ಸಂತೋಷನಿಗೆ ಮದುವೆಯಾಗಿ ಆರು ವರ್ಷಗಳು ಕಳೆದಿದ್ದರೂ, ಕೌಟುಂಬಿಕ ಜೀವನದಲ್ಲಿ ಸಂತೋಷ ಎಂಬುದು ಮರೀಚಿಕೆ. ಮನೆಯವರು ಇಷ್ಟಪಟ್ಟು ಮಾಡಿರುವ ಮದುವೆ, ಹೆಂಡತಿಯ ಕಟ್ಟು ಪಾಡುಗಳಿಗೆ ಗಂಟು ಬಿದ್ದು ಬದುಕುತ್ತಿರುವ ಸಂತೋಷನ ಪಾಡು ಹೇಳತೀರದು. ಇಂಥ ಸಂತೋಷನ ಜೀವನದಲ್ಲಿ, ಸ್ನೇಹಿತನೊಬ್ಬನ “ಬ್ಯಾಚುಲರ್ ಪಾರ್ಟಿ’ಗೆ ಬರುವ ಆಹ್ವಾನ ಸಂತೋಷನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ನೋಡು ನೋಡುತ್ತಿದ್ದಂತೆ “ಬ್ಯಾಚುಲರ್ ಪಾರ್ಟಿ’ಗೆ ದೊಡ್ಡ ಸ್ನೇಹಿತರ ಬಳಗವೇ ಬಂದು ಸೇರಿಕೊಳ್ಳುತ್ತದೆ. ರಾತ್ರಿ ಬೆಂಗಳೂರಿನಲ್ಲಿ ಶುರು ವಾಗುವ “ಬ್ಯಾಚುಲರ್ ಪಾರ್ಟಿ’ ಬೆಳಗಾಗುವುದ ರೊಳಗೆ ಬ್ಯಾಂಕಾಕ್‌ಗೆ ಬಂದು ನಿಲ್ಲುತ್ತದೆ! ಅದು ಹೇಗೆ ಎಂಬುದು ಗೊತ್ತಾಗ ಬೇಕಾದರೆ, ನೀವು ಕೂಡ “ಬ್ಯಾಚುಲರ್ ಪಾರ್ಟಿ’ಗೆ ಜಾಯಿನ್ ಆಗಬಹುದು.
ಬಿಡುಗಡೆಗೂ ಮೊದಲೇ ಚಿತ್ರತಂಡ ಹೇಳಿಕೊಂಡಂತೆ, “ಬ್ಯಾಚುಲರ್ ಪಾರ್ಟಿ’ ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಸಿನಿಮಾ. ಸನ್ನಿವೇಶವೊಂದರಲ್ಲಿ ಜೊತೆಯಾಗುವ ಸ್ನೇಹಿತರ “ಬ್ಯಾಚುಲರ್’ ಜರ್ನಿ ಹೇಗೆಲ್ಲ ತಿರುವುಗಳನ್ನು ಪಡೆದುಕೊಂಡು ಸಾಗುತ್ತದೆ ಎಂಬುದೇ ಸಿನಿಮಾದ ಕಥೆಯ ಒಂದು ಎಳೆ.
ಇಂದಿನ ಕೌಟುಂಬಿಕ ಜೀವನ, ಯಾಂತ್ರಿಕ ಬದುಕು, ಸಾಮಾಜಿಕ ಕಟ್ಟುಪಾಡುಗಳನ್ನು ಇಟ್ಟುಕೊಂಡು ಅದನ್ನು ಹಾಸ್ಯಭರಿತವಾಗಿ “ಬ್ಯಾಚುಲರ್ ಪಾರ್ಟಿ’ ಸಿನಿಮಾ ದಲ್ಲಿ ತೆರೆಮೇಲೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಸಿನಿಮಾದ ಕಥೆಯ ಎಳೆ ಮತ್ತು ನೋಡುಗರಿಗೆ ಅಲ್ಲಲ್ಲಿ ಕಚಗುಳಿಯಿಡುವ ಸಂಭಾಷಣೆ “ಬ್ಯಾಚುಲರ್ ಪಾರ್ಟಿ’ ಪ್ಲಸ್ ಪಾಯಿಂಟ್.
ಮೊದಲರ್ಧ ವೇಗವಾಗಿ, ಅಚ್ಚುಕಟ್ಟಾಗಿ ಸಾಗಿ ಮಧ್ಯಂತರದ ವರೆಗೆ ಕರೆದುಕೊಂಡು ಬರುವ ಚಿತ್ರಕಥೆ, ದ್ವಿತೀಯಾರ್ಧದಲ್ಲಿ ತನ್ನ ಟ್ರ್ಯಾಕ್ ಬದಲಿಸುತ್ತದೆ. ಆರಂಭದಲ್ಲಿದ್ದ ವೇಗ ಕೊಂಚ ಕಡಿಮೆಯಾದಂತೆ ಭಾಸವಾದರೂ ಚಿತ್ರ ಬೋರ್ ಹೊಡೆಸುವುದಿಲ್ಲ ಎಂಬುದು ಚಿತ್ರದ ಪ್ಲಸ್.
ಇನ್ನು ನಟರಾದ ದಿಗಂತ್, ಲೂಸ್‌ಮಾದ ಯೋಗಿ ಸ್ನೇಹಿತರಾಗಿ, ಅಚ್ಯುತ ಕುಮಾರ್ ಪಿ.ಟಿ ಮಾಸ್ಟರ್ ಆಗಿ “ಬ್ಯಾಚುಲರ್ ಪಾರ್ಟಿ’ ಯನ್ನು ಆರಂಭದಿಂದ ಅಂತ್ಯದವರೆಗೂ ಹೊತ್ತು ಸಾಗಿದ್ದಾರೆ. ಮೂವರು ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುತ್ತಾರೆ.
ಛಾಯಾಗ್ರಹಣ “ಬ್ಯಾಚುಲರ್ ಪಾರ್ಟಿ’ಯ ಅಂದವನ್ನು ಹೆಚ್ಚಿಸಿದ್ದರೆ, ಒಂದೆರಡು ಹಾಡುಗಳು “ಪಾರ್ಟಿ’ ಮುಗಿದ ಮೇಲೂ ಗುನುಗುವಂತಿದೆ. ವಾರಾಂತ್ಯದಲ್ಲಿ ಒಮ್ಮೆ ಕೊಂಚ ರಿಲ್ಯಾಕ್ಸ್ ಮೂಡ್ ಬಯಸುವವರು “ಬ್ಯಾಚುಲರ್ ಪಾರ್ಟಿ’ಗೆ ಒಂದು ವಿಸಿಟ್ ಹಾಕಿಬರಲು ಅಡ್ಡಿಯಿಲ್ಲ.
ಜಿ.ಎಸ್.ಕೆ.ಸುಧನ್