ ಮೇಲೆ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಹಾಗಂತ ಪ್ರಜ್ವಲ್ ದೇವರಾಜ್ ಕೈಯಲ್ಲಿ ಯಾವ ಚಿತ್ರಗಳು ಇಲ್ಲ ಅಂತಲ್ಲ. ಪ್ರಜ್ವಲ್ ದೇವರಾಜ್ ಕೈಯಲ್ಲಿ ಒಂದರ ಹಿಂದೊಂದು ಚಿತ್ರಗಳಿದ್ದರೂ, ಯಾವುದೂ ತೆರೆಗೆ ಬಂದಿರಲಿಲ್ಲವಷ್ಟೆ.
ಈ ವರ್ಷದ ಆರಂಭದಲ್ಲಿಯೇ ಪ್ರಜ್ವಲ್ ದೇವರಾಜ್ “ಜಂಟಲ್ ಮನ್’ ಚಿತ್ರದ ಮೂಲಕ ಬಿಗ್ ಎಂಟ್ರಿಕೊಡುವ ತಯಾರಿಯಲ್ಲಿದ್ದಾರೆ. ಅದಾದ ಬಳಿಕ “ಇನ್ಸ್‌ಪೆಕ್ಟರ್ ವಿಕ್ರಂ’, “ಅರ್ಜುನ್ ಗೌಡ’, “ದಿಲ್ ಕಾ ರಾಜಾ’, “ವೀರಂ’ ಹೀಗೆ ಐದಾರು ಚಿತ್ರಗಳು ಪ್ರಜcಲ್ ಕೈಯಲ್ಲಿದ್ದು, ಇದರಲ್ಲಿ ಬಹುತೇಕ ಚಿತ್ರಗಳು ಬಿಡುಗಡೆಯ ಹಂತದಲ್ಲಿದ್ದು, ಇನ್ನೇನು ತೆರೆ ಕಾಣಬೇಕಷ್ಟೆ. ಹಾಗಾಗಿ ಈ ವರ್ಷ ಪ್ರಜ್ವಲ್ ಒಂದರ ಹಿಂದೊಂದು ಚಿತ್ರಗಳ ಮೂಲಕ ವರ್ಷ ಪೂರ್ತಿ ಪ್ರೇಕ್ಷಕರ ಮುಂದೆ ಬರುತ್ತಲೇ ಇರುವ ವಿಶ್ವಾಸದಲ್ಲಿದ್ದಾರೆ.
ಸದ್ಯ “ಜಂಟಲ್ ಮನ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿರುವ ಪ್ರಜ್ವಲ್ ದೇವರಾಜ್, ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್‌ಲುಕ್, ಆಡಿಯೋ ಬಿಡುಗಡೆಯಾಗುತ್ತಿದ್ದು, ಸೋಮವಾರ (ಜ.5) ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಒಟ್ಟಾರೆ “ಜಂಟಲ್ ಮನ್’ ನಿಧಾನವಾಗಿ ನೋಡುಗರ ಗಮನ ಸೆಳೆಯುತ್ತಿದ್ದು, ಇದೇ ಜನವರಿ ಕೊನೆವಾರ ಚಿತ್ರ ತೆರೆಗೆ ಬರುತ್ತಿದೆ.
“ಜಂಟಲ್ ಮನ್’ ಚಿತ್ರದ ನಂತರ , “ಇನ್ಸ್‌ಪೆಕ್ಟರ್ ವಿಕ್ರಂ’, “ಅರ್ಜುನ್ ಗೌಡ’ ಹೀಗೆ ಒಂದೊಂದೆ ಚಿತ್ರಗಳು ತೆರೆಗೆ ಬರುವ ಸಾಧ್ಯತೆಯಿದ್ದು. ಏನಿಲ್ಲವೆಂದರೂ, 2020ಕ್ಕೆ ಕನಿಷ್ಟ ಮೂರ್‍ನಾಲ್ಕು ಚಿತ್ರಗಳ ಮೂಲಕ ಬ್ಯಾಕ್ ಟು ಬ್ಯಾಕ್ ಎಂಟ್ರಿಕೊಡುವ ನಿರೀಕ್ಷೆಯಲ್ಲಿದ್ದಾರೆ ಪ್ರಜ್ವಲ್ ದೇವರಾಜ್.