ಕಾಲೇಜು ಆರಂಭವಾಗುತ್ತಿದ್ದ ದಿನಗಳಲ್ಲಿ ಯಾವುದೋದೂರದ ಊರಿಂದ ಬಂದು ಕಾಲೇಜಿನಕಾರಿಡಾರಿನಲ್ಲಿ ಅನಾಥನಂತೆ ನಿಂತ ಕ್ಷಣ. ಕೈಯಲ್ಲಿ ಒಂದು ಲಗೇಜ್ ಬ್ಯಾಗ್, ಬೆನ್ನ ಮೇಲೆ ಕಾಲೇಜ್ ಬ್ಯಾಗ್ ಹಾಕಿಕೊಂಡು, ಯಾರಾದರೂ ಸಿಕ್ಕಾರು ಎಂಬ ಹುಡುಕಾಟದಲ್ಲಿದ್ದಾಗಲೇ, ಇದ್ದಕ್ಕಿದ್ದಂತೆ ಬಂದವನೊಬ್ಬ- ಅರೆ, ನಮ್ಮೂರಿನ ಹತ್ರದವನಲ್ವಾ ನೀನು? ಇವತ್ತು ಬಂದ್ಯಾ? ಬಾ ಹೋಗೋಣ.. ನಾನು ಬಂದು ಎರಡು ದಿನ ಆಯ್ತು. “ನಮ್ಮಊರಿನ ಕಡೆಯವರೇ ಒಂದು ರೂಮ್ ಮಾಡಿದಾರೆ’ ಅಂದಾಗ, ದೇವರೆಂಬುವವನು ಕೈ ಹಿಡಿದುಕೊಂಡಂಥ ಭಾವ.
ಆತನ ಹೆಜ್ಜೆ ಹಿಂಬಾಲಿಸುವಾಗ, ಆ ಕ್ಷಣಕ್ಕೆ ಆತ ಆಜನ್ಮ ಬಂಧು, ಆಪತ್ಕಾಲದ ಗೆಳೆಯ ಎಂದೆಲ್ಲಾ ಅನಿಸಿದ್ದು ಸುಳ್ಳಲ್ಲ. ಹೀಗೆ, ಇಬ್ಬರಿದ್ದ ರೂಮಿನಲ್ಲಿ ಇಂತಹ ಸಂಕಷ್ಟದವರೇ ಇನ್ನಿಬ್ಬರು ಬಂದು ಸೇರಿಕೊಂಡು ಈ ಎಲ್ಲ ಸಂಬಂಧಗಳು ಒಂದೆಂಬಂತೆ, ರೂಮಿನಲ್ಲಿಯೇ ಅಡುಗೆ ಮಾಡಿಕೊಂಡು, ಕೆಲಸಗಳನ್ನು ಹಂಚಿಕೊಂಡು, ಓದು- ಬರಹದಲ್ಲಿ ತೊಡಗಿಕೊಂಡು ಕಾಲ ಕಳೆಯುತ್ತಿರುವಾಗ, ರೂಮಿಗೆ ಬೇಕಾದ ಒಂದೊಂದೇ ಸಾಮಾನುಗಳನ್ನು ಒಮ್ಮೊಮ್ಮೆ ಎಲ್ಲರೂ ಹಣ ಸೇರಿಸಿ ತರುತ್ತಿದ್ದರು. ರಜೆಯಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಒಬ್ಬರಊರಿಗೆ ಒಂದೊಂದು ಬಾರಿಯಂತೆ ಎಲ್ಲರ ಊರುಗಳಿಗೂ ಹೋಗಿ ಬಂದದ್ದುಂಟು. ಈ ಓಡಾಟ ಎಲ್ಲರನ್ನೂ ಇನ್ನಷ್ಟು ಹತ್ತಿರಕ್ಕೆ ತಂದಿತ್ತು.
ಆ ಪುಟ್ಟರೂಮಿನಲ್ಲಿಯೇ ದಿನಗಳು,ವಾರಗಳು, ತಿಂಗಳುಗಳು ಬೇಗ ಬೇಗ ಕಳೆದುಹೋದವು. ಪರೀಕ್ಷೆಗಳೆಲ್ಲ ಮುಗಿದು ತಮ್ಮ ತಮ್ಮ ಊರಿಗೆ ಹೋಗುವ ದಿನದಂದು, ಮತ್ತೆ ಎಲ್ಲರ ಕಣ್ಣಲ್ಲೂ ತೆಳುಪರದೆ. ಮೊದಲ ದಿನ ಬಂದಾಗ ಇದ್ದ ಅಪರಿಚಿತ ಕಣ್ಣೀರು ಈಗ ಆಪ್ತತೆಯನ್ನು ರೆಪ್ಪೆಗೆ ಅಂಟಿಸಿದೆ. ಆಗ ಗಕ್ಕನೇ ಕಣ್ಣೆವೆ ದಾಟುತ್ತಿದ್ದ ನೀರ ಹನಿ, ಈಗ ಕಣ್ಣ ಬಯಲಿನಲ್ಲಿಯೂ ಮಡುಗಟ್ಟುತ್ತದೆ. “ತಾನು ಅತ್ತರೆ ಅವನೂ ಅಳುತ್ತಾನೆಂದು’ ಒಬ್ಬರಿಗೊಬ್ಬರು ಸಹಿಸಿಕೊಂಡದ್ದೇ ಹೆಚ್ಚು. ಹೀಗಿವಾಗಲೇ, ಓದಿನ ದಿನಗಳಲ್ಲಿಖರೀದಿಸಿದ್ದ ಸಾಮಾನುಗಳಲ್ಲಿ ಯಾರು ಯಾವುದನ್ನು ತೆಗೆದುಕೊಳ್ಳಬೇಕು ಎಂಬ ವಿಷಯವಾಗಿ ಚರ್ಚೆ ಶುರುವಾಯಿತು. ಎಲ್ಲರೂ ಸಮನಾಗಿ ಹಣ ಹಾಕಿ ಖರೀದಿಸಿದ್ದುದರಿಂದ ಯಾವುದೇ ವಸ್ತುವಿಗೆ ಒಬ್ಬರೇ ಮಾಲೀಕರಾಗುವುದು ಸಾಧ್ಯವಿರಲಿಲ್ಲ.
ಕೆಲ ಹೊತ್ತು ಈ ವಿಷಯದ ಚರ್ಚೆ ನಡೆದು ಯಾಕೋ ಮನಸ್ಸುಗಳು ಒಡೆದು ಹೋಗುತ್ತಿವೆ ಅನಿಸಿದಾಗ, ಒಬ್ಬ ರೂಮಿನಲ್ಲಿದ್ದ ಸಾಮಾನುಗಳನ್ನು ಎಣಿಸಿ, ಅವನ್ನು ಸಾಲಾಗಿಜೋಡಿಸಿಟ್ಟು ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವಂತೆಹೇಳಿ ಹಿಂದಕ್ಕೆ ಸರಿದುಕೊಂಡ. ಅದರಲ್ಲಿಯೂ ವಸ್ತುಗಳ ಆಯ್ಕೆ ವಿಚಾರದಲ್ಲಿ ಒಮ್ಮತ ಸಾಧ್ಯವಾಗಲಿಲ್ಲ.
ಪರಿಣಾಮ, ಅಷ್ಟೂ ದಿನ ಜೊತೆಗಿದ್ದವರ ಮುಖಗಳು ಬಿಗಿದು ಕೊಂಡಂತಾದವು. ಇದನ್ನು ಗಮನಿಸಿದ ಮತ್ತೂಬ್ಬ, ಅಲ್ಲಿದ್ದ ವಸ್ತುಗಳನ್ನು ಮತ್ತೂಮ್ಮೆ ಪುನರ್ವಿಂಗಡಣೆ ಮಾಡಿದ. ಅದುಇನ್ನೊಬ್ಬನಿಗೆ ಸರಿ ಕಾಣಲಿಲ್ಲ. ಹೀಗೇ ಸ್ವಲ್ಪ ಹೊತ್ತು ಮುಂದುವರಿದಾಗ ಮತ್ತೂಬ್ಬ ಗೆಳೆಯ- “ಈಗ ಎಲ್ಲರೂ ಅಡುಗೆ ಮಾಡಿಕೊಂಡು ಊಟ ಮಾಡೋಣ. ಆಮೇಲೆ ನೋಡೋಣ’ ಎನ್ನುತ್ತಾ ತರಕಾರಿ ಹಚ್ಚಲು ಕುಳಿತ. ಉಳಿದ ಮೂವರೂ ಉಳಿದ ಕೆಲಸ ಹಂಚಿಕೊಂಡರು. ಅಡುಗೆ ಮಾಡಿಕೊಂಡು, ಎಂದಿನಂತೆ ಎದುರುಬದುರು ಕುಳಿತು ಊಟ ಮಾಡಿದರು.
ಯಾಕೋ ಈ ಸಲ ಖಾರದ ಪುಡಿ ಬಿದ್ದಂತಾಗಿ ಕಣ್ಣೀರು ಹೊರಬಂತು. ಆ ದಿನ ಊರಿಗೆ ಹೋಗದೆ, ರಾತ್ರಿ ಸಿನಿಮಾ ನೋಡಿ ಬೆಳಗ್ಗೆ ಹೋಗುವ ನಿರ್ಧಾರ ಮಾಡಿದರು. ಸಿನಿಮಾ ನೋಡಿಕೊಂಡು ರೂಮಿಗೆ ಬಂದವರು, ಇಡೀ ರಾತ್ರಿಯನ್ನು ಮಾತಾಡುತ್ತಾ ಕಳೆದರು. ಮರುದಿನ, ಎಲ್ಲ ಮನಸ್ಸುಗಳೂ ಒಂದಾಗಿದ್ದವು. ಹಿಂದಿನ ದಿನ ತಮ್ಮೊಳಗೆ ಸುಳಿದು ಹೋದ ಒಂದು ಕ್ಷಣದ ಯೋಚನೆಗೆ ಬೇಸರಗೊಂಡರು. ತೀರಾ ಸಣ್ಣಪುಟ್ಟ ವಸ್ತುಗಳನ್ನು ಹಂಚಿಕೊಂಡು ಗಳಿಸುವುದಾದರೂ ಏನಿತ್ತು? ಅದರ ಆಸೆಯಲ್ಲಿ ಯಾರಾದರೂ ದುಡುಕಿ ಮಾತಾಡಿದ್ದರೆ ಈ ಸಂಬಂಧ ಏನಾಗಿಬಿಡುತ್ತಿತ್ತು ಎಂಬ ಯೋಚಿಸಿ, ಸದ್ಯ, ಅನಾಹುತ ತಪ್ಪಿತು ಅಂದುಕೊಂಡರು. “ಎಲ್ಲ ಸಾಮಾನುಗಳನ್ನೂ ಒಂದು ಚೀಲದಲ್ಲಿ ಹಾಕಿ, ಈ ರೂಮ್‌ಗೆ ಹೊಸದಾಗಿ ಬರುವವರಿಗೆಕೊಟ್ಟುಬಿಡಿ’ ಎಂದು ಮನೆಯ ಓನರ್ ಗೆ ಹೇಳುವಾಗ ಮತ್ತೂಮ್ಮೆ ಭಾವುಕರಾದರು. ಈ ಸಲ ಎಲ್ಲರ ಕೈಗಳಲ್ಲಿದ್ದ ಬ್ಯಾಗುಗಳಲ್ಲಿ ನೆನಪುಗಳು ತುಂಬಿಕೊಂಡಿದ್ದವು. ಒಬ್ಬರ ಹೆಗಲ ಮೇಲೆ ಇನ್ನೊಬ್ಬರ ಬ್ಯಾಗುಗಳಿದ್ದವು. ಬಸ್ ನಿಲ್ದಾಣದಿಂದ ಆಯಾ ಊರಿಗೆ ಹೊರಟ ಬಸ್ಸುಗಳಲ್ಲಿ ಮೌನ ಆವರಿಸಿತು.
-ಸೋಮು ಕುದರಿಹಾಳ, ಗಂಗಾವತಿ